ADVERTISEMENT

ಅಂಗವಿಕಲರಿಗೆ ಕಾನೂನುಗಳ ಅರಿವು ಅವಶ್ಯ

ಅಂಗವಿಕಲರ ಕುಂದುಕೊರೆತೆ ಸಭೆಯಲ್ಲಿ ಆಯುಕ್ತ ವಿ.ಎಸ್ ಬಸವರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 15:46 IST
Last Updated 15 ಜೂನ್ 2019, 15:46 IST
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಕುಂದುಕೊರತೆ ಸಭೆಯಲ್ಲಿ ಅಂಗವಿಕಲ ಅಧಿನಿಯಮದ ಆಯುಕ್ತ ವಿ.ಎಸ್‌. ಬಸವರಾಜು ಸಮಸ್ಯೆ ಆಲಿಸಲಿದರು
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಕುಂದುಕೊರತೆ ಸಭೆಯಲ್ಲಿ ಅಂಗವಿಕಲ ಅಧಿನಿಯಮದ ಆಯುಕ್ತ ವಿ.ಎಸ್‌. ಬಸವರಾಜು ಸಮಸ್ಯೆ ಆಲಿಸಲಿದರು   

ದಾವಣಗೆರೆ: ಸರ್ಕಾರದಿಂದ ಅಂಗವಿಕಲರ ಅಭಿವೃದ್ಧಿಗಾಗಿ ರೂಪಿತವಾದ ಕಾಯ್ದೆ, ಕಾನೂನುಗಳ ಬಗ್ಗೆ ಅರಿವಿದ್ದರೆ ಮಾತ್ರ ಅಂಗವಿಕಲರ ಪಾಲಿನ ಶೇ 80ರಷ್ಟು ಸೌಲಭ್ಯಗಳನ್ನು ಯಥಾವತ್ತಾಗಿ ಪಡೆದುಕೊಳ್ಳಬಹುದು ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್. ಬಸವರಾಜು ತಿಳಿಸಿದರು.

ಜಿಲ್ಲಾಡಳಿತ ಭವನದ ತುಂಗಾಭದ್ರ ಸಭಾಂಗಣದಲ್ಲಿ ಶನಿವಾರ ನಡೆದ ಅಂಗವಿಕಲರ ಸಮಸ್ಯೆ ಕುರಿತ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ‘ಅಂಗವಿಕಲರ ಶ್ರೇಯೋಭಿವೃದ್ಧಿಗೆ ಸರ್ಕಾರ ಹಲವಾರು ಕಾನೂನು ರೂಪಿಸಿದೆ. ಅಂತಹ ಕಾನೂನು, ಕಾಯ್ದೆಗಳನ್ನು ಮೊದಲು ತಿಳಿದುಕೊಂಡು ವಿವಿಧ ಇಲಾಖೆಗಳಲ್ಲಿ ಈ ಬಗ್ಗೆ ನಿಖರವಾಗಿ ನಮೂದಿಸಿ ಸೌಲಭ್ಯ ಕೋರಿ ಅರ್ಜಿ ಬರೆದಾಗ ಅದನ್ನು ನೋಡಿದ ಅಧಿಕಾರಿಗಳು ನಿಮ್ಮ ಸೌಲಭ್ಯಗಳನ್ನು ಚಾಚು ತಪ್ಪದೇ ನೀಡುವಂತಾಗಬೇಕು’ ಎಂದರು.

ಚನ್ನಗಿರಿ ತಾಲೂಕಿನ ಯೋಗರಾಜ್ ‘ತಾಲ್ಲೂಕು ಕಚೇರಿಯಲ್ಲಿ ಅಂಗವಿಕಲರಿಗೆ ಕೂರಲು ಆಸನ ವ್ಯವಸ್ಥೆ, ನಿರ್ದಿಷ್ಟ ಶೌಚಾಲಯಗಳಿಲ್ಲ. ದೇವರಾಜ ಅರಸು ನಿಗಮದಲ್ಲಿ ಗಂಗಾ ಕಲ್ಯಾಣ ಯೋಜನೆಯಲ್ಲಿ ಬೋರ್ ಕೊರೆಸಲು 3-4 ಬಾರಿ ಅರ್ಜಿ ಹಾಕಿದರೂ ಸ್ಪಂದಿಸುತ್ತಿಲ್ಲ. ಅಂಗವಿಕಲರ ಹೆಸರಲ್ಲಿ ಬೇರೆಯವರು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ ಅದನ್ನು ಪರಿಶೀಲಿಸಿ ತಡೆಯಬೇಕು ಎಂದರು.

ADVERTISEMENT

ಆಯುಕ್ತರು ಪ್ರತಿಕ್ರಿಯಿಸಿ, ‘ಜಿಲ್ಲೆಯಲ್ಲಿ ಪ್ರತಿ ತಾಲ್ಲೂಕು ಪಂಚಾಯಿತಿ ಮಟ್ಟದಲ್ಲಿ ಸಭೆ ನಡೆಸಿ ಅಂಗವಿಕಲರಿಗೆ ಬೇಕಾದ ಸೌಲಭ್ಯಗಳ ಕ್ರಿಯಾ ಯೋಜನೆ ರೂಪಿಸುವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದಾರೆ. ಇದರ ಜೊತೆಗೆ ಅಂಗವಿಕಲರ ಕಾನೂನು ಮತ್ತು ವಿವಿಧ ಇಲಾಖೆಯಲ್ಲಿ ಅಂಗವಿಕಲರಿಗೆ ನೀಡುವ ಸೌಲಭ್ಯಗಳ ಕುರಿತು ಕಾರ್ಯಕ್ರಮ ಮಾಡುವಂತೆ ತಿಳಿಸಲಾಗುವುದು’ ಎಂದರು.

ಜಿಲ್ಲಾ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿಧರ್ ‘ಚನ್ನಗಿರಿ ತಾಲೂಕು ಪಂಚಾಯಿತಿಯಲ್ಲಿನ ಸಮಸ್ಯೆಯನ್ನು ಕೂಡಲೇ ಪರಿಶೀಲಿಸಿ ಅಲ್ಲಿನ ಇಓ ಬಳಿ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.

ಸುರೇಶ್ ಎಂಬುವವರು ಮಾತನಾಡಿ ‘ಜಿಲ್ಲೆಯಲ್ಲಿ ಸುಮಾರು 4500ರಷ್ಟು ಮೂಕರು ಮತ್ತು ಕಿವುಡರಿದ್ದಾರೆ. ಅವರೆಲ್ಲರೂ ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣರಾಗಿದ್ದರೂ ಇಂದಿಗೂ ಅವರಿಗೆ ಕಾನೂನುಗಳ ಅರಿವಿಲ್ಲ. ಕಾರ್ಯನಿರ್ವಹಿಸಲು ಉದ್ಯೋಗವಿಲ್ಲ. ಸೌಲಭ್ಯಗಳನ್ನು ಕೋರಿ ಅರ್ಜಿಯನ್ನು ಬರೆಯಲು ಬರುವುದಿಲ್ಲ ಇವರ ಗತಿ ಏನು’ ಎಂದು ಪ್ರಶ್ನಿಸಿದರು.

ಆಯುಕ್ತರು ಉತ್ತರಿಸಿ, ಅಂತಹವರಿಗೆ ಅವರ ಕುಟುಂಬ ಮತ್ತು ನೆರಹೊರೆಯವರು ಸಹಾಯ ಮಾಡಬೇಕು. ಸನ್ನೆ ಭಾಷೆಯನ್ನು ಅವರಿಗೆ ತಿಳಿಸಿ ಅವರನ್ನು ಕಾರ್ಯಪ್ರವೃತ್ತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಕುಂದುಕೊರತೆ ಸಭೆಗೆ ಹಾಜರಾಗದಿದ್ದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಸಿದ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಸಭೆಯಲ್ಲಿ ಸಾಲ ಸೌಲಭ್ಯ, ಉದ್ಯೊಗಾವಕಾಶ, ಅಂಗವಿಕಲರ ತ್ರಿಚಕ್ರ ವಾಹನ, ಸೈಕಲ್, ಅಂಗವಿಕಲರಿಗೆ ನಿವೇಶನ ಮತ್ತು ವಸತಿ, ಕುಟುಂಬ ನಿರ್ವಹಣೆ ಸಮಸ್ಯೆ, ಓದಿಗೆ ತಕ್ಕ ಕೆಲಸ ನೀಡುವಂತೆ, ಸ್ವಯಂ ಉದ್ಯೋಗಕ್ಕಾಗಿ ಸಾಲ ಕೋರಿಕೆ ಸೇರಿ ಸುಮಾರು 80ಕ್ಕೂ ಹೆಚ್ಚು ಅರ್ಜಿಗಳನ್ನು ಅಂಗವಿಕಲರು ಆಯುಕ್ತರಿಗೆ ನೀಡಲಾಯಿತು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಭಾರತಿ ಬಣಕಾರ್, ರಾಜ್ಯ ಅಂಗವಿಕಲರ ಸಲಹೆಗಾರ ಡಾ. ಸುರೇಶ್ ಹನಗವಾಡಿ, ಅಧಿಕಾರಿಗಳು ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.