ADVERTISEMENT

ಪರವಾನಗಿ ಇಲ್ಲದೆ ಐಸ್‌ಕ್ರೀಂ ತಯಾರಿಕೆ: ಘಟಕಕ್ಕೆ ಬೀಗ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 14:01 IST
Last Updated 13 ಮಾರ್ಚ್ 2019, 14:01 IST
ಹರಪನಹಳ್ಳಿಯಲ್ಲಿ ನಡೆಯುತ್ತಿದ್ದ ಅನಧಿಕೃತ ಐಸ್‌ಕ್ರೀಂ ಘಟಕಕ್ಕೆ ಅಧಿಕಾರಿಗಳು ಬುಧವಾರ ಬೀಗ ಹಾಕಿದರು
ಹರಪನಹಳ್ಳಿಯಲ್ಲಿ ನಡೆಯುತ್ತಿದ್ದ ಅನಧಿಕೃತ ಐಸ್‌ಕ್ರೀಂ ಘಟಕಕ್ಕೆ ಅಧಿಕಾರಿಗಳು ಬುಧವಾರ ಬೀಗ ಹಾಕಿದರು   

ಹರಪನಹಳ್ಳಿ: ಪಾಳುಬಿದ್ದ ಮನೆಯೊಂದರಲ್ಲಿ ಪರವಾನಗಿ ಇಲ್ಲದೇ ಐಸ್‌ಕ್ರೀಂ ತಯಾರಿಕೆ ಮಾಡುತ್ತಿದ್ದ ಘಟಕದ ಮೇಲೆ ಬುಧವಾರ ಪುರಸಭೆ ಅಧಿಕಾರಿಗಳು ದಾಳಿ ನಡೆಸಿ ಘಟಕಕ್ಕೆ ಬೀಗ ಹಾಕಿದರು.

ಪಟ್ಟಣದ ಕೊಟ್ಟೂರು ರಸ್ತೆಯ ಘಟಕದ ಮೇಲೆ ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿತು.

‘ಐಸ್‌ಕ್ರೀಂ ತಯಾರಿಕೆಗೆ ಪುರಸಭೆ ಅಥವಾ ಬೇರಾವ ಇಲಾಖೆಗಳಿಂದಲೂ ಅನುಮತಿ ಪಡೆದಿಲ್ಲ. ಘಟಕದ ಮಾಲೀಕ ಹಬೀಬ್ ಅವರನ್ನು ವಿಚಾರಿಸಿದಾಗ ಅನುಮತಿ ಪಡೆಯದಿರುವುದು ಬೆಳಕಿಗೆ ಬಂದಿದೆ. ಘಟಕಗಳ ಮೇಲೆ ಕ್ರಮ ಜರುಗಿಸುತ್ತೇವೆ’ ಎಂದು ಮುಖ್ಯಾಧಿಕಾರಿ ನಾಗರಾಜ್ ನಾಯ್ಕ ತಿಳಿಸಿದರು.

ADVERTISEMENT

‘ಐಸ್‌ಕ್ರೀಂ ಘಟಕ ಹಲವು ವರ್ಷಗಳಿಂದ ನಡೆಯುತ್ತಿದೆ. ವಿವಿಧ ಹೆಸರಿನ ಬ್ರಾಂಡ್ ಕವರ್ ಅಳವಡಿಸಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದೆ. ಒಮ್ಮೆಯೂ ಸ್ವಚ್ಛಗೊಳಿಸದ ನೀರಿನ ತೊಟ್ಟಿಯಲ್ಲಿ, ಅವಧಿ ಮುಗಿದಿರುವ ಯಂತ್ರಗಳಲ್ಲಿ ಐಸ್‌ಕ್ರೀಂ ಉತ್ಪಾದಿಸುತ್ತಿರುವುದು ಕಂಡು ಬಂದಿದೆ. ಘಟಕದಲ್ಲಿ ಕ್ರಿಮಿಕೀಟ ನಾಶಪಡಿಸುವ ಔಷಧಗಳು, ಅವಧಿ ಮೀರಿದ ಕೆಮಿಕಲ್‌ಗಳು, ಐಸ್‌ಕ್ರೀಂ ಸ್ವಾದ ಹೆಚ್ಚಿಸುವ ರುಚಿ ಪೌಡರ್ ಮತ್ತು ಬಣ್ಣದ ರಾಸಾಯನಿಕಗಳು ದಾಳಿಯಲ್ಲಿ ದೊರೆತಿವೆ. ಘಟಕದ ವ್ಯವಸ್ಥೆಯ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದು ಪುರಸಭೆ ಹಿರಿಯ ಆರೋಗ್ಯ ಅಧಿಕಾರಿ ಮಂಜುನಾಥ ತಿಳಿಸಿದರು.

ದಾಳಿಯಲ್ಲಿ ಪುರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.