ADVERTISEMENT

ಕೋಣ ಬಲಿ, ಅರೆ ಬೆತ್ತಲೆ ಸೇವೆ, ಜೂಜಾಟ ರಹಿತ ಉತ್ಸವ ನಡೆಯಲಿ

ಹರಿಹರ: ದಸಂಸ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2025, 16:03 IST
Last Updated 14 ಮಾರ್ಚ್ 2025, 16:03 IST
ಹರಿಹರದಲ್ಲಿ ದಸಂಸ ಕಾರ್ಯಕರ್ತರು ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಶುಕ್ರವಾರ ಮನವಿ ನೀಡಿದರು
ಹರಿಹರದಲ್ಲಿ ದಸಂಸ ಕಾರ್ಯಕರ್ತರು ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಶುಕ್ರವಾರ ಮನವಿ ನೀಡಿದರು    

ಹರಿಹರ: ಮಾರ್ಚ್ 18ರಿಂದ 22ರವರೆಗೆ ನಡೆಯುವ ನಗರದ ಗ್ರಾಮದೇವತೆ ಮಹೋತ್ಸವದಲ್ಲಿ ಅರೆಬೆತ್ತಲೆ ಬೇವಿನ ಉಡುಗೆ ತೊಡುವುದು, ಕೋಣ ಬಲಿ ನೀಡುವಂತಹ ಮೌಢ್ಯಾಚರಣೆಗಳನ್ನು ಹಾಗೂ ಜೂಜು ಅಡ್ಡೆಗಳನ್ನು ತಡೆಯಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಶುಕ್ರವಾರ ತಹಶೀಲ್ದಾರ್ ಗುರುಬಸವರಾಜ್ ಅವರಿಗೆ ಮನವಿ ನೀಡಲಾಯಿತು.

ಪ್ರತಿ 3 ವರ್ಷಕ್ಕೊಮ್ಮೆ ಆಚರಿಸುವ ಉತ್ಸವದಲ್ಲಿ ಕೋಣ ಬಲಿ, ಅರೆ ಬೆತ್ತಲೆ ಬೇವಿನ ಉಡುಗೆ ಹಾಗೂ ಮನೋರಂಜನೆಯ ಹೆಸರಲ್ಲಿ ಜೂಜು ಆಡಿಸುವ ಸಮಾಜ ವಿರೋಧಿ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ ಎಂ ಆರೋಪಿಸಿದರು.

‘ಪ್ರತಿ ಉತ್ಸವದ ಸಂದರ್ಭದಲ್ಲಿ ಪೊಲೀಸರು ಯಾವುದೋ ಒಂದು ಕೋಣ ಹಿಡಿದು ಕೋಣ ಬಲಿ ತಡೆಯಲಾಗಿದೆ ಎಂದು ಹೇಳುತ್ತಾರೆ. ಆದರೆ, ವಾಸ್ತವವಾಗಿ ಹಲವು ಕೋಣಗಳ ಬಲಿ ರಾಜಾರೋಷವಾಗಿ ನಡೆಯುತ್ತಿದೆ. ಉತ್ಸವದ ಸಂದರ್ಭದಲ್ಲಿ ಮನೋರಂಜನೆಯ ಹೆಸರಲ್ಲಿ ಆಯಕಟ್ಟಿನ ಜಾಗಗಳಲ್ಲಿ 20ಕ್ಕೂ ಹೆಚ್ಚು ಜೂಜು ಅಡ್ಡೆಗಳನ್ನು ತೆರೆಯಲಾಗುತ್ತಿದೆ. ಇದಕ್ಕಾಗಿ ಈಗಾಗಲೆ ಪ್ರಭಾವಿ ವ್ಯಕ್ತಿಗಳು ಸಂಬಂಧಿತ ಇಲಾಖಾಧಿಕಾರಿಗಳ ಮನವೊಲಿಸುವ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ’ ಎಂದು ಆರೋಪಿಸಿದರು.

ADVERTISEMENT

ಉತ್ಸವದ ಹೆಸರಲ್ಲಿ ನಡೆಯುವ ಮೌಢ್ಯಾಚರಣೆಗಳನ್ನು ಹಾಗೂ ಜೂಜಾಟವನ್ನು ತಾಲ್ಲೂಕು, ಜಿಲ್ಲಾಡಳಿತ ಹಾಗೂ ಪೊಲೀಸರು ತಡೆಬೇಕು. ಹಿಂದಿನ ವರ್ಷಗಳಂತೆ ಈ ಅನಿಷ್ಟ ಪದ್ಧತಿಗಳು ಈ ಬಾರಿಯೂ ಮುಂದುವರಿದರೆ ತಾಲ್ಲೂಕು ಕಚೇರಿ ಮುಂದೆ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಂಘಟನೆ ಪದಾಧಿಕಾರಿಗಳಾದ ಶಿವಕುಮಾರ್, ರಮೇಶ್‌ ಮಾಳಗಿ, ರಮೇಶ್ ಎಂ, ಓಂಪ್ರಕಾಶ್, ಕುಮಾರ್ ಎ, ಧನರಾಜ್, ಗಣೇಶ್ ಆರ್, ವಿಶಾಲ್ ಎ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.