ADVERTISEMENT

ಕಾರ್ಮಿಕ ಕ್ಷೇಮಾಭಿವೃದ್ಧಿ ಸಹಕಾರ ಸಂಘ: ಹೊರಗುತ್ತಿಗೆ ನೌಕರರ ಭರಪೂರ ಸ್ಪಂದನೆ

ಜಿ.ಬಿ.ನಾಗರಾಜ್
Published 6 ಮಾರ್ಚ್ 2025, 6:58 IST
Last Updated 6 ಮಾರ್ಚ್ 2025, 6:58 IST

ಗಂಗಾಧರಸ್ವಾಮಿ

ಗಂಗಾಧರಸ್ವಾಮಿ

ದಾವಣಗೆರೆ: ಸರ್ಕಾರದ ವಿವಿಧ ಇಲಾಖೆಗಳು, ನಿಗಮ, ಮಂಡಳಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಹೊಂದಿದ ನೌಕರರಿಗೆ ವೇತನ ಪಾವತಿಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಿ ಸೌಲಭ್ಯ ತಲುಪಿಸುವ ಉದ್ದೇಶದಿಂದ ರಚಿಸುತ್ತಿರುವ ‘ದಾವಣಗೆರೆ ಕಾರ್ಮಿಕ ಕ್ಷೇಮಾಭಿವೃದ್ಧಿ ಸಹಕಾರ ಸಂಘ’ಕ್ಕೆ ಜಿಲ್ಲೆಯಲ್ಲಿ ಭರಪೂರ ಪ್ರತಿಸ್ಪಂದನೆ ಸಿಕ್ಕಿದೆ.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಚನೆಯಾಗುತ್ತಿರುವ ಸಹಕಾರ ಸಂಘದ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸದಸ್ಯತ್ವಕ್ಕೆ ಕಾರ್ಮಿಕ ಇಲಾಖೆ ಈವರೆಗೆ ವಿತರಿಸಿದ 4,500 ಅರ್ಜಿ ನಮೂನೆಗಳಲ್ಲಿ ಹೊರಗುತ್ತಿಗೆ ಆಧಾರದ 3,300ಕ್ಕೂ ಅಧಿಕ ನೌಕರರು ಮರಳಿಸಿದ್ದಾರೆ. ಜಿಲ್ಲೆಯಲ್ಲಿ ಅಂದಾಜು 5,000 ನೌಕರರು ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬಹುತೇಕರು ಸಹಕಾರ ಸಂಘದ ವ್ಯಾಪ್ತಿಗೆ ಬರುವ ಉತ್ಸುಕತೆ ತೋರಿದ್ದಾರೆ.

ADVERTISEMENT

ಹೊರಗುತ್ತಿಗೆ ನೌಕರರಿಗೆ ಏಜೆನ್ಸಿಗಳಿಂದ ಆಗುತ್ತಿರುವ ಕಿರುಕುಳ ತಪ್ಪಿಸಲು ಬೀದರ್‌ನ ‘ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ’ದ ಮಾದರಿಯಲ್ಲಿ ಸಹಕಾರ ಸಂಘ ರಚಿಸಲು ಕಾರ್ಮಿಕ ಇಲಾಖೆ 2024ರ ಅ.1ರಂದು ಆದೇಶಿಸಿತ್ತು. ದಾವಣಗೆರೆ ಜಿಲ್ಲೆಯಲ್ಲಿ ಸಂಘ ಅಸ್ತಿತ್ವ ಕಂಡುಕೊಳ್ಳಲು ಅನುಮತಿ ನೀಡಿತ್ತು.  ಡಿ.24ರಂದು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಂಘ ರಚನೆಯ ತೀರ್ಮಾನ ಕೈಗೊಳ್ಳಲಾಗಿತ್ತು.

ಏನಿದು ಸಹಕಾರ ಸಂಘ?: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುವ ನೌಕರರು ಏಜೆನ್ಸಿಗಳಿಂದ ನೇಮಕಗೊಂಡಿದ್ದಾರೆ. ಈ ನೌಕರರನ್ನು ಸಹಕಾರ ತತ್ವದಡಿ ರಚನೆಯಾದ ಸೊಸೈಟಿ ವ್ಯಾಪ್ತಿಗೆ ತರುವ ಪ್ರಯತ್ನದ ಭಾಗವಾಗಿ ಈ ಸಂಘ ರಚನೆಯಾಗುತ್ತಿದೆ. ಹೊರಗುತ್ತಿಗೆ ನೌಕರರಿಗೆ ಇಲಾಖೆಯಲ್ಲಿ ನಿಗದಿಪಡಿಸಿದ ವೇತನವನ್ನು ಸೊಸೈಟಿ ನೇರವಾಗಿ ಪಾವತಿಸಲಿದೆ. ಭವಿಷ್ಯ ನಿಧಿ (ಪಿಎಫ್‌) ಹಾಗೂ ಕರ್ನಾಟಕ ರಾಜ್ಯ ವಿಮಾ ನಿಗಮದ ವಿಮೆಯನ್ನು (ಇಎಸ್‌ಐ) ಸಕಾಲಕ್ಕೆ ಪಾವತಿಸಲಿದೆ. ಇದಕ್ಕೆ ಶೇ 1ರಷ್ಟು ಸೇವಾ ಶುಲ್ಕವನ್ನು ಪಡೆಯಲಾಗುತ್ತದೆ.

ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ, ಕಾರ್ಯದರ್ಶಿಯಾಗಿ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸದಸ್ಯ ಕಾರ್ಯದರ್ಶಿಯಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ ಕಾರ್ಯ ನಿರ್ವಹಿಸಲಿದ್ದಾರೆ. ಸಹಕಾರ ಸಂಘಗಳ ಉಪನಿಬಂಧಕರು, ಯೋಜನಾ ನಿರ್ದೇಶಕರು, ಜಿಲ್ಲಾ ಯೋಜನಾಧಿಕಾರಿ ಹಾಗೂ ಸದಸ್ಯರಿಂದ ಚುನಾಯಿತರಾದ ಐವರು ನಿರ್ದೇಶಕರು ಸಂಘದಲ್ಲಿರುತ್ತಾರೆ. ಪ್ರತಿ ಸದಸ್ಯರಿಂದ ₹ 1,000 ಷೇರು ಹಣ ಹಾಗೂ ₹ 100 ನೋಂದಣಿ ಶುಲ್ಕ ಸಂಗ್ರಹಿಸಲಾಗುತ್ತಿದೆ.

ಏಜೆನ್ಸಿ ಹಿಡಿತದಿಂದ ಮುಕ್ತಿ: ಹೊರಗುತ್ತಿಗೆ ನೌಕರರ ನೇಮಕಾತಿಗೆ ಇಲಾಖೆಗಳು ಏಜೆನ್ಸಿ ನಿಗದಿಪಡಿಸುತ್ತಿದ್ದವು. ನೌಕರರಿಗೆ ಮೀಸಲಿಟ್ಟ ವೇತನದ ಮೊತ್ತವನ್ನು ಇಲಾಖೆಗಳು ಏಜೆನ್ಸಿಗೆ ನೀಡುತ್ತಿದ್ದವು. ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ, ಭವಿಷ್ಯ ನಿಧಿ (ಪಿಎಫ್‌) ಹಾಗೂ ಕರ್ನಾಟಕ ರಾಜ್ಯ ವಿಮಾ ನಿಗಮದ ವಿಮೆ (ಇಎಸ್‌ಐ) ಪಾವತಿಸುವುದು ಏಜೆನ್ಸಿಯ ಹೊಣೆಯಾಗಿತ್ತು. ಇದಕ್ಕೆ ಶೇ 2ರಿಂದ ಶೇ 5ರವರೆಗೆ ಈ ಸೇವಾ ಶುಲ್ಕವನ್ನು ಪಡೆಯುತ್ತಿದ್ದವು.

ಹಲವು ವರ್ಷಗಳಿಂದ ಇದ್ದ ಈ ವ್ಯವಸ್ಥೆಯಲ್ಲಿ ಸಾಕಷ್ಟು ಲೋಪಗಳಿದ್ದವು. ನೌಕರರ ವೇತನದಲ್ಲಿ ನಿಗದಿಗಿಂತ ಹೆಚ್ಚು ಸೇವಾ ಶುಲ್ಕ ಪಡೆಯುವುದು, ಭವಿಷ್ಯ ನಿಧಿ ಹಾಗೂ ಇಎಸ್‌ಐ ಸೌಲಭ್ಯ ಒದಗಿಸದೇ ವಂಚಿಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿದ್ದವು. ಕೆಲ ಏಜೆನ್ಸಿಗಳು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ), ಇತರ ಶುಲ್ಕದ ನೆಪದಲ್ಲಿ ನೌಕರರ ವೇತನದ ಬಹುಭಾಗಕ್ಕೆ ಕತ್ತರಿ ಹಾಕುತ್ತಿದ್ದವು. ಇಂತಹ ಕಿರುಕುಳ, ವಂಚನೆಯಿಂದ ಹೊರಗುತ್ತಿಗೆ ನೌಕರರಿಗೆ ಸಹಕಾರ ಸಂಘದ ಮೂಲಕ ಮುಕ್ತಿ ಸಿಗಲಿದೆ. ಮಧ್ಯವರ್ತಿಗಳ ಹಾವಳಿ ಕೂಡ ತಪ್ಪಲಿದೆ ಹೊರಗುತ್ತಿಗೆ ಆಧಾರಿತ ನೌಕರರು ಅಳಲು ತೋಡಿಕೊಂಡಿದ್ದಾರೆ.

ಪೌರ ಕಾರ್ಮಿಕರು, ಚಾಲಕರು ಹೊರಗೆ

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು, ಕಸದ ವಾಹನ ಚಾಲಕರು ಹಾಗೂ ನೀರು ಸರಬರಾಜು ಸಹಾಯಕರನ್ನು ಸೊಸೈಟಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಕಾರ್ಮಿಕ ಇಲಾಖೆ ಫೆ.10ರಂದು ಹೊರಡಿಸಿದ ಆದೇಶದಲ್ಲಿ ಈ ಕುರಿತು ಸ್ಪಷ್ಟನೆ ನೀಡಿದೆ.

ಪೌರ ಕಾರ್ಮಿಕರಲ್ಲಿ ಕೆಲವರು ನೇರ ವೇತನ ಪಾವತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಏಜೆನ್ಸಿ, ಗುತ್ತಿಗೆದಾರರ ಶೋಷಣೆಯಿಂದ ಮುಕ್ತಿ ನೀಡಲು ಸರ್ಕಾರ ಹಲವು ವರ್ಷಗಳ ಹಿಂದೆಯೇ ಈ ಕ್ರಮ ಕೈಗೊಂಡಿತ್ತು. ಉಳಿದ ಪೌರ ಕಾರ್ಮಿಕರನ್ನು ನೇರ ವೇತನ ಪಾವತಿ ವ್ಯಾಪ್ತಿಗೆ ತರುವ ಪ್ರಯತ್ನದ ಭಾಗವಾಗಿ ಸೊಸೈಟಿಯಿಂದ ಹೊರಗಿಡಲಾಗಿದೆ. ಆದರೆ, ಕಸದ ವಾಹನ ಚಾಲಕರು ಹಾಗೂ ನೀರು ಸರಬರಾಜು ಸಹಾಯಕರು ನೇರ ವೇತನ ಪಾವತಿಗೆ ಒಳಪಟ್ಟಿಲ್ಲ. ಇವರನ್ನು ಸೊಸೈಟಿಯಿಂದ ಹೊರಗಿಟ್ಟಿರುವ ಬಗ್ಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಸೊಸೈಟಿ ಸದಸ್ಯತ್ವ ಕೋರಿ ಬಂದಿವೆ 3,300 ಅರ್ಜಿ, ಏಜೆನ್ಸಿ ಶೋಷಣೆಯಿಂದ ಸಿಗಲಿದೆ ಮುಕ್ತಿಸದಸ್ಯರ ನೋಂದಣಿ, ಷೇರು ಸಂಗ್ರಹ ನಡೆಯುತ್ತಿದೆ. ಸಂಘದ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಏಪ್ರಿಲ್‌ ವೇಳೆಗೆ ಸೊಸೈಟಿ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಗಂಗಾಧರಸ್ವಾಮಿ

ಸೇವಾ ತೆರಿಗೆ, ಜಿಎಸ್‌ಟಿ ಹೆಸರಿನಲ್ಲಿ ವೇತನದ ಹೆಚ್ಚು ಹಣ ಕಡಿತವಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ವೇತನ ಸೊಸೈಟಿ ಮೂಲಕ ಸಂಪೂರ್ಣ ಕೈಗೆ ಸಿಕ್ಕರೆ ಅನುಕೂಲ

ಡಿ.ಉಮೇಶ್‌, ಹೊರಗುತ್ತಿಗೆ ನೌಕರ, ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.