ಜಗಳೂರು: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆ–ಗಾಳಿಗೆ ಬಿಳಿಚೋಡು, ದೇವಿಕೆರೆ ಆಸುಪಾಸಿನಲ್ಲಿ ನೂರಾರು ದೊಡ್ಡ ಸಾಲು ಮರಗಳು ಹಾಗೂ ಬಾಳೆತೋಟ ನೆಲಕ್ಕುರುಳಿದ್ದು, ತರಕಾರಿ ಬೆಳೆಗಳಿಗೆ ಅಪಾರ ಹಾನಿಯಾಗಿದೆ.
ರಸ್ತೆ ಮಾಚಿಕೆರೆಯಿಂದ ತಾಲ್ಲೂಕಿನ ಗಡಿಗ್ರಾಮವಾದ ಮುಗ್ಗಿದರಾಗಿಹಳ್ಳಿಯವರೆಗೆ ಭಾರಿ ಮಳೆಗಾಳಿಯಿಂದಾಗಿ ಹಲವು ಹಳ್ಳಿಗಳಲ್ಲಿ ಕೆಲವು ಮನೆಗಳ ಚಾವಣಿಗಳು ಹಾರಿಹೋಗಿವೆ. ಅಡಿಕೆ ಮತ್ತು ಬಾಳೆತೋಟಗಳಿಗೆ ಹಾನಿಯಾಗಿದೆ. ದಶಕಗಳಷ್ಟು ಹಳೆಯದಾದ ಬೇವು ಮುಂತಾದ ಮರಗಳು ರಸ್ತೆಗೆ ಉರುಳಿಬಿದ್ದು, ರಾತ್ರಿಯಿಡೀ ದಾವಣಗೆರೆ-ಜಗಳೂರು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಲ್ಲಲ್ಲಿ ಅಡ್ಡಿಯಾಗಿತ್ತು.
ಭಾನುವಾರ ಬೆಳಿಗ್ಗೆ ಮುಗ್ಗಿದರಾಗಿಹಳ್ಳಿಯಿಂದ ಬಗ್ಗೇನಹಳ್ಳಿ ಯವರೆಗೆ ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಲಾಗಿದೆ. ಬಿಳಿಚೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ಮರದ ಕೊಂಬೆಗಳು ಮುರಿದು ಕಾಂಪೌಂಡ್ ಮೇಲೆ ಬಿದ್ದಿದ್ದು, ಹಾನಿಯಾಗಿದೆ. ಬಿಳಿಚೋಡು ಹೋಬಳಿಯಲ್ಲಿ ಉತ್ತಮ ವಾಗಿ ಮಳೆಯಾಗಿದ್ದು, ಬಿಳಿಚೋಡು ಗ್ರಾಮದ ಹಗರಿ ಹಳ್ಳಕ್ಕೆ ನಿರ್ಮಿಸಿರುವ ಚೆಕ್ ಡ್ಯಾಂ ತುಂಬಿ ಹರಿಯುತ್ತಿದೆ.
ಕಾಟೇನಹಳ್ಳಿ ಗ್ರಾಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ರಾಜಪ್ಪ ಅವರ 3 ಎಕರೆ ಬಾಳೆತೋಟ ಮತ್ತು ಬೈರೇಗೌಡ ಅವರ ಎರಡು ಎಕರೆ ಬಾಳೆತೋಟ ಮಳೆಗಾಳಿಗೆ ಸಿಲುಕಿ ಧರೆಗುರುಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.