ADVERTISEMENT

ದಾವಣಗೆರೆ ಗಾಜಿನಮನೆಗೆ ಶುಲ್ಕ ನಿಗದಿ

ಉದ್ಯಾನ ನಿರ್ವಹಣೆಗೆ ಅನುದಾನ ಸಂಗ್ರಹಕ್ಕೆ ತೋಟಗಾರಿಕೆ ಇಲಾಖೆ ಕ್ರಮ

ವಿನಾಯಕ ಭಟ್ಟ‌
Published 2 ಆಗಸ್ಟ್ 2019, 5:51 IST
Last Updated 2 ಆಗಸ್ಟ್ 2019, 5:51 IST
ದಾವಣಗೆರೆಯ ಗಾಜಿಮನೆಯ ವಿಹಂಗಮ ನೋಟ
ದಾವಣಗೆರೆಯ ಗಾಜಿಮನೆಯ ವಿಹಂಗಮ ನೋಟ   

ದಾವಣಗೆರೆ: ನಿರ್ವಹಣೆ ಹಾಗೂ ಅಭಿವೃದ್ಧಿಗೆ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯು ನಗರದ ಗಾಜಿನಮನೆಯ ವೀಕ್ಷಣೆ ಹಾಗೂ ಚಿತ್ರೀಕರಣಕ್ಕೆ ಶುಲ್ಕ ನಿಗದಿಗೊಳಿಸಲಾಗಿದೆ. ಇದೇ ಶನಿವಾರದಿಂದಲೇ (ಆ. 3) ಶುಲ್ಕ ವಸೂಲಿ ಮಾಡಲು ಇಲಾಖೆಯು ಸಿದ್ಧತೆ ಮಾಡಿಕೊಂಡಿದೆ.

ಪ್ರವೇಶ ಶುಲ್ಕ ಹಾಗೂ ಚಿತ್ರೀಕರಣ, ಸಭೆ–ಸಮಾರಂಭ ಸೇರಿ ವಿವಿಧ ಚಟುವಟಿಕೆಗೆ ಶುಲ್ಕ ನಿಗದಿಗೊಳಿಸಿ ತೋಟಗಾರಿಕೆ ಇಲಾಖೆಯ ಅಧೀನ ಕಾರ್ಯದರ್ಶಿ ಅಮರೇಶ ಅವರು ಜುಲೈ 31ರಂದು ಆದೇಶ ಹೊರಡಿಸಿದ್ದಾರೆ. ಸಂಗ್ರಹಿಸಿದ ಶುಲ್ಕದ ಮೊತ್ತವನ್ನು ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿಷ್ಠಾನದ ಖಾತೆಗೆ ಜಮೆ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

‘ದರ ನಿಗದಿಗೊಳಿಸಿ ಕಳುಹಿಸಿದ್ದ ಪ್ರಸ್ತಾವಕ್ಕೆ ಇಲಾಖೆ ಒಪ್ಪಿಗೆ ನೀಡಿದೆ. ಶುಲ್ಕದ ದರಪಟ್ಟಿಯ ಫಲಕವನ್ನು ಶುಕ್ರವಾರವೇ ಗಾಜಿನಮನೆಯ ಪ್ರವೇಶ ದ್ವಾರದ ಬಳಿ ಅಳವಡಿಸಲಾಗುವುದು. ಶನಿವಾರದಿಂದಲೇ ಶುಲ್ಕ ವಸೂಲಿ ಮಾಡಲು ನಿರ್ಧರಿಸಲಾಗಿದ್ದು, ಇದಕ್ಕೆ ಅಗತ್ಯವಿರುವ ಟಿಕೆಟ್‌ಗಳನ್ನು ಮುದ್ರಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಬಿ. ಲಕ್ಷ್ಮೀಕಾಂತ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ನಿರ್ವಹಣೆಗೆ ಹಣ ಬಳಕೆ: ‘ಸಂಗ್ರಹಿಸಿದ ಶುಲ್ಕದ ಮೊತ್ತವನ್ನು ಸದ್ಯಕ್ಕೆ ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿಷ್ಠಾನದ ಖಾತೆಗೆ ಜಮೆ ಮಾಡಲಾಗುವುದು. ಇಲ್ಲಿ ಸಂಗ್ರಹವಾದ ಹಣವನ್ನು ಗಾಜಿನಮನೆಯ ನಿರ್ವಹಣೆಗೆ ಮರಳಿ ನೀಡುವುದಾಗಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ. ಉದ್ಯಾನಕ್ಕೆ ನೀರುಣಿಸಲು ಮೋಟರ್‌ ಬಳಕೆ ಸೇರಿ ಪ್ರತಿ ತಿಂಗಳು ₹ 45 ಸಾವಿರ ವಿದ್ಯುತ್‌ ಬಿಲ್‌ ಬರುತ್ತಿದೆ. ಉದ್ಯಾನ ನಿರ್ವಹಣೆ, ಹೊಸ ಹೂವಿನ ಗಿಡಗಳನ್ನು ನೆಡುವುದು, ಔಷಧಗಳನ್ನು ಖರೀದಿಸಲು ಶುಲ್ಕ ವಸೂಲಿಯಿಂದ ಬಂದ ಅನುದಾನವನ್ನು ಬಳಸಿಕೊಳ್ಳಲು ಅನುಕೂಲವಾಗಲಿದೆ. ಸ್ಥಳೀಯವಾಗಿ ಅನುದಾನ ಸಂಗ್ರಹಿಸಲು ಆರಂಭಿಸಿದ ಮೇಲೆ ಗಾಜಿನಮನೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಬಹುದಾಗಿದೆ. ಆವರಣದಲ್ಲಿ ರಿಫ್ರೆಶ್‌ಮೆಂಟ್‌ ಘಟಕವನ್ನೂ ತೆರೆಯಲು ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ಟೆಂಡರ್‌ ಕರೆಯಲಾಗುವುದು’ ಎಂದು ಲಕ್ಷ್ಮೀಕಾಂತ ವಿವರಿಸಿದರು.

‘ಸ್ಮಾರ್ಟ್‌’ ಮೆರುಗು: ‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಗಾಜಿನಮನೆ ಆವರಣದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಟನಲ್‌ ಅಕ್ವೇರಿಯಂ, ಫಿಶ್‌ ಕಿಡ್ಸ್‌, ಸಂಗೀತ ಕಾರಂಜಿ ಹಾಗೂ ಗಾಜಿನಮನೆಗೆ ವಿದ್ಯುತ್‌ ದೀಪ ಅಳವಡಿಕೆ ಮಾಡಲು ಸಮಗ್ರ ಯೋಜನೆ (ಡಿಪಿಆರ್‌) ಸಿದ್ಧಪಡಿಸಲಾಗುತ್ತಿದೆ. ಒಂದು ವರ್ಷದ ಅವಧಿಯಲ್ಲಿ ಕಾಮಗಾರಿ ಕೈಗೊಳ್ಳುವ ನಿರೀಕ್ಷೆ ಇದೆ. ಈಗಾಗಲೇ ನಾಲ್ಕು ಇ–ಶೌಚಾಲಯಗಳನ್ನು ಅಳವಡಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಲಕ್ಷ್ಮೀಕಾಂತ ತಿಳಿಸಿದರು.

ಶುಲ್ಕ ವಿವರ (ಒಂದು ದಿನಕ್ಕೆ)

ವಿವರ–ದರ (₹)

ವಯಸ್ಕರು (ಒಬ್ಬರಿಗೆ)–20

ಮಕ್ಕಳು–10

ದ್ವಿಚಕ್ರ ವಾಹನ–10

3, 4 ಚಕ್ರಗಳ ವಾಹನ–20

ಪ್ರಿ–ಪೋಸ್ಟ್‌ ವೆಡ್ಡಿಂಗ್‌ ಶೂಟಿಂಗ್‌ –10,000

ಧಾರಾವಾಹಿ, ಕಿರುಚಿತ್ರ ಚಿತ್ರೀಕರಣ–10,000

ಚಲನಚಿತ್ರ ಚಿತ್ರೀಕರಣ–25,000

ಡ್ರೋನ್‌ ಕ್ಯಾಮೆರಾ ಚಿತ್ರೀಕರಣ–5,000

ಕೃಷಿ, ತೋಟಗಾರಿಕೆ ಸಂಬಂಧಿಸಿದ ಇಲಾಖೆಗಳ ತರಬೇತಿ ಕಾರ್ಯಕ್ರಮ–5,000

ವಿಶ್ವವಿದ್ಯಾಲಯಗಳ ಕಾರ್ಯಕ್ರಮಗಳು–5,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.