ಭಾನುವಳ್ಳಿ (ಕಡರನಾಯ್ಕನಹಳ್ಳಿ): ಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ಭಾನುವಳ್ಳಿ ಗ್ರಾಮಕ್ಕೆ ಆಗಮಿಸಿದ ಯೋಧ ಡಿ.ಎಸ್. ಸತೀಶ್ ಅವರನ್ನು ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಗ್ರಾಮದ ಚಂದ್ರಗುತ್ತೆಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಗ್ರಾಮಸ್ಥರು ತೆರೆದ ವಾಹನದಲ್ಲಿ ವೀರಯೋಧನ ಮೆರವಣಿಗೆ ಮಾಡಿದರು. ಗ್ರಾಮದ ಯುವಕರು ‘ಭಾರತ್ ಮಾತಾ ಕೀ ಜೈ’, ‘ವೀರ ಯೋಧರಿಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಕೂಗಿದರು.
ಸತೀಶ್ ಅವರನ್ನು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಸನ್ಮಾನಿಸಿದರು.
‘ಯೋಧ ಸತೀಶ್ ಅವರ ಸೇವೆ ಶ್ರೇಷ್ಠವಾದುದು. ದೇಶ ಕಾಯುವ ಯೋಧ, ಅನ್ನ ಕೊಡುವ ರೈತ, ದೇಶದ ಭವಿಷ್ಯ ನಿರ್ಮಿಸುವ ಶಿಕ್ಷಕರಿಗೆ ಸಮಾಜದಿಂದ ಗೌರವ ಸಿಗಬೇಕು. ಯೋಧರ ತ್ಯಾಗ, ಯುವಕರಿಗೆ ಸ್ಫೂರ್ತಿಯಾಗಲಿ’ ಎಂದು ಅವರು ಹೇಳಿದರು.
‘ಗ್ರಾಮದ ದಿಬ್ಬದಳ್ಳಿ ಸೋಮಪ್ಪ ಮತ್ತು ದ್ಯಾಮವ್ವ ಅವರ ಪುತ್ರ ಡಿ.ಎಸ್ ಸತೀಶ್ ಅವರು ಸುದೀರ್ಘ ಕಾಲ ದೇಶಸೇವೆ ಮಾಡಿದ್ದಾರೆ ಎಂಬುದು ನಮ್ಮ ಹೆಮ್ಮೆ. ಇವರು ಗ್ರಾಮದಲ್ಲಿ ಸಮಾಜಮುಖಿ ಸೇವೆ ಮಾಡಲಿ. ಗ್ರಾಮದ ಯುವಕರಲ್ಲಿ ದೇಶ ಪ್ರೇಮವನ್ನು ಬಿತ್ತಬೇಕಾದ ಜವಾಬ್ದಾರಿ ಇದೆ’ ಎಂದು ನಿವೃತ್ತ ಶಿಕ್ಷಕ ಟಿ. ಪುಟ್ಟಪ್ಪ ಅಭಿಪ್ರಾಯಪಟ್ಟರು.
‘ಸೇನೆಯಲ್ಲಿ ಕೆಲಸ ಮಾಡಿದ ಬಗ್ಗೆ ಹೆಮ್ಮೆಯಿದೆ. ಇಂದಿನ ಪರಿಸ್ಥಿಯಲ್ಲಿ ಇನ್ನೂ ಸೇವೆಯಲ್ಲಿ ಇರಬೇಕಿತ್ತು ಎನಿಸುತ್ತದೆ. ಯುವಕರಿಗೆ ಸೇನಾ ತರಬೇತಿ ನೀಡಲು ಮತ್ತು ಅವರಲ್ಲಿ ದೇಶಪ್ರೇಮ ಬೆಳೆಸಲು ಪ್ರಯುತ್ನಿಸುತ್ತೇನೆ’ ಎಂದು ಯೋಧ ಡಿ.ಎಸ್. ಸತೀಶ್ ತಿಳಿಸಿದರು.
ಮುಖಂಡರಾದ ಚಂದ್ರಶೇಖರ ಪೂಜಾರಿ, ವೀರೇಶ್ ಬಾದಾಮಿ, ಎ.ಕೆ. ಮಂಜಪ್ಪ, ಟಿ.ಮಲ್ಲೇಶ್, ಅತಾವುಲ್ಲಾ, ಗ್ರಂಥಪಾಲಕ ಎಸ್. ಭೀಮಪ್ಪ, ಶಿಕ್ಷಕರಾದ ಮಾರುತಿ, ಎ.ಕೆ. ಮಂಜಣ್ಣ, ನಿವೃತ್ತ ಸೈನಿಕರಾದ ಬೀರಪ್ಪ, ಚಂದ್ರಪ್ಪ, ಆಂಜನೇಯ ಮತ್ತು ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.