ADVERTISEMENT

ಕಾನೂನು ತಿಳಿದರೆ ದಬ್ಬಾಳಿಕೆ ನಡೆಯದು

ಕಾನೂನು ಅರಿವು, ಪೋಕ್ಸೊ ಕಾಯ್ದೆ ಸಾಕ್ಷರತಾ ಭಾರತ ಕಾರ್ಯಕ್ರಮ ಉದ್ಘಾಟಿಸಿದ ಪ್ರವೀಣ್ ನಾಯಕ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2022, 4:23 IST
Last Updated 25 ಸೆಪ್ಟೆಂಬರ್ 2022, 4:23 IST
ದಾವಣಗೆರೆಯಲ್ಲಿ ಶನಿವಾರ ನಡೆದ ಕಾನೂನು ಅರಿವು ಮತ್ತು ಪೋಕ್ಸೊ ಕಾಯ್ದೆ ಸಾಕ್ಷರತಾ ಭಾರತ ಕಾರ್ಯಕ್ರಮದಲ್ಲಿ ಕಾನೂನು ಬಗೆಗಿನ ಸಣ್ಣ ಪುಸ್ತಕ ಬಿಡುಗಡೆ ಮಾಡಲಾಯಿತು
ದಾವಣಗೆರೆಯಲ್ಲಿ ಶನಿವಾರ ನಡೆದ ಕಾನೂನು ಅರಿವು ಮತ್ತು ಪೋಕ್ಸೊ ಕಾಯ್ದೆ ಸಾಕ್ಷರತಾ ಭಾರತ ಕಾರ್ಯಕ್ರಮದಲ್ಲಿ ಕಾನೂನು ಬಗೆಗಿನ ಸಣ್ಣ ಪುಸ್ತಕ ಬಿಡುಗಡೆ ಮಾಡಲಾಯಿತು   

ದಾವಣಗೆರೆ: ಕಾನೂನಿನ ಅರಿವು ಇದ್ದರೆ ಯಾವ ಪುರಷರೂ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಪ್ರವೀಣ್ ನಾಯಕ್ ಹೇಳಿದರು.

ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ನೆರಳು ಬೀಡಿ ಕಾರ್ಮಿಕರ ಯೂನಿಯನ್ ಆಶ್ರಯದಲ್ಲಿ ಶನಿವಾರ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು ಮತ್ತು ಪೋಕ್ಸೊ ಕಾಯ್ದೆ ಸಾಕ್ಷರತಾ ಭಾರತ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತವಾಗಿ ಕಾನೂನು ನೆರವನ್ನು ಯಾವುದೇ ಜಾತಿ, ಮತ, ಲಿಂಗ ಭೇದ ಇಲ್ಲದಂತೆ ನೀಡಲಾಗುತ್ತಿದೆ.ಇದಲ್ಲದೆ ಸರ್ಕಾರದ ಯೋಜನೆಗಳು ಕೂಡ ಅನುಷ್ಠಾನವಾಗದಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಬಹುದು. ಈ ಕುರಿತಂತೆ ಕಾನೂನು ಸೇವಾ ಪ್ರಾಧಿಕಾರ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.

ADVERTISEMENT

ಪೋಕ್ಸೊ ಪ್ರಕರಣಗಳ ಬಗ್ಗೆ ಸರ್ಕಾರಿ ವಿಶೇಷ ಅಭಿಯೋಜಕರಾದ ರೇಖಾ ಎಸ್ ಕೋಟೆ ಗೌಡರ್ ಉಪನ್ಯಾಸ ನೀಡಿ, ‘ಪೋಕ್ಸೊ ಪ್ರಕರಣಗಳ ಬಗ್ಗೆ ಮಕ್ಕಳಲ್ಲಿ ಪೋಷಕರು ತಿಳಿವಳಿಕೆ ನೀಡಬೇಕು. ಇಲ್ಲದೇ ಇದ್ದರೆ ಇಂದಿನ ಮೊಬೈಲ್ ಹಾವಳಿಯಲ್ಲಿ ಅವರು ದಾರಿ ತಪ್ಪುವ ಸಂಭವ ಇರುತ್ತದೆ. ಹೆಣ್ಣುಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಲೈಂಗಿಕ ವಿಷಯಗಳ ಬಗ್ಗೆ ಹಾಗೂ ಗಂಡು ಮಕ್ಕಳಿಗೆ ಲೈಂಗಿಕ ದೌರ್ಜನ್ಯಗಳಿಂದ ಆಗುವ ಶಿಕ್ಷೆಗಳ ಬಗ್ಗೆ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.

ನ್ಯಾಯವಾದಿ ಎಲ್.ಎಚ್. ಅರುಣ ಕುಮಾರ್, ‘ಭಾರತದಲ್ಲಿ ಕಾನೂನಿನಂತೆ ಎಲ್ಲವೂ ನಡೆಯುತ್ತಿವೆ. ಆದರೆ ಭಾರತದಲ್ಲಿ ಇಂದಿಗೂ ಕಾನೂನು ಸಾಕ್ಷರತೆ ಕಡಿಮೆ ಇದೆ. ಸಮಾಜದಲ್ಲಿ ದುರ್ಬಲ ವರ್ಗ, ಶೋಷಣೆಗೆ ಒಳಗಾದದವರು ಸೇರಿದಂತೆ ಎಲ್ಲಾ ವರ್ಗಗಳ ಜನರನ್ನು ಶೋಷಣೆ ರಹಿತರನ್ನಾಗಿ ಮಾಡುವ ಅತ್ಯುತ್ತಮ ಸಾಧನವೆಂದರೆ ಅದು ಕಾನೂನು. ಅನೇಕ ಸಮಸ್ಯೆಗಳನ್ನು ಕಾನೂನಿಂದಲೇ ನಿವಾರಣೆ ಮಾಡಬಹುದು’ ಎಂದು ತಿಳಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ. ಕರಿಬಸಪ್ಪ ನಜೀಮಾ ಬಾನು ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.