ADVERTISEMENT

ಮನಸೂರೆಗೊಂಡ ಚಿತ್ರಕಲಾ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 16:30 IST
Last Updated 4 ನವೆಂಬರ್ 2020, 16:30 IST
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನ ಸಂಕಲನ ಚಿತ್ರಕುಟೀರದಲ್ಲಿ (ಆರ್ಟ್ ಗ್ಯಾಲರಿ)ಯಲ್ಲಿ ಬುಧವಾರ ಆರಂಭವಾದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಕಲಾವಿದೆ ದೀಪ್ತಿ ಜೋಷಿ ಅವರು ತಮ್ಮ ಕಲಾಕೃತಿಗಳ ಮಾಹಿತಿ ನೀಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಎಂಸಿಸಿ ‘ಬಿ’ ಬ್ಲಾಕ್‌ನ ಸಂಕಲನ ಚಿತ್ರಕುಟೀರದಲ್ಲಿ (ಆರ್ಟ್ ಗ್ಯಾಲರಿ)ಯಲ್ಲಿ ಬುಧವಾರ ಆರಂಭವಾದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಕಲಾವಿದೆ ದೀಪ್ತಿ ಜೋಷಿ ಅವರು ತಮ್ಮ ಕಲಾಕೃತಿಗಳ ಮಾಹಿತಿ ನೀಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಇಲ್ಲಿನ ಎಂಸಿಸಿ ’ಬಿ’ ಬ್ಲಾಕ್‌ನ ಸಂಕಲನ ಚಿತ್ರ ಕುಟೀರ (ಆರ್ಟ್ ಗ್ಯಾಲರಿ)ಯಲ್ಲಿ ಬುಧವಾರ ನಡೆದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ಸಂಕಲನ ಆರ್ಟ್ ಗ್ಯಾಲರಿಯಲ್ಲೇ ತರಬೇತಿ ಪಡೆದ ದೀಪ್ತಿ ಜೋಷಿ ಅವರು ರಚಿಸಿರುವ ಆಯ್ದ 45ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನಗೊಂಡಿದ್ದು, ಒಂದಕ್ಕಿಂತ ಒಂದು ವಿಭಿನ್ನವಾಗಿದ್ದವು. ನಿಸರ್ಗ ಚಿತ್ರಗಳು ಹೆಚ್ಚಾಗಿ ಪ್ರದರ್ಶನಗೊಂಡವು. ಸ್ಥಿರಚಿತ್ರಗಳು, ಪ್ರಾಣಿ– ಪಕ್ಷಿಗಳು, ಕೋವಿಡ್ ಜಾಗೃತಿ ಮೂಡಿಸುವ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಹೂವಿನ ಚಿತ್ರಗಳ ಸೌಂದರ್ಯಕ್ಕೆ ಜನರು ಮಾರುಹೋದರು.

‘ಲಾಕ್‌ಡೌನ್ ಸಂದರ್ಭದಲ್ಲೂ ಪ್ರಕೃತಿ ಹಾಗೂ ತನ್ನ ಸುತ್ತಲಿನ ಪರಿಸರದಲ್ಲಿ ಹೇಗೆ ಬದುಕಬಹುದು ಎಂಬುದು ದೀಪ್ತಿ ಅವರ ಮನಸ್ಸಿನ ಮೇಲೆ ಪರಿಣಾಮ ಬೀರಿದ್ದು, ಅವುಗಳಿಗೆ ಚಿತ್ರರೂಪ ಕೊಟ್ಟಿದ್ದಾರೆ’ ಎಂದು ಕಲಾವಿದ ರವೀಂದ್ರ ಎಚ್. ಅರಳಗುಪ್ಪಿ ತಿಳಿಸಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ಬ್ರಾಹ್ಮಣ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ ಅಚ್ಯುತ್ ಮಾತನಾಡಿ, ‘ಓದನ್ನೇ ಮುಂದುವರೆಸುತ್ತಿರುವ ಈ ಕಾಲದಲ್ಲಿ ಚಿತ್ರಕಲೆಗೆ ಗಮನಕೊಟ್ಟರೆ ಅಥವಾ ಬೇರೆ ಕಡೆ ಆಸಕ್ತಿ ವಹಿಸಿದರೆ ಪೋಷಕರು ತಡೆಯುತ್ತಾರೆ. ಆದರೆ ದೀಪ್ತಿಯವರು ಓದಿನ ಜೊತೆಗೆ ಚಿತ್ರಕಲೆಯಲ್ಲೂ ಮುಂದುವರೆದಿದ್ದರಿಂದ ಅದ್ಭುತವಾದ ಕಲಾಕೃತಿಗಳು ಮೂಡಿ ಬಂದಿವೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದರೆ ಲವಲವಿಕೆಯಿಂದ ತೊಡಗಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಸಾಕ್ಷಿ’ ಎಂದರು.

ಇದೇ ಸಂದರ್ಭ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬೋಧನಾ ಸಹಾಯಕ ಡಾ.ಸಂತೋಷ ಕುಮಾರ್ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರವೀಂದ್ರ ಎಚ್. ಅರಳಗುಪ್ಪಿ ಆನ್‌ಲೈನ್ ಪ್ರದರ್ಶನಕ್ಕೆ ಚಾಲನೆ ನೀಡಿದರು.

‘ನವೆಂಬರ್ 18ರವರೆಗೆ ಬೆಳಿಗ್ಗೆ 11ರಿಂದ 1ಗಂಟೆ, ಸಂಜೆ 4ರಿಂದ 7ರವರೆಗೆ ಪ್ರದರ್ಶನಗೊಳ್ಳಲಿದ್ದು, ನವೆಂಬರ್ 6ರಿಂದ ಆನ್‌ಲೈನ್ ಹಾಗೂ ಫೇಸ್‌ಬುಕ್‌ನಲ್ಲಿ ಪ್ರದರ್ಶನದ ಗ್ಯಾಲರಿ ತೆರೆದುಕೊಳ್ಳುತ್ತದೆ’ ಎಂದು ರವೀಂದ್ರ ತಿಳಿಸಿದರು.

ಕಾರ್ಯಕ್ರಮದಲ್ಲಿ ದೃಶ್ಯ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರವೀಂದ್ರ ಎಸ್.ಕಮ್ಮಾರ್, ಸಂಕಲನ ಸಂಸ್ಥೆಯ ಕಾರ್ಯದರ್ಶಿ ಎಂ.ಜಿ.ಉಷಾ, ದತ್ತಾತ್ರೇಯ ಭಟ್, ದೀಪ್ತಿ ಜೋಷಿ ಪೋಷಕರಾದ ರಘು ಜೋಷಿ, ಸುಶೀಲಾ ಜೋಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.