ADVERTISEMENT

ಹವಾಲ್ದಾರ್‌ ಸುರೇಶ್‌ ನಿವೃತ್ತರಾಗಿ ಇಂದು ದಾವಣಗೆರೆಗೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2021, 3:07 IST
Last Updated 2 ಆಗಸ್ಟ್ 2021, 3:07 IST
ಎಚ್‌. ಸುರೇಶ್‌ ರಾವ್‌ ಘೋರ್ಪಡೆ
ಎಚ್‌. ಸುರೇಶ್‌ ರಾವ್‌ ಘೋರ್ಪಡೆ   

ದಾವಣಗೆರೆ: 21 ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ಮಾಡಿರುವ ಎಚ್‌. ಸುರೇಶ್‌ ರಾವ್‌ ಘೋರ್ಪಡೆ ಅವರು ನಿವೃತ್ತರಾಗಿ ಆ.2ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ರೈಲು ನಿಲ್ದಾಣಕ್ಕೆ ಬರಲಿದ್ದಾರೆ.

ಇಲ್ಲಿನ ತೋಳಹುಣಸೆಯ ಹನುಮಂತಪ್ಪ ಮತ್ತು ನಾಗಮ್ಮ ಇಟಗಿ ದಂಪತಿಯ ಐವರು ಮಕ್ಕಳಲ್ಲಿ ಮೂರನೆಯವರಾದ ಸುರೇಶ್‌ ರಾವ್‌ 1979ರ ಜೂನ್‌ 4ರಂದು ಜನಿಸಿದ್ದರು. ಅವರು 2000ನೇ ಇಸವಿಯಲ್ಲಿ ಶಿವಮೊಗ್ಗದಲ್ಲಿ ನಡೆದ ಬಿಎಸ್‌ಎಫ್‌ ರ‍್ಯಾಲಿಯಲ್ಲಿ ಆಯ್ಕೆಯಾಗಿ ಭಾರತೀಯ ಗಡಿ ಭದ್ರತಾ ಪಡೆಗೆ ಸೇರ್ಪಡೆಯಾಗಿದ್ದರು. ಒಂದು ವರ್ಷ ತರಬೇತಿ ಮುಗಿಸಿ ಭಾರತ್ ಲೈನ್‌ ಆಫ್‌ ಕಂಟ್ರೋಲ್‌ (ಎಲ್‌ಒಸಿ) ಕರ್ತವ್ಯಕ್ಕೆ ರಜಾರಿಗೆ (ಜಮ್ಮು ಆ್ಯಂಡ್‌ ಕಾಶ್ಮೀರ) ಹೋದರು. 2002ರ ಸೆಪ್ಟೆಂಬರ್‌ನಲ್ಲಿ ಇಬ್ಬರು ಪಾಕಿ ಉಗ್ರರಿಗೆ ಗುಂಡಿಕ್ಕಿ ಭಾರತಕ್ಕೆ ಬರಬಹುದಾದ ಅವಘಡ ತಪ್ಪಿಸಿದ್ದರು.

2003ರಿಂದ 2006ರ ವರೆಗೆ ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿಯಲ್ಲಿ (ಐ.ಬಿ.) ಕರ್ತವ್ಯ ನಿರ್ವಹಿಸಿದರು. ಅಲ್ಲಿಂದ 2009ರವರೆಗೆ ಮೂರು ವರ್ಷ ಬಾರ್ಮರ್‌ (ರಾಜಸ್ಥಾನ) ಐ.ಬಿ.ಯಲ್ಲಿ ಕೆಲಸ ಮಾಡಿದರು. ಅಲ್ಲಿಂದ ಮೂರು ವರ್ಷ ಎಎನ್‌ಒ ಎಸ್‌ಎಲ್‌ಪಿಯಲ್ಲಿ (ಆ್ಯಂಟಿ ನಕ್ಸಲ್‌ ಆಪರೇಷನ್‌ ಸ್ಪೆಷಲ್‌) ಛತ್ತಿಸ್‌ಗಡದಲ್ಲಿ ಕಾರ್ಯನಿರ್ವಹಿಸಿದ್ದರು. ನೆಲದಲ್ಲಿ ಹೂತಿಟ್ಟಿದ್ದ ಬಾಂಬ್‌ಗಳನ್ನು ಯಾವುದೇ ಆಯುಧವಿಲ್ಲದೇ ಪತ್ತೆಹಚ್ಚಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಆಗ (2010ರ ಜ.14) ಪಾತ್ರರಾಗಿದ್ದರು. ವಾಲಾ ಗಾಂವ್‌ನಲ್ಲಿ ನಕ್ಸಲ್‌ ಎನ್‌ಕೌಂಟರ್‌ ಮಾಡಿದ್ದಕ್ಕಾಗಿ ಬಿಎಸ್‌ಎಫ್‌ನ ಅತ್ಯುನ್ನತ ಪದವಿ ಡಿಜಿಸಿಆರ್‌ (ಡೈರೆಕ್ಟರ್‌ ಜನರಲ್‌ ರೆಕಮಂಡೇಶನ್‌ ರೋಲ್‌) ನೀಡಿ ಸನ್ಮಾನಿಸಲಾಗಿತ್ತು.

ADVERTISEMENT

ಉದನ್‌ಪುರದಲ್ಲಿ ನದಿ ದಾಟುವಾಗ ತಮ್ಮದೇ ತಂಡದ ಬಾಂಬ್‌ಗಳು ಕಳೆದುಹೋದಾಗ ಹುಡುಕಿಕೊಟ್ಟು ‘ವೀರಯೋಧ’ ಎಂಬ ಬಿರುದಿಗೆ ‍ಪಾತ್ರರಾಗಿದ್ದರು. 2015ರವರೆಗೆ ಮೂರು ವರ್ಷ ಬಿಸ್ಕಿನ್‌ (ಪಂಜಾಬ್‌)ನಲ್ಲಿ ಐ.ಬಿ. ಯಲ್ಲಿ ಕೆಲಸ ಮಾಡಿದ ಅವರು ಮತ್ತೆ ಎಲ್‌ಒಸಿ ರಜಾರಿಯಲ್ಲಿ (ಜಮ್ಮು ಮತ್ತು ಕಾಶ್ಮೀರ) ಕೆಲಸಕ್ಕೆ ನಿಯೋಜನೆಯಾಗಿದ್ದರು. ಬಳಿಕ ಮೂರೂವರೆ ವರ್ಷ ಸೈನ್ಯಕ್ಕೆ ಸೇರುವವರಿಗೆ ತರಬೇತುದಾರರಾಗಿ ಕೆಲಸ ಮಾಡಿದ್ದರು. 2019ರಿಂದ ಶ್ರೀನಗರದಲ್ಲಿ ವಿಐಪಿ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ಅವರ ಸೇವೆಯನ್ನು ಪರಿಗಣಿಸಿ ಹವಾಲ್ದಾರ್‌ ಆಗಿ ಪದೋನ್ನತಿ ನೀಡಲಾಗಿತ್ತು. ಇದೀಗ ನಿವೃತ್ತರಾಗಿ ಊರಿಗೆ ಮರಳುತ್ತಿದ್ದಾರೆ.

ಹೆತ್ತವರು, ಪತ್ನಿ ಯಲ್ಲಮ್ಮ, ಮಕ್ಕಳಾದ ಸಮೃದ್ಧ್‌, ಸಂತೃಪ್ತಿ, ಅಭಿಮಾನಿಗಳು ಅವರನ್ನು ಸಂಭ್ರಮದಿಂದ ಸ್ವಾಗತಿಸಲು ಸನ್ನದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.