ADVERTISEMENT

ಕೆಲಸ ಮಾಡಲು ಆಗದಿದ್ದರೆ ಬಿಟ್ಟೋಗ್ರಿ: ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಸಂಸದ

ಜಲಸಿರಿ ಯೋಜನೆಯ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದ ಸಂಸದ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 4:05 IST
Last Updated 19 ಆಗಸ್ಟ್ 2022, 4:05 IST
ದಾವಣಗೆರೆಯ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಗುರುವಾರ ನಡೆದ ಜಲಸಿರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಸ್ಮಾರ್ಟ್‌ಸಿಟಿ ಕಚೇರಿಯಲ್ಲಿ ಗುರುವಾರ ನಡೆದ ಜಲಸಿರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಚುನಾವಣೆ ಇದೆ. ಬೇಸಿಗೆಯೊಳಗೆ ನೀರು ಕೊಡಬೇಕು. ಇಲ್ಲದಿದ್ದರೆ ಜನರೇ ಕಟ್ಟಿ ಹಾಕ್ತಾರೆ. ನಮ್ಮನ್ನು ದನ ಕಾಯೋಕೆ ಇರುವವರು ಅಂದುಕೊಂಡಿದ್ದೀರಾ? ಕೆಲಸ ಮಾಡಲು ಆಗುವುದಿದ್ದರೆ ಮಾಡಿ. ಇಲ್ಲದಿದ್ದರೆ ಬಿಟ್ಟು ಹೋಗ್ರಿ, ಹೊಟ್ಟೆಗೇನು ತಿಂತೀರಿ...’

ಮಹಾನಗರ ಪಾಲಿಕೆ ವ್ಯಾಪ್ತಿಯ ‘ಜಲಸಿರಿ’ ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಗುರುವಾರ ಅಧಿಕಾರಿಗಳನ್ನು ಮತ್ತು ಗುತ್ತಿಗೆದಾರರನ್ನು ಸಂಸದ ಜಿ.ಎಂ. ಸಿದ್ದೇಶ್ವರ ತರಾಟೆಗೆ ತೆಗೆದುಕೊಂಡ ಪರಿ ಇದು.

‘ಕೆಲಸ ಮಾಡದ ಈ ಗುತ್ತಿಗೆದಾರರನ್ನು ಓಡಿಸಬೇಕು. ಇಲ್ಲವೇ ಮಲ್ಲಾಪುರ ನಿಮ್ಮನ್ನೇ ಬೇರೆಡೆಗೆ ಎತ್ತಂಗಡಿ ಮಾಡಲಾಗುವುದು’ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರಿಗೆ ಎಚ್ಚರಿಕೆ ನೀಡಿದರು. ‘ಕೆಲಸ ಮಾಡದೇ ಇದ್ದರೆ ಅವರನ್ನೇ ಓಡಿಸುತ್ತೇನೆ’ ಎಂದು ಮಲ್ಲಾಪುರ ತಿಳಿಸಿದರು.

ADVERTISEMENT

ಗ್ಯಾಪ್‌ ಕನೆಕ್ಷನ್‌ಗಳನ್ನು ಸೆಪ್ಟೆಂಬರ್‌ ಅಂತ್ಯದೊಳಗೆ, ಉಳಿದ ಎಲ್ಲ ಕಾಮಗಾರಿಗಳನ್ನು ಡಿಸೆಂಬರ್‌ ಒಳಗೆ ಮುಗಿಸಿ
ಕೊಡುವುದಾಗಿ ಗುತ್ತಿಗೆದಾರರು ಭರವಸೆ ನೀಡಿದರು. ಮಾತಿಗೆ ತಪ್ಪಿದರೆ ಏನು ಮಾಡ್ತೀರಿ ಎಂದು ಸಂಸದರು ಪ್ರಶ್ನಿಸಿದರು. ಅವರಿಗೆ ಈಗಾಗಲೇ ದಂಡ ವಿಧಿಸಲಾಗಿದೆ ಎಂದು ರವೀಂದ್ರ ಮಲ್ಲಾಪುರ ಮಾಹಿತಿ ನೀಡಿದರು. ಈಗಾಗಲೇ ನೀಡಿದ್ದು ಇರಲಿ, ಮುಂದೆ ಮತ್ತೆ ನಿಗದಿತ ಸಮಯದಲ್ಲಿ ಕಾಮಗಾರಿ ಮುಗಿಸದಿದ್ದರೆ ಬಡವರಿಗೆ 25 ಮನೆ ಕಟ್ಟಿಕೊಡಬೇಕು. ಇದಕ್ಕೆ ತಯಾರಿದ್ದೀರಾ ಎಂದು ಸಂಸದರು ಪ್ರಶ್ನಿಸಿದರೂ ಗುತ್ತಿಗೆದಾರರು ಬಾಯಿ ಬಿಡಲಿಲ್ಲ. ‘ನೀನು ಕಳ್ಳ ಇದ್ದಿ. ನೀನೇ ಹೇಳಿದ ಸಮಯದ ಒಳಗೆ ಕೆಲಸ ಮುಗಿಸಿದರೆ ಮನೆ ಕಟ್ಟಿಕೊಡಬೇಕಿಲ್ಲ. ಬೇಗ ಕಾಮಗಾರಿ ಮುಗಿಸಲು ಹೇಳಿದೆ. ಆದರೆ ನೀನು ಬಾಯಿ ಬಿಡುತ್ತಿಲ್ಲ’ ಎಂದು ಸಂಸದರು ತರಾಟೆಗೆ ತೆಗೆದುಕೊಂಡರು.

‘ನಿಗದಿತ ಅವಧಿಗೆ 15 ದಿನಗಳ ಹೆಚ್ಚುಕಮ್ಮಿಯಲ್ಲಿ ಕೆಲಸ ಮುಗಿಸಿ ಕೊಡದಿದ್ದರೆ ನೀವು ಹೇಳಿದಂತೆ ಕೇಳುತ್ತೇನೆ’ ಎಂದು ಗುತ್ತಿಗೆದಾರ ತಿಳಿಸಿದರು.

‘ವಿತರಣಾ ಮಾರ್ಗದ ಪೈಪ್‍ಲೈನ್ ಕಾಮಗಾರಿಯೂ ಇನ್ನು 275 ಕಿ.ಮೀ ಬಾಕಿ ಇದೆ. ಪ್ರತಿ ತಿಂಗಳು 25 ಕಿ.ಮೀ ಕಾಮಗಾರಿ ಕೈಗೊಂಡರೂ 5 ತಿಂಗಳಲ್ಲಿ ಗುರಿ ತಲು‍ಪುವುದು ಕಷ್ಟ ಇದೆ. ಹೆಚ್ಚು ಕಾರ್ಮಿಕರನ್ನು ತೊಡಗಿಸಿ ಕಾಮಗಾರಿ ಮುಗಿಸಿ. ಪೈಪ್‍ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅರಣ್ಯ ಇಲಾಖೆ, ಲೋಕೊಪಯೋಗಿ ಇಲಾಖೆಗಳಿಂದ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತನ್ನಿ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಹರಿಸ
ಲಾಗುವುದು’ ಎಂದರು.

₹ 532 ಕೋಟಿ ವೆಚ್ಚದಲ್ಲಿ ಜಲಸಿರಿ ಯೋಜನೆಯಡಿ 24X7 ನಿರಂತರ ನೀರು ಸರಬರಾಜು ಯೋಜನೆಯಡಿ ಕಾಮಗಾರಿ ನಡೆಯುತ್ತಿದೆ. 1336 ಕಿ.ಮೀ ಪೈಪ್‍ಲೈನ್ ಆಗಬೇಕಿದ್ದು, ಅದರಲ್ಲಿ 1080 ಕಿ.ಮೀ. ಮುಗಿದಿದೆ. 19 ಓವರ್ ಹೆಡ್ ಟ್ಯಾಂಕ್‍ಗಳಲ್ಲಿ 13 ಪೂರ್ಣಗೊಂಡಿವೆ. ನಗರದಲ್ಲಿ 97,589 ಮನೆಗಳಲ್ಲಿ 50,283 ಮನೆಗಳಿಗೆ ನಲ್ಲಿ ಸಂಪರ್ಕಿಸಲಾಗಿದೆ ಎಂದು ಯೋಜನೆ ಟಾಸ್ಕ್ ಮ್ಯಾನೇಜರ್ ದೇವರಾಜ ಮಾಹಿತಿ ನೀಡಿದರು.ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಆಯುಕ್ತ ವಿಶ್ವನಾಥ್ ಮುದಜ್ಜಿ, ತಹಶೀ
ಲ್ದಾರ್ ಬಸವನಗೌಡ ಕೊಟೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.