ADVERTISEMENT

ಪ್ರವಾಹದ ಮುನ್ನೆಚ್ಚರಿಕೆ ನಿಭಾಯಿಸಲು ಸಿದ್ಧರಾಗಿ

ಗೂಗಲ್ ಮೀಟ್‍ನಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಚರ್ಚೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 16:47 IST
Last Updated 8 ಆಗಸ್ಟ್ 2020, 16:47 IST
ದಾವಣಗೆರೆಯ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಜಿಲ್ಲೆಯ ಅಧಿಕಾರಿಗಳ ಜೊತೆ ಗೂಗಲ್‌ನಲ್ಲಿ ಸಭೆ ನಡೆಸಿದರು.
ದಾವಣಗೆರೆಯ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಜಿಲ್ಲೆಯ ಅಧಿಕಾರಿಗಳ ಜೊತೆ ಗೂಗಲ್‌ನಲ್ಲಿ ಸಭೆ ನಡೆಸಿದರು.   

ದಾವಣಗೆರೆ:ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಇನ್ನೂ ಹೆಚ್ಚಿನ ಬೀಳುವ ಸಂಭವವಿರುವುದರಿಂದ ಜಿಲ್ಲಾಡಳಿತ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಿಸ್ಥಿತಿ ನಿಭಾಯಿಸಲು ಸಿದ್ದವಿರಬೇಕು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಈಗಾಗಲೇ ಬೆಳೆಹಾನಿ, ಮನೆಹಾನಿ, ಆಗಿರುವವರಿಗೆ ತಕ್ಷಣ ಪರಿಹಾರ ಒದಗಿಸಿ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಶನಿವಾರ ನಡೆದ ಗೂಗಲ್ ಮೀಟ್‍ನಲ್ಲಿ ಮಾತನಾಡಿದ ಅವರು ‘ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಅದರೊಂದಿಗೆ ಹೆಚ್ಚು ಮಳೆಯಾಗುತ್ತಿರುವುದರಿಂದ ಎರಡೂ ಪರಿಸ್ಥಿತಿಗಳನ್ನು ಒಟ್ಟಾಗಿ ನಿಭಾಯಿಸಬೇಕಾಗಿದೆ. ಈಗಾಗಲೇ ತುಂಗಾನದಿಗೆ ಸಾಕಷ್ಟು ನೀರು ಬಂದಿದ್ದು, ಕೆಲವೇ ದಿನಗಳಲ್ಲಿ ಭದ್ರಾ ನೀರು ಸೇರಲಿದೆ. ಹಾಗಾಗಿ ನದಿದಂಡೆ ಮತ್ತು ನದಿಪಾತ್ರದಲ್ಲಿರುವ ಜನ- ಜಾನುವಾರು ಪ್ರವಾಹಕ್ಕೆ ಒಳಗಾಗದಂತೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಬೇಕು’ ಎಂದು ಸೂಚಿಸಿದರು.

‘ಪ್ರವಾಹಕ್ಕೆ ಸಿಲುಕುವ ಕುಟುಂಬಗಳನ್ನು ತಕ್ಷಣ ಸ್ಥಳಾಂತರಿಸಿ ಅವರನ್ನು ಕಾಳಜಿ ಕೇಂದ್ರಗಳಿಗೆ ಕಳುಹಿಸಬೇಕು. ಈ ಹಿಂದಿನ ದಿನಗಳಲ್ಲಿ ಪ್ರವಾಹ ಊಂಟಾದರೆ ಕಾಳಜಿ ಕೇಂದ್ರಗಳನ್ನು ಮಾಡಿದಂತೆ ಮಾಡಲು ಬರುವುದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಅಂತರ ಮುಖ್ಯವಾಗಿರುವುದರಿಂದ ಸುಸಜ್ಜಿತ ಸ್ಥಳಗಳನ್ನು ಗುರುತಿಸಬೇಕು. ಸಮುದಾಯಭವನ, ಹಜ್‍ಭವನ, ಗುರುಭವನಗಳನ್ನು ಗುರುತಿಸಿ ಒಂದೇ ಕಡೆ ಅಡುಗೆ ವ್ಯವಸ್ಥೆ ಮಾಡಿ ಅಲ್ಲಿಂದ ವಾಹನಗಳ ಮೂಲಕ ಆಹಾರ ಮತ್ತು ನೀರನ್ನು ಸರಬರಾಜು ಮಾಡಬೇಕು’ ಎಂದರು.

ADVERTISEMENT

ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್ ಮಾಹಿತಿನೀಡಿ, ‘ಜಿಲ್ಲೆಯಲ್ಲಿ ಜೂನ್, ಆಗಸ್ಟ್, ತಿಂಗಳಿನಲ್ಲಿ 273 ಮನೆಗಳು ಭಾಗಶಃ ಹಾನಿಯಾಗಿವೆ. ಅವರಿಗೆ ₹11ಲಕ್ಷ ಪರಿಹಾರ ನೀಡಲಾಗಿದೆ. 785 ಎಕರೆ ಬೆಳೆಹಾನಿ ಆಗಿದ್ದು, 1681 ರೈತರಿಗೆ ₹1.14 ಕೋಟಿ ಪರಿಹಾರ ನೀಡಲಾಗಿದೆ ಎಂದರು.

ಹರಿಹರ ತಹಶೀಲ್ದಾರ್ ರಾಮಚಂದ್ರಪ್ಪ ‘ಅತಿಯಾದ ಮಳೆಯಿಂದ ಸಾರಥಿ- ಚಿಕ್ಕಬಿದರೆ ಸಂಪರ್ಕ ಕಡಿತಗೊಂಡಿದ್ದು, ಜನಸಂಚಾರ ಬಂದ್ ಮಾಡಲಾಗಿದೆ ಹಾಗೂ ಆ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದರು.

ಇದಕ್ಕೆ ಸಂಸದರು ಪ್ರತಿಕ್ರಿಯಿಸಿ ‘ಸೇತುವೆ ಮಂಜೂರಾಗಿ ಒಂದು ವರ್ಷವಾದರೂ ಕಾಮಗಾರಿ ಏಕೆ ಆರಂಭವಾಗಿಲ್ಲ. ಬೇಗ ಕಾಮಗಾರಿ ಮುಗಿಸಲು ತಿಳಿಸಿ’ ಎಂದರು.

‘ಉಕ್ಕಡಗಾತ್ರಿಯ ಕೆಲ ಪ್ರದೇಶ ಮುಳುಗಡೆಯಾಗಿದ್ದು ಸ್ನಾನಘಟ್ಟದವರಗೆ ನೀರು ಬಂದಿರುವ ಮಾಹಿತಿ ಇದೆ’ ಎಂದಾಗ ತಹಶೀಲ್ದಾರ್ ಪ್ರತಿಕ್ರಯಿಸಿ ‘ಉಕ್ಕಡಗಾತ್ರಿ ಸಂಪರ್ಕ ರಸ್ತೆ ಬಂದ್ ಆಗಿದೆ. ಯಾವುದೇ ತೊಂದರೆ ಇಲ್ಲ’ ಎಂದರು.

ದಾವಣಗೆರೆ ತಹಶೀಲ್ದಾರ್ ಗಿರೀಶ್ ‘ಆನಗೋಡು ಪ್ರದೇಶದಲ್ಲಿ 4.8 ಮಿ.ಮೀ ಮಳೆಯಾಗಿದ್ದು, ಈ ಹಿಂದೆ ಹಾನಿಗೊಳಗಾಗಿದ್ದ 42 ಮನೆಗಳಿಗೆ ₹1.32 ಕೋಟಿ ಪರಿಹಾರ ನೀಡಲಾಗಿದೆ ಎಂದರು. ಇತ್ತೀಚೆಗೆ ಹಾನಿಯಾದ ಎರಡು ಮನೆಗಳಿಗೆ ಹೊಸ ಮಾರ್ಗಸೂಚಿಯಂತೆ ಪರಿಹಾರ ನೀಡಲಾಗುವುದು’ ಎಂದರು.

ರಾಜನಹಳ್ಳಿ ಸಮೀಪ ಹೊಳೆಯಲ್ಲಿ ಮರದ ಮೇಲೆ ಸಿಲುಕಿರುವ ಕೋತಿಗಳನ್ನು ಸುರಕ್ಷಿತವಾಗಿ ದಂಡೆಗೆ ತಲುಪಿಸಲು ಸಂಸದರು ಸೂಚಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಪೊಲೀಸ್ ಅಧಿಕಾರಿ ಶಿವಪ್ರಸಾದ ‘ಈಗಾಗಲೇ ಬೊಟ್ ಮೂಲಕ ಹಗ್ಗದ ಸಹಾಯದಿಂದ ಕೋತಿಗಳನ್ನು ರಕ್ಷಿಸುವ ಕಾರ್ಯ ಆರಂಭವಾಗಿದೆ’ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ‘ಎಂಥದ್ದೇ ಪರಿಸ್ಥಿತಿ ಬಂದರು ನಿಭಾಯಿಸಲು ನಮ್ಮ ತಂಡ ಸಿದ್ದವಿದೆ. ಪ್ರವಾಹ ಮತ್ತು ಕೋವಿಡ್‍ನಿಂದ ಜನರಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ಮಾರ್ಗದರ್ಶನದಂತೆ ನಮ್ಮ ತಂಡ ಕಾರ್ಯ ನಿರ್ವಹಿಸಲಿದೆ’ ಎಂದರು.

ಚನ್ನಗಿರಿ ತಹಶೀಲ್ದಾರ್ ಪುಟ್ಟರಾಜು,ಸಭೆಯಲ್ಲಿ ಸಂಸದರ ಆಪ್ತ ಕಾರ್ಯದರ್ಶಿ ದೇವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.