ADVERTISEMENT

ಸೊಪ್ಪು ಬೆಳೆದು ಸಂತುಷ್ಟಿ ಪಡೆದ ಕೆಂಚಣ್ಣ

ಹರಪನಹಳ್ಳಿ ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಗ್ರಾಮದಲ್ಲಿ ಉತ್ಕೃಷ್ಟ ಬೆಳೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 12:32 IST
Last Updated 16 ಜೂನ್ 2021, 12:32 IST
ಹರಪನಹಳ್ಳಿ ತಾಲ್ಲೂಕು ತಿಪ್ಪನಾಯಕನಹಳ್ಳಿ ಗ್ರಾಮದ ರೈತ ಸುಣಗಾರ ಕೆಂಚಪ್ಪ ಅವರ ಹೊಲದಲ್ಲಿ ಸೊಪ್ಪು ಕತ್ತರಿಸುತ್ತಿರುವ ಮಹಿಳೆಯರು.
ಹರಪನಹಳ್ಳಿ ತಾಲ್ಲೂಕು ತಿಪ್ಪನಾಯಕನಹಳ್ಳಿ ಗ್ರಾಮದ ರೈತ ಸುಣಗಾರ ಕೆಂಚಪ್ಪ ಅವರ ಹೊಲದಲ್ಲಿ ಸೊಪ್ಪು ಕತ್ತರಿಸುತ್ತಿರುವ ಮಹಿಳೆಯರು.   

ಹರಪನಹಳ್ಳಿ: ಗೆಳೆಯನ ಹೊಲದಲ್ಲಿ ಬೆಳೆದಿದ್ದ ಸೊಪ್ಪು ಮಾರಾಟ ಮಾಡಲು ಹೋಗಿದ್ದಾಗ ಮಧ್ಯವರ್ತಿ ಮತ್ತು ರೈತರ ನಡುವೆ ಚೌಕಾಸಿ ನಡೆಯಿತು. ಮಧ್ಯ ಪ್ರವೇಶಿಸಿ ಬೆಲೆ ಕುದುರಿಸಲು ಪ್ರಯತ್ನಿಸಿದ ಸುಣಗಾರ ಕೆಂಚಣ್ಣನಿಗೆ ಮಧ್ಯವರ್ತಿ ಅಪಮಾನ ಮಾಡಿ ಕಳಿಸಿದ. ಅದನ್ನೇ ಸವಾಲಾಗಿ ಸ್ವೀಕರಿಸಿದ ರೈತ ಕೆಂಚಣ್ಣ ಪಾಲಕ್ ಸೊಪ್ಪು ಬೆಳೆದು ಸಂತುಷ್ಟಿ ಪಡೆದಿದ್ದಾರೆ.

ತಾಲ್ಲೂಕಿನ ತಿಪ್ಪನಾಯಕನಹಳ್ಳಿ ಗ್ರಾಮದ ಎಸ್. ಪರಶುರಾಮಪ್ಪ, ಕೆಂಚಮ್ಮ ದಂಪತಿ ಪುತ್ರ ಸುಣಗಾರ ಕೆಂಚಣ್ಣ (40) ಆರು ವರ್ಷಗಳಿಂದ ಪಾಲಕ್, ರಾಜಗಿರಿ, ಸಬ್ಬಾಸಕಿ, ಉಳಿಸೊಪ್ಪು, ಮೂಲಂಗಿ ಬೆಳೆದು ಪ್ರತಿ ವರ್ಷ ಲಕ್ಷ ಲಕ್ಷ ಸಂಪಾದಿಸುತ್ತಿದ್ದಾರೆ.

ತಮ್ಮ ತಮ್ಮನ ಒಂದು ಎಕರೆ ಜಮೀನು ಸೇರಿ ಮೂರು ಎಕರೆಯಲ್ಲಿ ಪ್ರತಿ ದಿನ 4 ಸಾವಿರದಿಂದ 5 ಸಾವಿರ ಸಿವುಡು ಸೊಪ್ಪು ಕಠಾವು ಮಾಡುವಂತೆ ಬೆಳೆದಿದ್ದಾರೆ. ನಿತ್ಯ ಹತ್ತಿರದ ಕೊಟ್ಟೂರು, ಹಡಗಲಿ, ಹರಪನಹಳ್ಳಿ, ಇಟ್ಟಿಗಿ ಸೇರಿ ವಿವಿಧ ಗ್ರಾಮದ ಸಂತೆಗಳಿಗೆ ಬೈಕ್‌ನಲ್ಲಿಯೇ ಸೊಪ್ಪು ತೆಗೆದುಕೊಂಡು ಹೋಗಿ ನೇರವಾಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡುತ್ತಾರೆ.

ADVERTISEMENT

ಪ್ರತಿ ಗಂಟಿಗೆ 150 ಸಿವುಡುಗಳಿರುತ್ತವೆ. ಒಂದು ಸಿವುಡಿಗೆ ಪಾಲಕ್ ₹ 1, ಉಳಿಸೊಪ್ಪು
₹ 1.50, ಮೆಂತೆ ₹ 2, ಸಬ್ಬಸಕಿ ₹ 2, ಮೂಲಂಗಿ ₹ 5 ಹೋಲ್‌ಸೇಲ್‌ ದರದಲ್ಲಿ ಮಾರಾಟ ಮಾಡುತ್ತಾರೆ. ವ್ಯಾಪಾರಿಗಳು ಮಾರುಕಟ್ಟೆಗೆ ಕೆಂಚಣ್ಣ ಬರುವುದನ್ನೇ ಕಾದಿರುತ್ತಾರೆ. ಒಂದು ದಿವಸ ಇವರ ಸೊಪ್ಪು ಸಂತೆಗೆ ಬಂದಿಲ್ಲ ಅಂದರೆ, ಅಂದು ಮಾರ್ಕೆಟ್‌ನಲ್ಲಿ ಪಾಲಕ್ ಸೊಪ್ಪು ಕೊರತೆ ಆಗುವಷ್ಟರ ಮಟ್ಟಿಗೆ ಇವರ ತಾಜಾ ಸೊಪ್ಪಿಗೆ ಬೇಡಿಕೆಯಿದೆ.

ವಾರದ ಏಳು ದಿನವೂ ಪ್ರತಿ ಹತ್ತು ಮಡಿಗೆ ಒಂದು ಅಂಕಣ ಮಾಡಿ, ಅದರಲ್ಲಿ 28 ದಿನಗಳ ಅಂತರದಲ್ಲಿ ಸೊಪ್ಪಿನ ಬೀಜ ನಾಟಿ ಮಾಡಿದ್ದಾರೆ. ಎಕರೆಗೆ ₹ 15 ಸಾವಿರದಿಂದ ₹ 20 ಸಾವಿರ ಖರ್ಚು ಮಾಡಿ ಪ್ರತಿ ದಿನವೂ ₹ 5 ಸಾವಿರ ಸಿವುಡಿನಷ್ಟು ಸೊಪ್ಪು ಕತ್ತರಿಸಿ ಮಾರುತ್ತಾರೆ. ಇದರ ಜೊತೆಗೆ ಮೂಲಂಗಿ ಸಹ ಬೆಳೆದಿದ್ದಾರೆ. ಮನೆಯಲ್ಲಿ ಸಾಕಿರುವ ಟಗರು ಮರಿಗಳಿಗೆ ಮೇವು ಬೆಳೆದಿದ್ದಾರೆ.

‘ಯಾವುದೇ ಬೆಳೆ ಬಿತ್ತಿ ಬೆಳೆದು ಕೈಯಲ್ಲಿ ಕಾಸು ಉಳಿಸಿಕೊಳ್ಳಲು ಕುಟುಂಬಸ್ಥರ ಸಹಕಾರ ಅತ್ಯಗತ್ಯ. ನಮ್ಮ ಕುಟುಂಬದಲ್ಲಿ ತಂದೆ ಇಳಿವಯಸ್ಸಿನಲ್ಲೂ ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡುತ್ತಾರೆ. ಎಲ್ಲರೂ ಬದುಕಬೇಕು ಎನ್ನುವ ಇರಾದೆಯಿಂದ 8 ಜನಕ್ಕೆ ಕೆಲಸ ಕೊಟ್ಟಿದ್ದೇನೆ. ಅವರೂ ವರ್ಷದ 365 ದಿನವೂ ನಮ್ಮ ಹೊಲದಲ್ಲಿ ಸೊಪ್ಪು ಬೆಳೆಯಲ್ಲಿ ಕೆಲಸ ಮಾಡುತ್ತಾರೆ. ಜೊತೆಗೆ ಹೆಂಡತಿ, ಮಗ, ಸಹೋದರ ನನಗೆ ಸಹಕರಿಸುತ್ತಾರೆ’ ಎಂದು ಕುಟುಂಬದ ಸಹಕಾರವನ್ನು ರೈತ ಕೆಂಚಪ್ಪ ಸ್ಮರಿಸಿದರು.

‘ನಾಲ್ಕು ವರ್ಷಗಳಿಂದ ಇವರ ಹೊಲದಲ್ಲಿ ಬೆಳೆದ ಸೊಪ್ಪು ಖರೀದಿಸಿ ಊಟ ಮಾಡುತ್ತಿದ್ದೇವೆ’ ಎಂದು ಸೊಪ್ಪಿನ ರುಚಿಯ ಬಗ್ಗೆ ವಕೀಲರಾದ ಸಿ.ಎಂ. ಕೊಟ್ರಯ್ಯ, ಲಿಂಗಾನಂದ ಹಾಗೂ ವಾರ್ಡನ್ ಎನ್.ಜಿ. ಬಸವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.

8 ಕುಟುಂಬಗಳಿಗೂ ಕೆಲಸ ಕೊಟ್ಟು ಆರು ವರ್ಷಗಳಿಂದ ಸೊಪ್ಪು ಬೆಳೆಯಲ್ಲಿಯೇ ಯಶ ಕಂಡಿರುವ ಕೆಂಚಪ್ಪ, ಹೊಸ ತಳಿಯ ಬಗ್ಗೆ ಆಸಕ್ತಿ ಹೊಂದಿದ್ದಾರೆ. ‘ದುಶ್ಚಟಗಳಿಗೆ ದಾಸರಾದರೆ ಯಾವ ಸಾಧನೆ ಮಾಡಲು ಆಗುವುದಿಲ್ಲ. ಯಾವ ಬೆಳೆಯಲ್ಲೂ ಯಶ ಸಿಗುವುದಿಲ್ಲ’ ಎನ್ನುವ ಕೆಂಚಣ್ಣನ ಸೊಪ್ಪು ಬೆಳೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ಆಸಕ್ತರು 99016-16962 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.