ADVERTISEMENT

ದಾವಣಗೆರೆ: 27ರಂದು ಬೃಹತ್ ಲೋಕ ಅದಾಲತ್

ಹೆಚ್ಚಿನ ಪ್ರಕರಣಗಳ ಇತ್ಯರ್ಥ: ನ್ಯಾಯಾಧೀಶರಾದ ಗೀತಾ ಕೆ.ಬಿ. ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2021, 2:27 IST
Last Updated 6 ಮಾರ್ಚ್ 2021, 2:27 IST
ಗೀತಾ ಕೆ.ಬಿ. 
ಗೀತಾ ಕೆ.ಬಿ.    

ದಾವಣಗೆರೆ: ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ಮಾರ್ಚ್ 27ರಂದು ಜಿಲ್ಲಾ ನ್ಯಾಯಾಲಯದಲ್ಲಿ ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶರಾದ ಗೀತಾ ಕೆ.ಬಿ. ಹೇಳಿದರು.

‘ಕೋವಿಡ್ ಕಾರಣದಿಂದ ಈ ಹಿಂದೆ ನಡೆದ ಎರಡು ಇ–ಲೋಕ ಅದಾಲತ್‌ಗಳಲ್ಲಿ ಪಕ್ಷಗಾರರು ಎದುರು–ಬದುರು ಕುಳಿತು ಮಾತನಾಡಲು ಅವಕಾಶವಿರಲಿಲ್ಲ. ಆದರೂ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಈಗ ನಿರ್ಬಂಧಗಳು ಇಲ್ಲದೇ ಇರುವುದರಿಂದ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ವಿಶ್ವಾಸವಿದೆ’ ಎಂದುಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಪಕ್ಷಗಾರರು ನ್ಯಾಯಾಲಯಕ್ಕೆ ಬರಬಹುದು. ಇಲ್ಲವೇ ತಮ್ಮ ಮನೆ ಅಥವಾ ವಕೀಲರ ಕಚೇರಿಯಿಂದ ವಿಡಿಯೊ ಕಾನ್ಫರೆನ್ಸ್‌ ಮೂಲಕ ಹಾಜರಾಗಿರಾಜಿ ಸಂಧಾನದ ಮೂಲಕ ಸುಲಭವಾಗಿ, ಶೀಘ್ರವಾಗಿ ಯಾವುದೇ ಶುಲ್ಕವಿಲ್ಲದೇ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬಹುದು’ ಎಂದು ಮಾಹಿತಿ ನೀಡಿದರು.

ADVERTISEMENT

‘ಲೋಕ ಅದಾಲತ್‌ನಿಂದ ಪಕ್ಷಗಾರರು ಕೋರ್ಟ್‌ಗೆ ಅಲೆಯುವುದು ತಪ್ಪುತ್ತದೆ. ಜೊತೆಗೆ ಸಮಯವೂ ಉಳಿತಾಯವಾಗುತ್ತದೆ. ಅಲ್ಲದೇ ಲೋಕ ಅದಾಲತ್‍ನ ಆದೇಶದ ಮೇಲೆ ಮೇಲ್ಮನವಿ ಮತ್ತು ರಿವಿಜನ್ ಅರ್ಜಿ ಹಾಕಲು ಬರುವುದಿಲ್ಲ. ಈ ತೀರ್ಪು ಅಂತಿಮವಾಗಿರುತ್ತದೆ’ ಎಂದರು.

‘ಈ ಬಾರಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸುವ ಉದ್ದೇಶದಿಂದ ಮೋಟಾರ್‌ ವಾಹನಗಳ ಕಾಯ್ದೆಗಳಿ‌ಗೆ ಸಂಬಂಧಿಸಿದಂತೆ ವಿಮಾ ಕಂಪನಿಗಳು, ಚೆಕ್ ಅಮಾನ್ಯ ಪ್ರಕರಣ ಸಂಬಂಧ ಹಣಕಾಸಿನ ಸಂಸ್ಥೆಗಳು, ಕ್ರಿಮಿನಲ್ ರಾಜಿ ಮಾಡಿಕೊಳ್ಳಬಹುದಾದ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಲಾಗಿದೆ’ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸಬಹುದು ದೂರವಾಣಿ: 08192–296364, 9964924792 ಇ–ಮೇಲ್ ವಿಳಾಸ: dlsadavanagere@gmail.com ಸಂಪರ್ಕಿಸಬಹುದು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್, ‘ಲೋಕ ಅದಾಲತ್‍ಗೆ ಬ್ಯಾಂಕ್, ಪೊಲೀಸ್ ಸೇರಿ ವಿವಿಧ ಇಲಾಖೆಗಳು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಇತ್ಯರ್ಥ ಮಾಡಿಕೊಳ್ಳಬಹುದಾದ ಪ್ರಕರಣಗಳು

* ಅಪಘಾತಕ್ಕೆ ಸಂಬಂಧಿಸಿದ ಪರಿಹಾರ ಪ್ರಕರಣಗಳು

* ಪಾಲು ವಿಭಾಗ ಕೋರಿ ಸಲ್ಲಿಸಿರುವ ದಾವೆಗಳು

* ಹಣ ವಾಪಸಾತಿ ದಾವೆಗಳು

* ಬಾಡಿಗೆದಾರ ಮತ್ತು ಮಾಲೀಕರ ನಡುವಿನ ದಾವೆಗಳು

* ರಾಜಿ ಮಾಡಿಕೊಳ್ಳಬಹುದಾದಂತಹ ಕ್ರಿಮಿನಲ್ ಪ್ರಕರಣಗಳು

* ಚೆಕ್‌ ಬೌನ್ಸ್ ಪ್ರಕರಣ

* ಜೀವನಾಂಶದ ಅರ್ಜಿ ಪ್ರಕರಣ

* ಕೌಟುಂಬಿಕ ಕಲಹಗಳು (ವಿಚ್ಛೇದನ ಹೊರತುಪಡಿಸಿ)

* ವ್ಯಾಜ್ಯಪೂರ್ವ ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.