ADVERTISEMENT

ಜಗಳೂರು: ಕಾನನಕಟ್ಟೆಯಲ್ಲಿ ನಿಗೂಢ ಜ್ವರ: ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:14 IST
Last Updated 23 ಜೂನ್ 2022, 2:14 IST
ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ನಿಗೂಢ ಜ್ವರದ ಹಿನ್ನೆಲೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್ ನೇತೃತ್ವದಲ್ಲಿ ವೈದ್ಯರು ಗ್ರಾಮದ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು
ಜಗಳೂರು ತಾಲ್ಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ನಿಗೂಢ ಜ್ವರದ ಹಿನ್ನೆಲೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್ ನೇತೃತ್ವದಲ್ಲಿ ವೈದ್ಯರು ಗ್ರಾಮದ ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು   

ಜಗಳೂರು: ತಾಲ್ಲೂಕಿನ ಕಾನನಕಟ್ಟೆ ಗ್ರಾಮದಲ್ಲಿ ಹಲವು ದಿನಗಳಿಂದ ನಿಗೂಢ ಜ್ವರ ಹಾಗೂ ಕೈಕಾಲು ನೋವಿನಿಂದ ಕೆಲ ಗ್ರಾಮಸ್ಥರು ನರಳುತ್ತಿದ್ದಾರೆ.

ಕೈಕಾಲು ನೋವು, ಹೊಟ್ಟೆನೋವು, ವಾಂತಿ–ಭೇದಿಯಿಂದ ಗ್ರಾಮಸ್ಥರು ನರಳುತ್ತಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ಇದೆ. ಚರ್ಮದ ತುರಿಕೆ, ಹೊಟ್ಟೆ ಉಬ್ಬರ, ಮೈಕೈ ನೋವಿನಿಂದ ಇಪ್ಪತ್ತಕ್ಕೂ ಹೆಚ್ಚು ಗ್ರಾಮಸ್ಥರು ಹಾಸಿಗೆ ಹಿಡಿದಿದ್ದಾರೆ. ಒಂದು ವಾರದಿಂದ ಜ್ವರ ಕಾಡುತ್ತಿದ್ದು, ಆಸ್ಪತ್ರೆಗೂ ಹೋಗದೆ ಬಹುತೇಕರು ಮನೆಯಲ್ಲೇ ಇದ್ದಾರೆ.

ವೈದ್ಯರ ತಂಡ ಭೇಟಿ: ಜ್ವರದ ಕಾರಣ ಜಿಲ್ಲಾ ಮಲೇರಿಯಾ ವೈದ್ಯಾಧಿಕಾರಿ ಡಾ. ನಟರಾಜ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ನೇತೃತ್ವದ ವೈದ್ಯರ ತಂಡ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ರೋಗಿಗಳ ಪರಿಶೀಲನೆ ನಡೆಸಿತು.

ADVERTISEMENT

‘ಗ್ರಾಮದ ಪ್ರತಿ ಮನೆಗೂ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸಲಾಗಿದೆ. ಗ್ರಾಮದಲ್ಲಿ ಸಾಮೂಹಿಕವಾಗಿ ಜ್ವರ ಕಾಣಿಸಿಕೊಂಡಿಲ್ಲ. ಹತ್ತು ಜನರು ಮೈಕೈ ನೋವಿನಿಂದ ನರಳುತ್ತಿದ್ದಾರೆ. ಎಲ್ಲಾ ರೋಗಪೀಡಿತರ ರಕ್ತದ ಮಾದರಿಯನ್ನು ಸಂಗ್ರಹಿಸಿ ಜಿಲ್ಲಾ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಗುರುವಾರವೂ ವೈದ್ಯರ ತಂಡ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಲಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಮಾಹಿತಿ ನೀಡಿದರು.

‘ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರಿನ ಪೈಪ್‌ಲೈನ್ ಕೆಲವೆಡೆ ಒಡೆದುಹೋಗಿದೆ. ಪೈಪ್‌ಲೈನ್‌ಗೆ ಕಲುಷಿತ ನೀರು ಸೇರಿರುವ ಸಾಧ್ಯತೆ ಇದೆ. ಈ ನೀರು ಸೇವನೆಯಿಂದ ಆರೋಗ್ಯದಲ್ಲಿ ಏರುಪೇರಾಗಿರುವ ಸಾಧ್ಯತೆ ಇದೆ. ನೀರಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ನಂತರ ಕಾರಣ ತಿಳಿಯಲಿದೆ. 10 ಜನರು ಮೈಕೈ ನೋವಿನಿಂದ ಬಳಲುತ್ತಿದ್ದು, ಉಳಿದವರು ಆರೋಗ್ಯವಾಗಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.