ADVERTISEMENT

ಬಾಲಕರ ಬಾಲಭವನದಲ್ಲಿ ಹೋಂ ಥಿಯೇಟರ್‌

ಹೊಸತನಕ್ಕೆ ತೆರೆದುಕೊಳ್ಳಲು ತಯಾರಾದ ಅನಾಥ ಮಕ್ಕಳು

ಬಾಲಕೃಷ್ಣ ಪಿ.ಎಚ್‌
Published 18 ಆಗಸ್ಟ್ 2020, 7:47 IST
Last Updated 18 ಆಗಸ್ಟ್ 2020, 7:47 IST
ದಾವಣಗೆರೆ ಬಾಲಕರ ಬಾಲಮಂದಿರದಲ್ಲಿ ಸ್ಮಾರ್ಟ್‌ಕ್ಲಾಸ್‌ ಉದ್ಘಾಟನೆಯಲ್ಲಿ ಮಕ್ಕಳು (ಎಡಚಿತ್ರ). ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜಯ್ಯ, ಬಾಲಮಂದಿರದ ಅಧೀಕ್ಷಕಿ ಜ್ಯೋತಿ ಕೆ.ಎಚ್‌., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಶೃತಿ ಎಚ್‌.ಎನ್‌., ಮುಖ್ಯೋಪಾಧ್ಯಾಯಿನಿ ಅನಸೂಯಮ್ಮ, ಕಾನೂನು ಪರಿವೀಕ್ಷಣಾಧಿಕಾರಿ ಪ್ರಕಾಶ್‌ ಡಿ.ಎಸ್‌. ಇದ್ದರು
ದಾವಣಗೆರೆ ಬಾಲಕರ ಬಾಲಮಂದಿರದಲ್ಲಿ ಸ್ಮಾರ್ಟ್‌ಕ್ಲಾಸ್‌ ಉದ್ಘಾಟನೆಯಲ್ಲಿ ಮಕ್ಕಳು (ಎಡಚಿತ್ರ). ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ಉದ್ಘಾಟಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಬಸವರಾಜಯ್ಯ, ಬಾಲಮಂದಿರದ ಅಧೀಕ್ಷಕಿ ಜ್ಯೋತಿ ಕೆ.ಎಚ್‌., ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಶೃತಿ ಎಚ್‌.ಎನ್‌., ಮುಖ್ಯೋಪಾಧ್ಯಾಯಿನಿ ಅನಸೂಯಮ್ಮ, ಕಾನೂನು ಪರಿವೀಕ್ಷಣಾಧಿಕಾರಿ ಪ್ರಕಾಶ್‌ ಡಿ.ಎಸ್‌. ಇದ್ದರು   

ದಾವಣಗೆರೆ: ಕೊರೊನಾ ಕಾಲದಲ್ಲಿ ಎಲ್ಲ ಸರ್ಕಾರಿ, ಖಾಸಗಿ ಶಾಲೆ–ಕಾಲೇಜುಗಳಲ್ಲಿ ಸ್ಮಾರ್ಟ್‌ ಕ್ಲಾಸ್‌ ಆರಂಭಗೊಳ್ಳುತ್ತಿವೆ. ಅವರಿಗೆ ಕಡಿಮೆ ಇಲ್ಲ ಎಂಬುದನ್ನು ಬಾಲಕರ ಬಾಲಭವನದಲ್ಲಿ ಕೂಡಾ ಸ್ಮಾರ್ಟ್‌ಕ್ಲಾಸ್‌ ನಡೆಸಲು ಹೋಂ ಥಿಯೇಟರ್‌ ತಯಾರು ಮಾಡಿ ತೋರಿಸಲಾಗಿದೆ.

ತಂದೆ ತಾಯಿ ಇಲ್ಲದ ಮಕ್ಕಳು, ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರಿಲ್ಲದೇ ಇರುವ ಬಡ ಮಕ್ಕಳು, ಮಾಜಿ ದೇವದಾಸಿಯರ ಮಕ್ಕಳು, ಕೈದಿಗಳ ಮಕ್ಕಳು, ಎಚ್‌ಐವಿ/ ಏಡ್ಸ್‌ ಪೀಡಿತರ ಸೋಂಕಿಲ್ಲದ ಮಕ್ಕಳು, ಹೆತ್ತವರ ನಿಯಂತ್ರಣದಲ್ಲಿಲ್ಲದ ಮಕ್ಕಳು ಈ ಬಾಲಭವನದಲ್ಲಿ ಇದ್ದಾರೆ. ಅವರೆಲ್ಲರೂ ಈಗ ಹೊಸ ತಂತ್ರಜ್ಞಾನದ ಮೂಲಕ ಓದಲು ತಯಾರಾಗಿದ್ದಾರೆ.

‘ಬಾಲಮಂದಿರದಲ್ಲಿ 50ರಷ್ಟು ಮಕ್ಕಳಿದ್ದಾರೆ. ಲಾಕ್‌ಡೌನ್‌ ಆದಾಗ ತಂದೆ, ತಾಯಿ ಇಲ್ಲದ ಸುಮಾರು 20 ಮಕ್ಕಳನ್ನು ಹೊರತುಪಡಿಸಿ, ಉಳಿದವರನ್ನು ಅವರ ಊರಿಗೆ ಕಳುಹಿಸಿಕೊಡಲಾಗಿದೆ. ಅವರೆಲ್ಲ ಇನ್ನೊಂದು ವಾರದಲ್ಲಿ ವಾಪಸ್‌ ಬರಲಿದ್ದಾರೆ. ಯಾವುದೇ ಉನ್ನತ ಗುಣಮಟ್ಟದ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಇಲ್ಲಿನ ಮಕ್ಕಳಿಗೂ ವಿದ್ಯಾಭ್ಯಾಸ ದೊರೆಯಬೇಕು ಎಂಬುದೇ ನಮ್ಮ ಉದ್ದೇಶ. ಮಕ್ಕಳ ರಕ್ಷಣಾ ಇಲಾಖೆಯ ನಿರ್ದೇಶಕರ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳ ಜತೆಗೆ ಚರ್ಚಿಸಿ ಹೋಂ ಥಿಯೇಟರ್‌ ಆರಂಭಿಸಿದ್ದೇವೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

‘ಅಂದಾಜು ₹ 3 ಲಕ್ಷ ವೆಚ್ಚದಲ್ಲಿ ಹೋಂ ಥಿಯೇಟರ್‌, ₹ 4.5 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ, ಇ–ಲೈಬ್ರೆರಿ, ಕಂಪ್ಯೂಟರ್‌ ತರಗತಿ ಆರಂಭಗೊಳ್ಳುತ್ತಿದೆ. ನಮ್ಮಲ್ಲಿ ಶಿಕ್ಷಕರು, ಸಿಬ್ಬಂದಿ ಸೇರಿ 15 ಮಂದಿ ಇದ್ದಾರೆ. ಈ ವರ್ಷ 5 ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ’ ಎನ್ನುತ್ತಾರೆ ಅವರು.

‘ಗ್ರಂಥಾಲಯಕ್ಕೆ ಗ್ರಂಥಾಲಯ ಇಲಾಖೆಯಿಂದ ಆರಂಭದಲ್ಲಿ 10 ಸಾವಿರ ಪುಸ್ತಕಗಳು ಬಂದಿವೆ. ಇನ್ನಷ್ಟು ಪುಸ್ತಕಗಳು ಬರಲಿವೆ. ಕಥೆ, ಕಾದಂಬರಿ, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಕೃತಿಗಳು ಹೀಗೆ ಒಟ್ಟು 25 ಸಾವಿರ ಪುಸ್ತಕಗಳು ಗ್ರಂಥಾಲಯದಲ್ಲಿ ಇರಲಿವೆ. ಪಕ್ಕದಲ್ಲೇ ಇ–ಲೈಬ್ರೆರಿ ಇರುತ್ತದೆ. ಅದಕ್ಕಾಗಿ ಎರಡು ಕಂಪ್ಯೂಟರ್‌ಗಳು ಬಂದಿವೆ. ಅದಕ್ಕೆ ಸಾಫ್ಟ್‌ವೇರ್‌ ಹಾಕಿದ ಮೇಲೆ ಸುಮಾರು 40 ಸಾವಿರ ಪುಸ್ತಕಗಳು ಮಕ್ಕಳಿಗೆ ಓದಲು ಲಭ್ಯವಾಗುತ್ತವೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಲೆಕ್ಕಿಗರಾದ ಶೃತಿ ಎಚ್‌.ಎನ್‌. ವಿವರ ನೀಡಿದರು.

‘ಪಕ್ಕದ ಕೊಠಡಿಯಲ್ಲಿ ಮಕ್ಕಳಿಗೆ ಕಂಪ್ಯೂಟರ್‌ ತರಗತಿ ನಡೆಸಲಾಗುವುದು. ಅದಲ್ಲಿ ಐದು ಕಂಪ್ಯೂಟರ್‌ಗಳು ಇರಲಿವೆ. ನಮ್ಮದೇ ಕಂಪ್ಯೂಟರ್‌ ಟೀಚರ್‌ ಇದ್ದಾರೆ. ಅವರೇ ತರಗತಿಯ ಜತೆಗೆ ಸ್ಮಾರ್ಟ್‌ಕ್ಲಾಸ್‌ಅನ್ನು ತಾಂತ್ರಿಕವಾಗಿ ನಿರ್ವಹಿಸುವರು. ಸ್ಮಾರ್ಟ್‌ಕ್ಲಾಸ್‌ನಲ್ಲಿ ಪ್ರಾಜೆಕ್ಟರ್‌ ಮತ್ತು ಡಿಜಿಟಲ್‌ ಬೋರ್ಡ್‌ ಅಳವಡಿಸಲಾಗಿದೆ’ ಎಂದು ಬಾಲಮಂದಿರದ ಅಧೀಕ್ಷಕಿ ಜ್ಯೋತಿ ಕೆ.ಎಚ್‌.
ತಿಳಿಸಿದರು.

ಕಿಯೋನಿಕ್ಸ್‌ ಸಂಸ್ಥೆಯ ಮಂಜುನಾಥ್‌ ಈ ಎಲ್ಲವನ್ನು ಅಳವಡಿಸಿಕೊಡುವ ಕಾರ್ಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.