ADVERTISEMENT

ಜಗಳೂರು: 5 ದಶಕಗಳ ನಂತರ ತುಪ್ಪದಹಳ್ಳಿ ಕೆರೆಗೆ ಜೀವಕಳೆ

ಜಗಳೂರಿನಲ್ಲಿ ಭಾರಿ ಮಳೆ: 16 ಮನೆಗಳಿಗೆ ಹಾನಿ, ಚದರಗೊಳ್ಳ ಕೆರೆ ಏರಿ ಕುಸಿತ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:24 IST
Last Updated 20 ಮೇ 2022, 4:24 IST
ಜಗಳೂರು ತಾಲ್ಲೂಕಿನ ಕೊರಟಿಕೆರೆ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಶಾಲಾ ಕಟ್ಟಡವನ್ನು ತಹಶೀಲ್ದಾರ್ ಸಂತೋಷ್ ವೀಕ್ಷಿಸಿದರು (ಎಡಚಿತ್ರ). ಜಗಳೂರು ತಾಲ್ಲೂಕಿನ ದೊಡ್ಡ ಕೆರೆಯಾದ ತುಪ್ಪದಹಳ್ಳಿ ಕೆರೆಗೆ ಬುಧವಾರದ ಮಳೆಗೆ ಅಪಾರ ನೀರು ಹರಿದು ಬಂದಿದೆ.
ಜಗಳೂರು ತಾಲ್ಲೂಕಿನ ಕೊರಟಿಕೆರೆ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಶಾಲಾ ಕಟ್ಟಡವನ್ನು ತಹಶೀಲ್ದಾರ್ ಸಂತೋಷ್ ವೀಕ್ಷಿಸಿದರು (ಎಡಚಿತ್ರ). ಜಗಳೂರು ತಾಲ್ಲೂಕಿನ ದೊಡ್ಡ ಕೆರೆಯಾದ ತುಪ್ಪದಹಳ್ಳಿ ಕೆರೆಗೆ ಬುಧವಾರದ ಮಳೆಗೆ ಅಪಾರ ನೀರು ಹರಿದು ಬಂದಿದೆ.   

ಜಗಳೂರು: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಕೆರೆಕಟ್ಟೆಗಳು ಹಾಗೂ ಚೆಕ್ ಡ್ಯಾಂಗಳಿಗೆ ಸಾಕಷ್ಟು ನೀರು ಹರಿದು ಬರುತ್ತಿದೆ.

ಬಹಳ ವರ್ಷಗಳ ನಂತರ ಮುಂಗಾರು ಪೂರ್ವ ಮಳೆ ದೊಡ್ಡ ಪ್ರಮಾಣದಲ್ಲಿ ಬುಧವಾರ ರಾತ್ರಿ ಬಂದಿದೆ. ಕಸಬಾ, ಬಿಳಿಚೋಡು ಹೋಬಳಿ ವ್ಯಾಪ್ತಿಯ ಬಹುತೇಕ ಹಳ್ಳಿಗಳಲ್ಲಿ ಹೆಚ್ಚು ಮಳೆಯಾಗಿದ್ದು, ಸೊಕ್ಕೆ ಹೋಬಳಿಯಲ್ಲಿ ಸಾಧಾರಣ ಮಳೆ ಬಿದ್ದಿದೆ.

ಒಂದೇ ದಿನ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಅತಿದೊಡ್ಡ ಕೆರೆಗಳಲ್ಲಿ ಒಂದಾದ ತುಪ್ಪದಹಳ್ಳಿ ಕೆರೆಗೆ ಐದು ದಶಕಗಳ ನಂತರ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಕೆಲವೇ ದಿನಗಳಲ್ಲಿ ಕೋಡಿ ಬೀಳುವ ಸಾಧ್ಯತೆ ಇದೆ. 1,200 ಎಕರೆ ವ್ಯಾಪ್ತಿಯಲ್ಲಿರುವ ತುಪ್ಪದಹಳ್ಳಿ ಕೆರೆಗೆ ತುಂಗಭದ್ರಾ ನದಿಯಿಂದ 57 ಕೆರೆ ತುಂಬಿಸುವ ಯೋಜನೆಯಡಿ ಈಗಾಗಲೇ ನೀರು ಬರುತ್ತಿದ್ದು, ಬುಧವಾರ ರಾತ್ರಿಯ ಮಳೆಯಿಂದ ಕೆರೆ ಭರ್ತಿಯಾಗುವ ಹಂತದಲ್ಲಿದೆ. 1970ರ ದಶಕದಲ್ಲಿ ಕೋಡಿ ಬಿದ್ದಿದ್ದ ತುಪ್ಪದಹಳ್ಳಿ ಕೆರೆ ಇದುವರೆಗೂ ತಂಬಿಲ್ಲ. ಮೈಸೂರು ಸಂಸ್ಥಾನದಲ್ಲಿ ಮಂತ್ರಿಯಾಗಿದ್ದ ಜಗಳೂರು ಇಮಾಂಸಾಹಬೇರ ಕಾಲದಲ್ಲಿ ತುಪ್ಪದಹಳ್ಳಿ ಕೆರೆಯನ್ನು ನಿರ್ಮಿಸಲಾಗಿತ್ತು.

ADVERTISEMENT

ಐತಿಹಾಸಿಕ ಚದರಗೊಳ್ಳ ಕೆರೆಗೂ ಹೆಚ್ಚಿನ ನೀರು ಬಂದಿದ್ದು, ಕೋಡಿ ಬೀಳುವ ಹಂತದಲ್ಲಿದ್ದು, ಬುಧವಾರದ ಮಳೆಗೆ ಕೆರೆ ಏರಿಯಲ್ಲಿ ಕುಸಿತ ಕಾಣಿಸಿಕೊಂಡಿದ್ದು, ಆ ಭಾಗದ ರೈತರಲ್ಲಿ ಆತಂಕ ಮೂಡಿಸಿದೆ. ಸಣ್ಣ ನೀರಾವರಿ ಇಲಾಖೆಯ ಎಇಇ ಶಿವಮೂರ್ತಿ, ಎಂಜಿನಿಯರ್ ರಾಘವೇಂದ್ರ ಹಾಗೂ ತಹಶೀಲ್ದಾರ್ ಸಂತೋಷ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

‘ಕೆರೆ ಏರಿಯಲ್ಲಿ ಮಣ್ಣಿನ ಕುಸಿತವಾಗಿದ್ದು, ಹೆಚ್ಚಿನ ಹಾನಿಯಾಗದಂತೆ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು’ ಎಂದು ಎಂಜಿನಿಯರ್ ರಾಘವೇಂದ್ರ ತಿಳಿಸಿದರು.

ಬುಧವಾರ ರಾತ್ರಿ ಜಗಳೂರಿನಲ್ಲಿ 6.7 ಸೆಂ.ಮೀ, ಬಿಳಿಚೋಡಿನಲ್ಲಿ 11 ಸೆಂ.ಮೀ, ಸಂಗೇನಹಳ್ಳಿಯಲ್ಲಿ 6.3 ಸೆಂ.ಮೀ ಮಳೆಯಾಗಿದೆ. ಕೆಲವೆಡೆ ಶಾಲಾ ಕಟ್ಟಡಗಳಿಗೆ ಹಾನಿಯಾಗಿದೆ.

16 ಮನೆಗಳಿಗೆ ಹಾನಿ: ‘ತಾಲ್ಲೂಕಿನ ಮಾದಮುತ್ತೇನಹಳ್ಳಿ, ಕಟ್ಟಿಗೆಹಳ್ಳಿ, ಮರೇನಹಳ್ಳಿ, ನಿಬಗೂರು ಸೇರಿದಂತೆ ವಿವಿಧ ಹಳ್ಳಿಗಳಲ್ಲಿ 16 ಮನೆಗಳಿಗೆ ಹಾನಿಯಾಗಿದೆ. ಕೊರಟಿಕೆರೆ ಮತ್ತು ತಾಂಡಾದಲ್ಲಿ ಶಾಲಾ ಗೋಡೆಗಳು ಬಿದ್ದಿವೆ. ಚದರಗೊಳ್ಳ ಕೆರೆ ಏರಿಯಲ್ಲಿ ಕುಸಿತ ಕಾಣಿಸಿಕೊಂಡಿದ್ದು, ದುರಸ್ತಿ ಕೈಗೊಳ್ಳಲಾಗಿದೆ. ತುಪ್ಪದಹಳ್ಳಿ ಕೆರೆಗೆ ಹೆಚ್ಚಿನ ನೀರು ಬಂದಿದೆ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.