ADVERTISEMENT

ಆರ್ಯವೈಶ್ಯ ಸಮುದಾಯದವರಿಗೆ ‘ಫುಡ್ ಟ್ರಕ್‌’ಗೆ ಸಾಲ ಸೌಲಭ್ಯ

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಅರುಣ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 12:47 IST
Last Updated 16 ಜೂನ್ 2020, 12:47 IST
ದಾವಣಗೆರೆಯಲ್ಲಿ ಆರ್ಯ ವೈಶ್ಯ ನಿಗಮದಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ಹಸ್ತಾಂತರಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಆರ್ಯ ವೈಶ್ಯ ನಿಗಮದಿಂದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿಗಮದ ಅಧ್ಯಕ್ಷ ಡಿ.ಎಸ್ ಅರುಣ್ ಫಲಾನುಭವಿಗಳಿಗೆ ಸಾಲ ಮಂಜೂರಾತಿ ಪತ್ರ ಹಸ್ತಾಂತರಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಆರ್ಯ ವೈಶ್ಯ ಸಮಾಜದವರು ತಯಾರಿಸಿದ ತಿಂಡಿ ಪದಾರ್ಥಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ‘ಫುಡ್ ಟ್ರಕ್’ ಕೊಂಡುಕೊಳ್ಳಲು ಸಾಲ ಸೌಲಭ್ಯ ಕಲ್ಪಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ತಿಳಿಸಿದರು.

‘ಮೂರು ಹಾಗೂ ನಾಲ್ಕು ಚಕ್ರಗಳ 100 ಟ್ರಕ್‌ಗಳನ್ನು ನೀಡುವ ಉದ್ದೇಶವಿದ್ದು, ₹ 4ಲಕ್ಷ ಹಾಗೂ ₹6 ಲಕ್ಷ ವೆಚ್ಚದಲ್ಲಿ ವಿನ್ಯಾಸಗೊಳಿಸಲಾಗಿದೆ. ಸ್ಥಳೀಯ ವ್ಯಾಪಾರಿಗಳಿಗೆ ಇವು ಅನುಕೂಲವಾಗಲಿವೆ. ನಮ್ಮ ಸಮಾಜದಲ್ಲಿ ಅಡುಗೆಯಲ್ಲಿ ಪರಿಣಿತಿ ಹೊಂದಿದವರು ಇದ್ದಾರೆ. ಅವರನ್ನು ಗುರುತಿಸಿ ಒಂದು ತಿಂಗಳಲ್ಲಿ ಸಾಲ ನೀಡಲಾಗುವುದು. ಕೇಂದ್ರದ ‘ಆತ್ಮನಿರ್ಭರ್’ ಯೋಜನೆಗೆ ಇದು ಪೂರಕವಾಗಲಿದೆ’ ಎಂದು ಹೇಳಿದರು.

‘ಕಳೆದ ಸಲದ ಬಜೆಟ್‌ನಲ್ಲಿ ಆರ್ಯ ವೈಶ್ಯ ನಿಗಮಕ್ಕೆ ₹ 10ಕೋಟಿ ಮೀಸಲಿಟ್ಟಿದ್ದು, ಅರಿವು ಶೈಕ್ಷಣಿಕ ಸಾಲ ಯೋಜನೆ ಹಾಗೂ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗಳಿಗೆ ಮೀಸಲಿರಿಸಲಾಗಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಿಇಟಿ, ಪಿಜಿಸಿಇಟಿ, ನೀಟ್‌ಗಳಲ್ಲಿ ತೇರ್ಗಡೆ ಹೊಂದಿ ಮುಂದಿನ ಪದವಿಗೆ ಸೇರುವವರಿಗೆ ಸರ್ಕಾರಿ ಶುಲ್ಕ ಭರಿಸಲು ಶೇ 2ರ ಬಡ್ಡಿ ದರದಲ್ಲಿ ₹1 ಲಕ್ಷ ಶೈಕ್ಷಣಿಕ ಸಾಲ ಮಂಜೂರು ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಸ್ವಯಂ ಉದ್ಯೋಗ ಸಾಲ ಯೋಜನೆಯಡಿ ಆರ್ಯ ವೈಶ್ಯ ಸಮುದಾಯದವರಿಗೆ ಉದ್ಯೋಗ ಕೈಗೊಳ್ಳಲು ಈ ಯೋಜನೆಯಲ್ಲಿ ₹1 ಲಕ್ಷ ಸಾಲವನ್ನು ಶೇ 4ರ ಬಡ್ಡಿದರದಲ್ಲಿ ನೀಡಲಾಗುವುದು. ಇದರಲ್ಲಿ ಶೇ 20ರಷ್ಟು ಸಹಾಯಧನ ನೀಡಲಾಗುವುದು’ ಎಂದು ಹೇಳಿದರು.

‘2019–20ನೇ ಸಾಲಿನ ಬಜೆಟ್‌ನಲ್ಲಿ ನಿಗಮಕ್ಕೆ ಮೀಸಲಿಟ್ಟಿದ್ದ ₹10 ಕೋಟಿ ಹಾಗೆಯೇ ಇದ್ದು, ಸಾಲ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಅರ್ಜಿ ಕರೆದಿದ್ದು, ಅವುಗಳಲ್ಲಿ 1,650 ಫಲಾನುಭವಿಗಳನ್ನು ಗುರುತಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರ ಖಾತೆಗೆ ನೇರವಾಗಿ ಸಾಲದ ಹಣವನ್ನು ವರ್ಗಾವಣೆ ಮಾಡಲಾಗುವುದು’ ಎಂದು ಹೇಳಿದರು.

ವಿದ್ಯಾರ್ಥಿ ಮಿತ್ರ ಯೋಜನೆ:‘ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ, ಪುಸ್ತಕ ಹಾಗೂ ಸಮವಸ್ತ್ರ ಕೊಂಡುಕೊಳ್ಳಲು ಆರ್ಯವೈಶ್ಯ ಮಹಾಸಭಾದಿಂದ ಒಬ್ಬ ವಿದ್ಯಾರ್ಥಿಗೆ ₹5 ಸಾವಿರವನ್ನು ನೇರವಾಗಿ ನೀಡಲಾಗುವುದು. ₹1.25 ಕೋಟಿಯನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಜಿಲ್ಲೆಯಲ್ಲಿ 240 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದರು.

ಫಲಾನುಭವಿಗಳಿಗೆ ಮಂಜೂರಾತಿ ಪತ್ರ:ನಗರದ ಕುರುಬರ ಹಾಸ್ಟೆಲ್ ಕಟ್ಟಡದಲ್ಲಿರುವ ನಿಗಮದ ಕಚೇರಿಯಲ್ಲಿ 55 ಫಲಾನುಭವಿಗಳಿಗೆ ನಿಗಮದ ಅಧ್ಯಕ್ಷ ಡಿ.ಎಸ್. ಅರುಣ್ ಸಾಲ ಮಂಜೂರಾತಿ ಪತ್ರ ವಿತರಿಸಿದರು.

‘ಕೊರೊನಾದ ಈ ಸಂದರ್ಭದಲ್ಲಿ ವ್ಯಾಪಾರದ ಭವಿಷ್ಯ ಅತಂತ್ರವಾಗಿದೆ. ಇಂತಹ ಸಂದರ್ಭದಲ್ಲಿ ಸಾಲ ಕೊಡುತ್ತಿರುವುದು ಹೆಚ್ಚು ಅನುಕೂಲಕರವಾಗಲಿದೆ. ಸರ್ಕಾರ ನಿಮ್ಮ ಮೇಲೆ ನಂಬಿಕೆ ಇರಿಸಿ ಸಾಲ ನೀಡಿದೆ. ಇದು ಸಮಾಜಕ್ಕೆ ನೀಡಿದ ಗೌರವವಾಗಿದೆ. ನಮ್ಮವರು ಬೇರೆಯವರ ಹಾಗಲ್ಲ, ಕೊಟ್ಟ ಸಾಲವನ್ನು ಮರು ಪಾವತಿ ಮಾಡುತ್ತಾರೆ ಎಂಬ ವಿಶ್ವಾಸ ಇದೆ’ ಎಂದು ಅರುಣ್ ಹೇಳಿದರು.

‘10 ಲಕ್ಷದಷ್ಟು ಸಣ್ಣ ಸಂಖ್ಯೆಯಲ್ಲಿರುವ ವೈಶ್ಯ ಸಮುದಾಯದವರಲ್ಲೂ ಬಡವರಿದ್ದಾರೆ. ಅವರಿಗೆ ಓದು ಹಾಗೂ ವ್ಯಾಪಾರಕ್ಕೆ ನೆರವಿನ ಅಗತ್ಯವಿದೆ ಎಂಬುದನ್ನು ಮನಗಂಡ ಸರ್ಕಾರ ನಿಗಮಕ್ಕೆ ಚಾಲನೆ ನೀಡಿದೆ’ ಎಂದರು.

ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್. ಪ್ರಭಾಕರ್, ಕನ್ನಿಕಾ ಪರಮೇಶ್ವರಿ ಕೋ-ಆಪ್‌ ಬ್ಯಾಂಕ್‌ ಅಧ್ಯಕ್ಷ ಆರ್‌.ಜಿ. ಶ್ರೀನಿವಾಸಮೂರ್ತಿ, ಬ್ಯಾಂಕ್ ನಿರ್ದೇಶಕರಾದ ಅನಂತರಾಮ ಶೆಟ್ಟಿ, ಕಾಸಲ್ ಸತೀಶ್, ಸಮಾಜದ ಮುಖಂಡರಾದ ನಾಗರಾಜ್ ಗುಪ್ತ, ಅಶ್ವತ್ಥ ನಾರಾಯಣ, ಸಾಯಿ ಪ್ರಸಾದ್, ನಿಗಮದ ಜಿಲ್ಲಾ ವ್ಯವಸ್ಥಾಪಕ ಕೆ. ಗುಣ್ಣಯ್ಯ, ಕ್ಷೇತ್ರಾಧಿಕಾರಿ ನಾಗೇಂದ್ರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.