ADVERTISEMENT

ವಾರದೊಳಗೆ ನಗರದ ರಸ್ತೆ ಗುಂಡಿ ಮುಚ್ಚಿ: ಜಿಲ್ಲಾಧಿಕಾರಿ ಶಿವಮೂರ್ತಿ ಸೂಚನೆ

ರಸ್ತೆ ಸುರಕ್ಷತಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2019, 13:11 IST
Last Updated 15 ಮಾರ್ಚ್ 2019, 13:11 IST
ಜಿ.ಎನ್‌. ಶಿವಮೂರ್ತಿ
ಜಿ.ಎನ್‌. ಶಿವಮೂರ್ತಿ   

ದಾವಣಗೆರೆ: ನಗರದ ಎಲ್ಲಾ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎನ್‌. ಶಿವಮೂರ್ತಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಗುಂಡಿಗಳನ್ನು ಮುಚ್ಚುವಂತೆ ಕಳೆದ ಸಭೆಯಲ್ಲೇ ನಿರ್ದೇಶನ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರದೇಶಿಕ ಸಾರಿಗೆ ಅಧಿಕಾರಿ ಲಕ್ಷೀಕಾಂತ ಬಿ. ನಾಲವಾರ ಅವರು ಶುಕ್ರವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಗಮನಕ್ಕೆ ತಂದಾಗ ಜಿಲ್ಲಾಧಿಕಾರಿಗಳು ಸಿಡಿಮಿಡಿಗೊಂಡರು.

‘ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸಭೆ ನಡೆಸುತ್ತಿದ್ದೇವೆ. ಗುಂಡಿಗಳನ್ನು ಮುಚ್ಚದಿದ್ದರೆ ಪಾಲಿಕೆ ಮೇಲೆ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ ಶಿವಮೂರ್ತಿ, ‘ಇಂದೇ ಆಯುಕ್ತರು ಹಾಗೂ ಎಂಜಿನಿಯರ್‌ಗಳ ಸಭೆ ನಡೆಸಿ ನಗರದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳಿ. ಕೆಲಸ ನಡೆದಿದೆಯೇ ಎಂಬ ಬಗ್ಗೆ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು’ ಎಂದು ಸೂಚಿಸಿದರು.

ADVERTISEMENT

ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌, ‘ನಗರದ ಕೆಲವು ಕಡೆ ನಿರ್ಮಿಸಿರುವ ಸಿಸಿ ರಸ್ತೆಯಲ್ಲಿ ಮ್ಯಾನ್‌ ಹೋಲ್‌ ರಸ್ತೆಗಿಂತಲೂ ನಾಲ್ಕೈದು ಇಂಚು ಕೆಳಗೆ ಇದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ’ ಎಂದು ಗಮನಕ್ಕೆ ತಂದರು.

ಈ ಬಗ್ಗೆ ಜಿಲ್ಲಾಧಿಕಾರಿ ಪಾಲಿಕೆಯ ಕಂದಾಯ ಅಧಿಕಾರಿ ನಾಗರಾಜ್‌ ಅವರನ್ನು ಪ್ರಶ್ನಿಸಿದಾಗ, ‘ಕಳೆದ ಸಭೆಗೆ ಬೇರೆಯವರು ಬಂದಿದ್ದರು. ನನ್ನ ಬಳಿ ಮಾಹಿತಿ ಇಲ್ಲ’ ಎಂದರು. ಇದರಿಂದ ಸಿಟ್ಟಿಗೆದ್ದ ಜಿಲ್ಲಾಧಿಕಾರಿ, ‘ಪೇಪರ್‌–ಪೆನ್ನು ತೆಗೆದುಕೊಂಡು ಚಿತ್ರ ಬರೆಯಲು ಇಲ್ಲಿಗೆ ಬಂದಿದ್ದೀರಾ? ಹಿಂದೆ ಬೇರೆ ಜಿಲ್ಲಾಧಿಕಾರಿ ಇದ್ದರು ಎಂದು ನಾನೂ ಸುಮ್ಮನೆ ಕೂರಲು ಆಗುತ್ತದೆಯೇ? ನೀವೆಲ್ಲ ಇಲ್ಲಿಯೇ ಗೂಟ ಹೊಡೆದುಕೊಂಡು ಕುಳಿತುಕೊಂಡಿರುತ್ತೀರಿ. ಪಾಲಿಕೆಯ ಮುಖ್ಯ ಎಂಜಿನಿಯರ್‌ ಕರೆಸಿ. ಇನ್ನೂ ಗುಂಡಿ ಮುಚ್ಚದಿರುವುದಕ್ಕೆ ಪಾಲಿಕೆಗೆ ನೋಟಿಸ್‌ ಕೊಡಿ’ ಎಂದು ಸೂಚಿಸಿದರು.

ರಸ್ತೆ ಸುರಕ್ಷತೆಗೂ ಪಾಲಿಕೆ ಅನುದಾನ ನೀಡಲಿ: ಎಸ್‌ಪಿ

‘ಪ್ರತಿ ವರ್ಷ ನಗರದಲ್ಲಿ 70ರಿಂದ 80 ಜನ ರಸ್ತೆ ಅಪಘಾತದಲ್ಲಿ ಮೃತಪಡುತ್ತಿದ್ದಾರೆ. ಪಾಲಿಕೆಗೆ ತೆರಿಗೆ ಭರಿಸುತ್ತಿರುವ ಐದು ಲಕ್ಷ ಜನರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ನಿಮ್ಮ ಜವಾಬ್ದಾರಿ. ರಸ್ತೆ ಸುರಕ್ಷತೆಗೆ 2018–19ನೇ ಸಾಲಿನಲ್ಲಿ ಹಣ ನೀಡಿಲ್ಲ. ರಸ್ತೆಗಳ ಅಂಚಿಗೆ ಬಿಳಿ ಬಣ್ಣ ಹಾಗೂ ಜಿಬ್ರಾ ಕ್ರಾಸ್‌ಗೆ ಪೇಂಟ್‌ ಮಾಡಿಸಬೇಕು. ರಸ್ತೆ ಉಬ್ಬುಗಳಿಗೆ ರಿಫ್ಲೆಕ್ಟರ್‌ಗಳನ್ನು ಅಳವಡಿಸಬೇಕು. ಹೀಗಾಗಿ ಬಜೆಟ್‌ನಲ್ಲಿ ಕನಿಷ್ಠ ಶೇ 2ರಷ್ಟು ಅನುದಾನವನ್ನು ರಸ್ತೆ ಸುರಕ್ಷತೆಗೂ ನೀಡಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.