ADVERTISEMENT

ವೈದ್ಯಕೀಯ, ಎಂಜಿನಿಯರ್‌ನಷ್ಟೇ ಲಲಿತ ಕಲೆಗೂ ಮಹತ್ವ

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಕುಲಪತಿ ಪ್ರೊ.ಹಲಸೆ

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:32 IST
Last Updated 19 ಮೇ 2019, 10:32 IST
ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಚಿತ್ರಕಲಾ ಪ್ರದರ್ಶನವನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿ. ಹಲಸೆ ವೀಕ್ಷಿಸಿದರು. ಕಲಾವಿದ ವಿ.ಜಿ. ಅಂದಾನಿ, ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ ಎಸ್‌.ಕಮ್ಮಾರ್ ಇದ್ದರು
ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ ಚಿತ್ರಕಲಾ ಪ್ರದರ್ಶನವನ್ನು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿ. ಹಲಸೆ ವೀಕ್ಷಿಸಿದರು. ಕಲಾವಿದ ವಿ.ಜಿ. ಅಂದಾನಿ, ಕಾಲೇಜಿನ ಪ್ರಾಚಾರ್ಯ ಡಾ.ರವೀಂದ್ರ ಎಸ್‌.ಕಮ್ಮಾರ್ ಇದ್ದರು   

ದಾವಣಗೆರೆ: ಎಂಜಿನಿಯರಿಂಗ್‌, ವೈದ್ಯಕೀಯ ಕೋರ್ಸ್‌ಗೆ ಇರುವಂತೆ ಲಲಿತಕಲೆ ಕೋರ್ಸ್‌ಗೂ ಅಷ್ಟೇ ಮಹತ್ವವಿದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಕುಲಪತಿ ಪ್ರೊ. ಎಸ್‌.ವಿ. ಹಲಸೆ ಹೇಳಿದರು.

ಇಲ್ಲಿನ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ವಾರ್ಷಿಕೋತ್ಸವ ಸಮಾರಂಭ ಹಾಗೂ ವಾರ್ಷಿಕ ಕಲಾ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಲಲಿತಕಲಾ ವಿದ್ಯಾರ್ಥಿಗಳಲ್ಲಿ ಸುಪ್ತಪ್ರತಿಭೆ ಇರುತ್ತದೆ. ಅದನ್ನು ಪ್ರದರ್ಶಿಸಲು ಈ ಕೋರ್ಸ್ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಸಿಗುವ ಅವಕಾಶಗಳು, ಸೌಲಭ್ಯ ಹಾಗೂ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಂಡು, ಜೀವನದಲ್ಲಿ ಉನ್ನತಮಟ್ಟಕ್ಕೆ ಏರಬೇಕು. ಆಗ ಮಾತ್ರ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲು ಸಾಧ್ಯ ಎಂದು ಹೇಳಿದರು.

ADVERTISEMENT

ವಿದ್ಯಾರ್ಥಿಗಳು ಸಾಧನೆ ಮಾಡಬೇಕಾದರೆ ಒಳ್ಳೆಯ ವಿದ್ಯಾರ್ಥಿಯಾಗಿ ಹೊರಹೊಮ್ಮಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಬೇಕು. ಶ್ರದ್ಧೆಯಿಂದ ಕಲಿತು ಪ್ರತಿಭೆಯ ಮೂಲಕ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಓದುವುದೇ ಕಾಯಕವಾಗಬೇಕು. ಅಧ್ಯಾಪಕರಿಗೆ ಕಲಿಸುವುದೇ ಕಾಯಕವಾಗಬೇಕು. ಆಗ ಬಸವಣ್ಣನ ಹೇಳಿದ ‘ಕಾಯಕವೇ ಕೈಲಾಸ’ ನುಡಿಗೆ ಅರ್ಥ ಬರುತ್ತದೆ.

ಇಂದಿನ ವಿದ್ಯಾರ್ಥಿಗಳಿಗೆ ಕಲಿಕೆಯ ಬಗ್ಗೆ ಆಸಕ್ತಿ ಕುಂದುತ್ತದೆ. ಜೀವನದಲ್ಲಿ ಗುರಿ ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಗುರಿಯನ್ನು ಮುಟ್ಟಬೇಕಾದರೆ ಏಕಾಗ್ರತೆ ಮುಖ್ಯ. ಮಹಾವಿದ್ಯಾಲಯ ಬೆಳೆಯಬೇಕಾದರೆ ವಿದ್ಯಾರ್ಥಿಗಳ ಜೊತೆಗೆ ಅಧ್ಯಾಪಕರು ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ಇಂದಿನ ವಿದ್ಯಾರ್ಥಿಗಳು ಶೇ 80 ಭಾಗ ಜೀವನವನ್ನು ಮೊಬೈಲ್‌ನಲ್ಲಿಯೇ ಕಳೆಯುತ್ತಾರೆ. ಇದರಿಂದ ಓದಿನಲ್ಲಿ ಆಸಕ್ತಿ ಕ್ಷೀಣಿಸಲಿದ್ದು, ಆದ್ದರಿಂದ ಮೊಬೈಲ್‌ಗೆ ದಾಸರಾಗಬೇಡಿ’ ಎಂದರು.

ಖ್ಯಾತ ಕಲಾವಿದ ಡಾ.ವಿ.ಜಿ ಅಂದಾನಿ ‘ಸಾಮಾಜಿಕ ಜೀವನವೇ ಬೇರೆ, ಕಲೆಯೇ ಬೇರೆ. ಕಲೆಯಲ್ಲಿ ನಿರಂತರತೆ ಇದ್ದರೆ ಉನ್ನತಮಟ್ಟಕ್ಕೆ ಬೆಳೆಯಲು ಸಾಧ್ಯ. ಚಿತ್ರಕಲೆ ವೈವಿಧ್ಯವಾಗಿದ್ದು, ನೋಡುವ ದೃಷ್ಟಿಯಲ್ಲಿ ಹೊಸತನ ಇರಬೇಕು. ವಿದ್ಯಾರ್ಥಿಗಳು ಸಂಶೋಧನೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಚಿತ್ರಕಲೆಯಲ್ಲಿ ಕಲಾವಿದನ ದೃಷ್ಟಿ ಮುಖ್ಯ. ವಿಷಯ ದೊಡ್ಡದು ಇಲ್ಲದಿದ್ದರೂ ನೋಡುವ ದೃಷ್ಟಿ ಬೆಳೆಸಿಕೊಳ್ಳಬೇಕು. ಕಲಾವಿದ ನಿಂತ ನೀರಾಗಬಾರದು. ದೇಶದ ಬೆಳವಣಿಗೆಗೆ ತಕ್ಕಂತೆ ಹೊಸತನವನ್ನು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ರವೀಂದ್ರ ಎಸ್‌.ಕಮ್ಮಾರ್‌, ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.