ಹೊಳೆಹೊನ್ನೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಹುರಾಷ್ಟ್ರೀಯ ಕಾರ್ಪೊರೆಟ್ ಕಂಪನಿಗಳ ಪರವಾಗಿ ಕೃಷಿ ನೀತಿಯನ್ನು ರೂಪಿಸುತ್ತಿವೆ ಎಂದು ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ಹೇಳಿದರು.
ಸಮೀಪದ ನಾಗಸಮುದ್ರದ ಹುತಾತ್ಮರ ಸ್ಮಾರಕದ ಬಳಿ 43ನೇ ವರ್ಷದ ಹುತಾತ್ಮ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
‘1982 ಮೇ 25ರಂದು ಭದ್ರಾವತಿ ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಸನ್ಯಾಸಿಕೊಡಮಗ್ಗಿ ಗ್ರಾಮದ ಬಸವನಗೌಡ, ನಾಗಸಮುದ್ರದ ವೃದ್ಧ ಮಲ್ಲನಗೌಡ, ಬಾಲಕ ನಟರಾಜ ಅವರು ಪೊಲೀಸರ ಗುಂಡಿಗೆ ಬಲಿಯಾಗಿ 43 ವರ್ಷ ಸಂದಿವೆ. ಅವರ ಸ್ಮರಣೆಗಾಗಿ ಹುತಾತ್ಮರ ದಿನಾಚರಣೆ ಮಾಡುತ್ತಿದ್ದೇವೆ’ ಎಂದರು.
‘ಕೃಷಿ, ಶಿಕ್ಷಣ, ಆರೋಗ್ಯ, ವಾಣಿಜ್ಯ, ಅಭಿವೃದ್ಧಿ, ರೈಲ್ವೆ, ವಿದ್ಯುತ್ ಸೇರಿದಂತೆ ಬಹುತೇಕ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳು ಪ್ರವೇಶಿಸಿ ಎಲ್ಲದರ ಮೇಲೂ ಹಿಡಿತ ಸ್ಥಾಪಿಸಿವೆ. ನಮ್ಮ ದೇಶದ ರೈತರು, ವ್ಯಾಪಾರಸ್ಥರು, ನಾಗರಿಕರನ್ನು ಸಂಕಷ್ಟಕ್ಕೆ ದೂಡಿವೆ. ಕಂಪನಿಗಳಿಗೆ ಪೂರಕವಾಗಿ ತಂದಿದ್ದ 3 ರೈತ ವಿರೋಧಿ ಕೃಷಿ ಕಾಯ್ದೆಗಳನ್ನ ಸಂಯುಕ್ತ ಕಿಸಾನ್ ಮೋರ್ಚಾ ಸತತ ಹೋರಾಟ ಮಾಡಿದ ಪರಿಣಾಮ ಕೇಂದ್ರ ಸರ್ಕಾರ ವಾಪಸ್ ಪಡೆಯಿತು. ಆದರೆ ರಾಜ್ಯ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವಾಪಸ್ ಪಡೆಯುವುದಾಗಿ ಹೇಳಿ ಇದುವರೆಗೂ ಕ್ರಮಕ್ಕೆ ಮುಂದಾಗಿಲ್ಲ’ ಎಂದು ಹೇಳಿದರು.
ರೈತನ ಭೂಮಿಯನ್ನು ರೈತರಲ್ಲದವರು ಖರೀದಿ ಮಾಡುವ ಕಾಯ್ದೆ ಇರುವುದರಿಂದ ರೈತರ ಭೂಮಿ ಭ್ರಷ್ಟರ, ಬಂಡವಾಳ ಶಾಹಿಗಳ ಪಾಲಾಗುತ್ತಿದೆ. ಒಂದೆಡೆ ರೈತರಿಂದ ಕೆಐಎಡಿಬಿ ಬಲವಂತದ ಭೂಸ್ವಾಧೀನ ಮಾಡಿಕೊಂಡು ಬಂಡವಾಳ ಶಾಹಿ ಕಂಪನಿಗಳಿಗೆ ಕೊಡುತ್ತಿದೆ. ಇನ್ನೊಂದೆಡೆ ಬಗರ್ ಹುಕ್ಕುಂ ಸಾಗುವಾಳಿದಾರರಿಗೆ ಸಾಮೂಹಿಕವಾಗಿ ಹಕ್ಕುಪತ್ರ ತಿರಸ್ಕರಿಸಿ ಮತ್ತು ಹಕ್ಕುಪತ್ರ ಕೊಟ್ಟ ಜಮೀನಿಗೆ ಅರಣ್ಯ ಭೂಮಿ ಎಂದು ದಾಖಲೆ ತಿರುಚಿ ರೈತರನ್ನು ಒಕ್ಕಲೆಬ್ಬಿಸಿ ಭೂ ರಹಿತರನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
‘ಹಳ್ಳಿಜನರು ಕೃಷಿ ಬಿಟ್ಟು ನಗರಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ. ಬಡವರು ಇನ್ನಷ್ಟು ಬಡವರಾಗಿ, ಶ್ರೀಮಂತರು ಮತ್ತಷ್ಟು ಶ್ರೀಮಂತರನ್ನಾಗಿಸುವ ಆರ್ಥಿಕನೀತಿ ಈ ದೇಶದಲ್ಲಿ ಮುಂದುವರೆದಿದೆ. ಕಾರ್ಪೊರೆಟ್ ಕಂಪನಿಗಳು ಮತ್ತು ಆನ್‌ಲೈನ್ ಶಾಪಿಂಗ್ ಸಂಸ್ಕೃತಿಯಿಂದ ವರ್ತಕರು ವ್ಯಾಪಾರದಲ್ಲಿ ನಷ್ಟ ಹೊಂದಿ ಬೀದಿಗೆ ಬರುತ್ತಿದ್ದಾರೆ. ಸರ್ಕಾರ ತಕ್ಷಣವೇ ಸಭೆ ಕರೆದು ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಬೇಕು’ ಎಂದು ಆಗ್ರಹಿಸಿದರು.
ಹಿರಿಯರಾದ ಕಡಿದಾಳು ಶಾಮಣ್ಣ, ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಸಿ.ಎಸ್.ಹನುಮಂತಪ್ಪ, ರೈತ ಮುಖಂಡರಾದ ಜಿ.ಬಿ ರವಿ, ನಾಗರಾಜ್ ಘೋರ್ಪಡೆ, ಶಿವಕುಮಾರ್, ಮಂಜಪ್ಪ, ಶಿವರಾಜ್, ಜಗನಾಥ್, ಹನುಮಂತ, ರುದ್ರೇಶ್, ಭೋಜರಾಜ್, ಹರೀಶ್, ಮಂಜುನಾಥ್, ಹಾಗೂ ನೂರಾರು ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.