ADVERTISEMENT

ದೇಶದ್ರೋಹದಡಿ ಪ್ರಕರಣ ದಾಖಲಿಸಿ: ರೇಣುಕಾಚಾರ್ಯ

ಸಂಘರ್ಷಕ್ಕೆ ಕುಮ್ಮಕ್ಕು: ಇಬ್ರಾಹಿಂ, ಜಮೀರ್, ‌ತನ್ವೀರ್ ಸೇಠ್ ವಿರುದ್ಧ ರೇಣುಕಾಚಾರ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2022, 14:04 IST
Last Updated 6 ಫೆಬ್ರುವರಿ 2022, 14:04 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ಹೊನ್ನಾಳಿ: ‘ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬರಬೇಕು ಎಂದು ಪ್ರಚೋದಿಸಿ ಕೋಮು ಸಂಘರ್ಷಕ್ಕೆ ಕುಮ್ಮಕ್ಕು ನೀಡುತ್ತಿರುವ ಸಿ.ಎಂ. ಇಬ್ರಾಹಿಂ, ಜಮೀರ್ ಅಹ್ಮದ್, ತನ್ವೀರ್ ಸೇಠ್ ಮತ್ತು ಯು.ಟಿ.ಖಾದರ್ ವಿರುದ್ಧ ದೇಶದ್ರೋಹದಡಿ ಪ್ರಕರಣ ದಾಖಲಿಸಬೇಕು’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು ಮುಖ್ಯಮಂತ್ರಿಯನ್ನು ಒತ್ತಾಯಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕುಂದಾಪುರದಲ್ಲಿ 6 ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಹಿಜಾಬ್ ಪ್ರಕರಣ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ. ಇದರ ಹಿಂದೆ ಅಂತರರಾಷ್ಟ್ರೀಯ ಮಟ್ಟದ ಉಗ್ರಗಾಮಿ ಸಂಘಟನೆಗಳ ಕೈವಾಡವಿದೆ. ಕರ್ನಾಟಕವನ್ನು ತಾಲಿಬಾನ್ ಆಗಲು ಬಿಡುವುದಿಲ್ಲ. ಅಮಾಯಕ ವಿದ್ಯಾರ್ಥಿನಿಯರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೊರಟಿರುವ ಇಂಥವರು ದೇಶದಲ್ಲೇ ಇರಬಾರದು’ ಎಂದು ಹೇಳಿದರು.

‘ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ಸಚಿವರಾಗಿದ್ದ ಅಜೀಜ್ ಸೇಠ್ ಅವರು ಕೋಮುಗಲಭೆ ಸೃಷ್ಟಿಸಿದ್ದರಿಂದ ಅವರು ಅಧಿಕಾರ ಕಳೆದುಕೊಳ್ಳ
ಬೇಕಾಯಿತು. ಈಗ ಅವರ ಮಗ ತನ್ವೀರ್ ಸೇಠ್ ಕೂಡಾ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಕೋಮುಸಂಘರ್ಷಕ್ಕೆ ಸಂಚು ನಡೆಸಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಶಾಲಾ–ಕಾಲೇಜುಗಳಲ್ಲಿ ಧರ್ಮ, ಜಾತಿ ನುಸುಳಿರಲಿಲ್ಲ. ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಬರುತ್ತಿದ್ದರು. ಹಿಜಾಬ್ ಧರಿಸಲು ಕುಮ್ಮಕ್ಕು ಕೊಟ್ಟಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದೆ. ಕೋಮುಸಂಘರ್ಷ ನಡೆಸಿದರೆ ರಾಜಕೀಯ ಲಾಭ ಪಡೆದುಕೊಳ್ಳಬಹುದು ಎಂದುಕೆಲವರು ಲೆಕ್ಕಾಚಾರ ಹಾಕಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.