ADVERTISEMENT

ಅಡಿಕೆ ಹೆಚ್ಚಳ: ರೋಗ ಭಾದೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 26 ಮೇ 2025, 16:00 IST
Last Updated 26 ಮೇ 2025, 16:00 IST
ಜಗಳೂರು ತಾಲ್ಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಸೋಮವಾರ ನಡೆದ ಪ್ರಾತ್ಯಕ್ಷಿಕೆಯಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು
ಜಗಳೂರು ತಾಲ್ಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಸೋಮವಾರ ನಡೆದ ಪ್ರಾತ್ಯಕ್ಷಿಕೆಯಲ್ಲಿ ರೈತರಿಗೆ ಮಾಹಿತಿ ನೀಡಲಾಯಿತು   

ಜಗಳೂರು: ಇತ್ತೀಚಿನ ವರ್ಷಗಳಲ್ಲಿ ರೈತರು ವ್ಯಾಪಕವಾಗಿ ಅಡಿಕೆ ಬೆಳೆಯತ್ತ ಮುಖಮಾಡುತ್ತಿದ್ದು, ಇದರಿಂದ ಅಡಿಕೆ ಬೆಳೆಗೆ ಕೆಂಪು ಮತ್ತು ಬಿಳಿ ನುಸಿ ರೋಗಗಳಿಗೆ ಕಾರಣವಾಗುತ್ತಿದೆ. ರೈತರು ಎಚ್ಚರ ವಹಿಸಬೇಕು ಎಂದು ತೋಟಗಾರಿಕಾ ತಜ್ಞ ಎಂ.ಜಿ. ಬಸವನಗೌಡ ಸಲಹೆ ನೀಡಿದರು.

ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆ ಹಾಗೂ ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ಸಹಯೋಗದೊಂದಿಗೆ ತಾಲ್ಲೂಕಿನ ಮೆದಗಿನಕೆರೆ ಗ್ರಾಮದಲ್ಲಿ ಸೋಮವಾರ ನೇರ ಕೂರಿಗೆ ಭತ್ತ ಬಿತ್ತನೆಯ ಪ್ರಾತ್ಯಕ್ಷಿಕೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರೋಗ್ಯಕರ ಫಸಲು ಮತ್ತು ಇಳುವರಿ ಹೆಚ್ಚಿಸಲು ಅಡಿಕೆ ತೋಟಗಳಲ್ಲಿ ದ್ವಿದಳ ಧಾನ್ಯ ಬೆಳೆಯುವುದು ಸೂಕ್ತ. ಈರುಳ್ಳಿ ಬೆಳೆಯುವ ರೈತರು ತಜ್ಞರ ಸಲಹೆ ಪಡೆದು ತೋಟಗಾರಿಕಾ ವಿಶ್ವವಿದ್ಯಾಲಯಗಳು ಸಂಶೋಧಿಸಿರುವ ಆಧುನಿಕ ತಳಿಗಳನ್ನು ಬಿತ್ತನೆ ಮಾಡಿದರೆ ರೋಗ ಬಾಧೆ ನಿಯಂತ್ರಣ ಸಾಧ್ಯ ಎಂದರು.

ADVERTISEMENT

ಬರಪೀಡಿತ ತಾಲ್ಲೂಕಿನಲ್ಲಿ ಇತ್ತೀಚಿಗೆ ಉತ್ತಮ ಮಳೆಯಾಗುತ್ತಿದ್ದು, ಇಲ್ಲಿನ ರೈತರು ರಾಗಿ ಬೆಳೆ ಮಾದರಿಯಲ್ಲಿ ಕೂರಿಗೆ ಭತ್ತ ಬಿತ್ತನೆ ಮಾಡುವ ಮೂಲಕ ಲಾಭದಾಯಕ ಕೃಷಿ ಕೈಗೊಳ್ಳಬಹುದು ಎಂದು ಕೆವಿಕೆ ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ್ ರೈತರಿಗೆ ಕಿವಿಮಾತು ಹೇಳಿದರು.

ಮಳೆಯಾಶ್ರಿತ ಜಗಳೂರು ತಾಲ್ಲೂಕಿನಲ್ಲೂ ಭತ್ತವನ್ನು ಬೆಳೆಯಬಹುದು ಎಂದು ತೋರಿಸಲಾಗಿದೆ. ಒಂದು ಎಕರೆ ಪ್ರದೇಶಕ್ಕೆ 10 ಕೆ.ಜಿ. ಬಿತ್ತನೆ ಬೀಜ ಬೇಕಾಗುತ್ತದೆ. ಸುಧಾರಿತ ತಳಿಯಾದ ಆರ್‌ಎನ್‍ಆರ್-15048 ಬಿತ್ತನೆ ಮಾಡಬಹುದು. ಸಮಗ್ರ ಕಳೆ ನಿರ್ವಹಣೆ ಪದ್ಧತಿಗಳಾದ ಸೈಕಲ್ ಲೀಡರ್ ಮತ್ತು ಎತ್ತಿನ ಬೇಸಾಯ ಮಾಡುವುದರಿಂದ ಹೆಚ್ಚಿನ ಇಳುವರಿ ಪಡೆಯಬಹುದು ಎಂದರು.

ಸುಪ್ರಿಯ ಪಾಟೀಲ್, ಬಿದರಕೆರೆ ಎಫ್‍ಪಿಒ ಅಧ್ಯಕ್ಷ ಎಂ.ಎಚ್.ಮಂಜುನಾಥ್, ಉಪಾಧ್ಯಕ್ಷ ಎಸ್.ಎಂ.ಸೋಮನಗೌಡ, ನಿರ್ದೇಶಕರಾದ ಗುತ್ತಿದುರ್ಗ ಬಸವನಗೌಡ ಸೇರಿದಂತೆ ವಿವಿಧ ಹಳ್ಳಿಗಳ ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.