ADVERTISEMENT

ಅಮೃತ ಮಹೋತ್ಸವ ಸಂಭ್ರಮದಲ್ಲಿ ಹಿರೇಇಡಗೋಡು ಶಾಲೆ

ದಾನಿಗಳ ನೆರವಿನಿಂದ ಅಭಿವೃದ್ಧಿಗೊಂಡ ಸರ್ಕಾರಿ ಶಾಲೆ

ರವಿ ಆರ್.ತಿಮ್ಮಾಪುರ
Published 29 ಡಿಸೆಂಬರ್ 2022, 4:34 IST
Last Updated 29 ಡಿಸೆಂಬರ್ 2022, 4:34 IST
ಹಿರೇ ಇಡಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥಿರ್ಗಳು ಹಾಗೂ ಶಿಕ್ಷಕರ ವೃಂದ (ಎಡಚಿತ್ರ) ಶಾಲೆಯ ಗೋಡೆ ಮೇಲೆ ಪಕ್ಷಿಗಳ ಚಿತ್ತಾರ
ಹಿರೇ ಇಡಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥಿರ್ಗಳು ಹಾಗೂ ಶಿಕ್ಷಕರ ವೃಂದ (ಎಡಚಿತ್ರ) ಶಾಲೆಯ ಗೋಡೆ ಮೇಲೆ ಪಕ್ಷಿಗಳ ಚಿತ್ತಾರ   

ಆನವಟ್ಟಿ: ಸಮೀಪದ ಹಿರೇಇಡಗೋಡು ಸರ್ಕಾರಿ ಪ್ರಾಥಮಿಕ ಶಾಲೆ ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ.

ಡಿಸೆಂಬರ್ 30ಕ್ಕೆ ಶಾಲೆಗೆ 75 ವರ್ಷ ತುಂಬಲಿದ್ದು, ಸಂಭ್ರಮಕ್ಕಾಗಿ ಶಾಲೆ ಚಿತ್ತಾರಗೊಂಡಿದೆ.

ಚಿತ್ರ ಕಲಾವಿದ ಕರಿಯಪ್ಪ ಅವರ ಕುಂಚದಿಂದ, ಶಾಲೆಯ ಗೋಡೆಗಳು ನೋಡುಗರು ನಿಬ್ಬೆರಗಾಗುವಂತೆ ಚಿತ್ತಾರಗೊಂಡಿವೆ. ರಾಷ್ಟ್ರ ಲಾಂಛನ, ರಾಷ್ಟ್ರ ಪ್ರಾಣಿ, ರಾಷ್ಟ್ರ ಪಕ್ಷಿ, ರಾಷ್ಟೀಯ ಮರ, ರಾಷ್ಟೀಯ ಕ್ರೀಡೆ, ವಿಶ್ವ ವಿಖ್ಯಾತ ಜೋಗ ಜಲಪಾತ, ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ಡೊಳ್ಳು ಕುಣಿತ, ಕೋಲಾಟ, ವೀರಗಾಸೆ ಪಕ್ಷಿಧಾಮದ ಅನುಭವ ನೀಡುವ ವಿವಿಧ ಜಾತಿಯ ಪಕ್ಷಿಗಳ ಚಿತ್ರ, ಪಾಠಕ್ಕೆ ಸಂಬಂಧಿಸಿರುವ ಚಿತ್ರಗಳು, ಪಠ್ಯೇತರ ಚಿತ್ರಗಳು, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹಾಗೂ ಮಹಾನ್ ವ್ಯಕ್ತಿಗಳ ಭಾವಚಿತ್ರವನ್ನು ನೋಡುಗರ ಕಣ್ಮನ ಸೆಳೆಯುತ್ತಿವೆ.

ADVERTISEMENT

1946ರಲ್ಲಿ ಪ್ರಾರಂಭವಾದ ಶಾಲೆಯಲ್ಲಿ ‌ಈಗ 1 ರಿಂದ 7ನೇ ತರಗತಿವರೆಗೆ 84 ಮಕ್ಕಳ ದಾಖಲಾತಿ ಇದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರತಿ ವರ್ಷ ಈ ಶಾಲೆ ಮಕ್ಕಳು ಆಯ್ಕೆಯಾಗುತ್ತಾರೆ. ಎರಡು ನಲಿಕಲಿ ಕೊಠಡಿಗಳಿದ್ದು, ಒಂದು ಸ್ಮಾರ್ಟ್ ಕ್ಲಾಸ್ ಕೂಡ ಇದೆ. ಆಧುನಿಕತೆಯ ಸ್ಪರ್ಶವಿರುವ ಹಿರೇ ಇಡಗೋಡು ಶಾಲೆಯಲ್ಲಿ ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯಿದೆ. ಬಯಲು ರಂಗಮಂದಿರ, ಆಟದ ಮೈದಾನ ಇದೆ. ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದರೂ ಸಹ ಶಿಕ್ಷಕರ ನೆರವಿನಿಂದ ಜಿಲ್ಲಾ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

40ಕ್ಕೂ ಹೆಚ್ಚು ತೆಂಗಿನಗಿಡಗಳು, ಬಾಳೆ, ನಿಂಬೆ, ನೆಲ್ಲಿಕಾಯಿ, ಬೇವು ಸೇರಿದಂತೆ ವಿವಿಧ ಜಾತಿಯ ಹೂವಿನಗಿಡಗಳು ಹಾಗೂ ಚಂದದ ಗಿಡಗಳಿಂದ, ಶಾಲೆಯ ಆವರಣ ಹರಿಸಿನಿಂದ ನಳನಳಿಸುತ್ತಿದೆ.

ಇಂಡೋ ಅಮೆರಿಕನ್ ಸಂಸ್ಥೆ 5 ಟೇಬಲ್, 42 ಖರ್ಚಿಗಳನ್ನು ದಾನವಾಗಿ ನೀಡಿದೆ. ‘ಶಾಲೆಗಾಗಿ ನಾವು-ನೀವು’ ಕಾರ್ಯಕ್ರಮ ಅಡಿಯಲ್ಲಿ ಗ್ರಾಮಸ್ಥರು, ಜನಪ್ರತಿನಿಧಿಗಳು, ಮುಖಂಡರು ಕಂಪ್ಯೂಟರ್, ಮೈಕ್ ಸೇಟ್, ತಟ್ಟೆ-ಲೋಟಗಳು, ವಾಟರ್ ಫೀಲ್ಟರ್, ಶಾಲೆಗೆ ಸುಣ್ಣ-ಬಣ್ಣ ಸೇರಿದಂತೆ ಅಗತ್ಯ ನೆರವು ನೀಡಿದ್ದಾರೆ. ಗ್ರಾಮ ಪಂಚಾಯಿತಿ , ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗಳಿಂದಲೂ ಸೌಲಭ್ಯ ಸಿಕ್ಕಿದೆ.

ಪ್ರತಿ ವರ್ಷ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದ ಪ್ರಶಸ್ತಿಗಳನ್ನು ಮಕ್ಕಳು ಪಡೆದುಕೊಂಡಿದ್ದಾರೆ. ಈ ವರ್ಷ 5 ಮಕ್ಕಳು ಆಯ್ಕೆಯಾಗಿದ್ದಾರೆ. ಸಿದ್ದಪ್ಪ ಅವರಿಗೆ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಬಂದಿದೆ ಎನ್ನುತ್ತಾರೆ ಎಸ್‌ಡಿಎಂಸಿ ಸದಸ್ಯರು.

ಮುಖ್ಯಶಿಕ್ಷಕ ಹನುಮಂತಪ್ಪ ಟಿ. , ಸಹಶಿಕ್ಷಕರಾದ ಶಿವಾನಂದಪ್ಪ, ಶುಭಾಸ್ ಇಸರಗೊಂಡ, ರವಿ ಎಚ್.ಜಿ. ಸಿದ್ದಪ್ಪ ಅವರ ಶ್ರಮದಿಂದ ಶಾಲೆ ಅಭಿವೃದ್ಧಿ ಕಂಡಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಎಚ್.ಎಂ. ಉಮೇಶ್ ಹೇಳಿದರು.

ಶಿಕ್ಷಕರು ನಾಮಫಲಕ, ನಲಿಕಲಿ ಕೊಠಡಿಗಳಿಗೆ ತಾವೇ ಹಣ ಹೊಂದಿಸಿ ಗೋಡೆಯ ತುಂಬ ಕಲಿಕಾ ಚಿತ್ರಗಳನ್ನು ಮಾಡಿಸಿದ್ದಾರೆ ಎಂದರು ಅವರು.

ಗ್ರಾಮಸ್ಥರು, ಜನಪ್ರತಿನಿಧಿಗಳು, ಮುಖಂಡರು, ದಾನಿಗಳು, ಎಸ್‌ಡಿಎಂಸಿ ಸದಸ್ಯರು ಹಾಗೂ ಸಹ ಶಿಕ್ಷಕರು ಬೆಂಬಲವಾಗಿ ನಿಂತಿದ್ದರಿಂದ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ.

-ಹನುಮಂತಪ್ಪ ಟಿ., ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.