ADVERTISEMENT

‘ಕಲ್ಯಾಣ ಕ್ರಾಂತಿಯಾಗದಿದ್ದರೆ ಒಂದಾಗಿರುತ್ತಿದ್ದೆವು’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 18:59 IST
Last Updated 6 ಮಾರ್ಚ್ 2019, 18:59 IST
ದಾವಣಗೆರೆ ಬಸವ ಬಳಗದಿಂದ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲರನ್ನು ಸನ್ಮಾನಿಸಲಾಯಿತು
ದಾವಣಗೆರೆ ಬಸವ ಬಳಗದಿಂದ ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲರನ್ನು ಸನ್ಮಾನಿಸಲಾಯಿತು   

ದಾವಣಗೆರೆ: ‘ಕಲ್ಯಾಣ ಕ್ರಾಂತಿ ನಡೆದು ಸಾವಿರಾರು ಶರಣರ ಹತ್ಯೆಯಾಗಿ ಜನ ದಿಕ್ಕಾಪಾಲಾಗಿದ್ದರಿಂದ ಲಿಂಗಾಯತರು ಬೇರೆ ಬೇರೆ ಪಂಗಡಗಳಾದರು. ಇಲ್ಲದೇ ಇದ್ದರೆ ಎಲ್ಲರೂ ಅನುಭವ ಮಂಟಪದ ಅಡಿಯಲ್ಲಿ ಒಟ್ಟಿಗೆ ಇರುತ್ತಿದ್ದೆವು’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಬಳಗ, ಅಜ್ಜಂಪುರ ಸೇವಾ ಟ್ರಸ್ಟ್‌ನಿಂದ ಸರಸ್ವತಿ ನಗರ ಬಸವ ಬಳಗದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನೀನು ದುಡಿದು ತಿನ್ನು’ ಎಂದು ಹೇಳಿದ ಕಾರ್ಲ್‌ಮಾರ್ಕ್ಸ್‌ ಜಗತ್ತಿಗೆ ಗೊತ್ತಾದರು. ಆದರೆ, ‘ನೀನು ದುಡಿದು ತಿನ್ನು, ಜತೆಗೆ ಹಸಿದವರಿಗೂ ಅನ್ನ ಹಾಕು’ ಎಂದು ಕಾಯಕ ಮತ್ತು ದಾಸೋಹದ ತತ್ವ ನೀಡಿದ ಬಸವಣ್ಣನನ್ನು ಇಲ್ಲೇ ಕಟ್ಟಿಹಾಕಲಾಗಿದೆ. ಸತ್ಯದ ಸಿದ್ಧಾಂತ ಇರುವ ಕನ್ನಡದ ಈ ಧರ್ಮ ಜಗತ್ತಿನ ಧರ್ಮ ಆಗದೇ ಇರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ADVERTISEMENT

ಹರಿದು ಹಂಚಿ ಹೋಗಿದ್ದ, ಯಾರದೋ ಜಗಳಿಯಲ್ಲಿ, ಅಂಗಡಿಗಳಲ್ಲಿ ಬಿದ್ದಿದ್ದ ವಚನಗಳನ್ನು ಸಂಗ್ರಹಿಸಿ ಫ.ಗು. ಹಳಗಟ್ಟಿ ನೀಡಿದ್ದರಿಂದ ವಚನಗಳು ನಮ್ಮ ಮುಂದೆ ಇವೆ. ಇದನ್ನು ಆಮೇಲೆ ಡಾ.ಎಂ.ಎಂ. ಕಲಬುರ್ಗಿ ಅವರು ಶಿವಾನುಭವ ಪತ್ರಿಕೆಯಲ್ಲಿ ಪ್ರಕಟಿಸಿ ಜನರಿಗೆ ಮುಟ್ಟಿಸಿದರು ಎಂದು ವಿವರಿಸಿದರು.

‘ಆರಂಭಿಕ ಜನಗಣತಿಯನ್ನು ತೆಗೆದು ನೋಡಿದರೆ ಅದರಲ್ಲಿ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಶೂದ್ರ ಎಂದು ಮೊದಲ ನಾಲ್ಕು ವಿಭಾಗಗಳು ಬರುತ್ತವೆ. ಐದನೇಯದನ್ನು ‘ಇ’ ಎಂದು ಗುರುತಿಸಿದ ಅದರಲ್ಲಿ ಮೊದಲನೆಯದ್ದು ಜೈನ, ಎರಡನೆಯದ್ದು ಲಿಂಗಾಯತ ಎಂದು ಪ್ರತ್ಯೇಕ ಧರ್ಮವಾಗಿಯೇ ಗುರುತಿಸಲಾಗಿತ್ತು. ಆನಂತರ ಅದನ್ನು ಬದಲಾಯಿಸಿ ಶೂದ್ರ ಜಾತಿ ಕಲಂ ಅಡಿ ತಂದರು. ಇದನ್ನೆಲ್ಲ ಸಹಿಸಿಕೊಳ್ಳಬೇಕೆ’ ಎಂದು ಪ್ರಶ್ನಿಸಿದರು.

ಬಸವ ಬಳಗದ ವಿ.ಸಿದ್ಧರಾಮ ಶರಣರು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್‌.ರಾಮಪ್ಪ, ಎ.ಎಚ್‌. ಹುಲ್ಲಪ್ಪ ಮೇಸ್ಟ್ರು, ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ವೀರಭದ್ರಪ್ಪ, ಗೋವಿಂದರಾಜ್‌, ಬಾಡದ ಆನಂದರಾಜ್‌, ಎಸ್‌.ಎಚ್‌. ಗುರುಮೂರ್ತಿ, ಬಿ.ವೀರಣ್ಣ ಉಪಸ್ಥಿತರಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಂ. ಶಿವಕುಮಾರ್‌ ಸ್ವಾಗತಿಸಿದರು. ಪಿ.ರುದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.