ADVERTISEMENT

ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುವವರ ಸಂಖ್ಯೆ ಹೆಚ್ಚಳ

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ನೂತನ ಕಚೇರಿ ಉದ್ಘಾಟಿಸಿದ ಎಡಿಜಿಪಿ ರಾಮಚಂದ್ರ ರಾವ್‌

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 16:22 IST
Last Updated 20 ನವೆಂಬರ್ 2019, 16:22 IST
ದಾವಣಗೆರೆಯ ಶಿವಕುಮಾರ್‌ಸ್ವಾಮಿ ಬಡಾವಣೆಯಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ನೂತನ ಕಚೇರಿಯನ್ನು ಅಡಿಷನಲ್ ಡೈರೆಕ್ಡರ್ ಜನರಲ್ ಆಫ್ ಪೊಲೀಸ್ ಡಾ.ಕೆ.ರಾಮಚಂದ್ರ ರಾವ್ ಉದ್ಘಾಟಿಸಿದರು
ದಾವಣಗೆರೆಯ ಶಿವಕುಮಾರ್‌ಸ್ವಾಮಿ ಬಡಾವಣೆಯಲ್ಲಿರುವ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ನೂತನ ಕಚೇರಿಯನ್ನು ಅಡಿಷನಲ್ ಡೈರೆಕ್ಡರ್ ಜನರಲ್ ಆಫ್ ಪೊಲೀಸ್ ಡಾ.ಕೆ.ರಾಮಚಂದ್ರ ರಾವ್ ಉದ್ಘಾಟಿಸಿದರು   

ದಾವಣಗೆರೆ: ಜಿಲ್ಲೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಸಂಖ್ಯೆ ಜಾಸ್ತಿ ಇದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ನಾಹಜಾನಿ) ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಕೆ.ರಾಮಚಂದ್ರರಾವ್ ತಿಳಿಸಿದರು.

ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ನಿರ್ದೇಶನಾಲಯದ ನೂತನ ಕಚೇರಿಯನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸಿಗುವ ಸೌಲಭ್ಯಗಳಲ್ಲಿ ಅನ್ಯಾಯವಾದರೆ, ಜಾತಿ ನಿಂದನೆಯಾದರೆ, ಬೇರೆಯವರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದು ಗೊತ್ತಾದರೆ ಈ ಇಲಾಖೆಯಲ್ಲಿ ದೂರು ದಾಖಲಿಸಬಹುದು. ಈ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣಪತ್ರವನ್ನು ಬೇರೆಯವರು ಪಡೆಯುತ್ತಿರುವ ಬಗ್ಗೆ ದೂರುಗಳು ಹೆಚ್ಚು ಬರುತ್ತಿವೆ ಎಂದು ಮಾಹಿತಿ ನೀಡಿದರು.

ADVERTISEMENT

‘ಸರ್ಕಾರಿ ಉದ್ಯೋಗ ಪಡೆಯಲು ಸುಳ್ಳು ಪ್ರಮಾಣ ಪತ್ರ ನೀಡುವವರೇ ಜಾಸ್ತಿ. ದೂರು ಬಂದಾಗ ನಾವು ಹೇಳಿಕೆ ಪಡೆಯುವುದಿಲ್ಲ. ಬದಲಾಗಿ ಅವರ ಹೆತ್ತವರ ಮಾಹಿತಿ, ಆರೋಪಿಗಳ ಶಾಲಾ, ಕಾಲೇಜುಗಳ ದಾಖಲೆಗಳ ವಿವರ, ಸಂಬಂಧಿಗಳ ದಾಖಲೆಗಳನ್ನು ಕಲೆ ಹಾಕುತ್ತೇವೆ. ದುರುಪಯೋಗ ಪಡಿಸಿಕೊಂಡಿದ್ದು ಹೌದು ಎಂದು ಕಂಡು ಬಂದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಜಿಲ್ಲಾ ಮಟ್ಟದ ಜಾತಿ ಪರಿಶೀಲನಾ ಸಮಿತಿಗೆ ವರದಿ ನೀಡುತ್ತೇವೆ. ಅವರು ಪ್ರಮಾಣ ಪತ್ರ ರದ್ದು ಪಡಿಸಿದರೆ ಆರೋಪಿಗಳು ಉದ್ಯೋಗ ಕಳೆದುಕೊಳ್ಳುತ್ತಾರೆ. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಾಗುತ್ತದೆ. ಜತೆಗೆ ಆರೋಪಿಗೆ ಉದ್ದೇಶಪೂರ್ವಕವಾಗಿ ಸುಳ್ಳು ಜಾತಿ ಪ್ರಮಾಣ ಪತ್ರವನ್ನು ತಹಶೀಲ್ದಾರ್‌ ನೀಡಿದ್ದರೆ ಅವರು ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಎಚ್ಚರಿಸಿದರು.

1974ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಘಟಕ ಆರಂಭವಾಯಿತು. ದಾವಣಗೆರೆ, ಬೆಳಗಾವಿ, ಮೈಸೂರು, ಮಂಗಳೂರು, ಕಲಬುರ್ಗಿಯಲ್ಲಿ ಒಂದೊಂದು ಘಟಕ ಹಾಗೂ ಬೆಂಗಳೂರಿನಲ್ಲಿ ಎರಡು ಘಟಕಗಳಿವೆ. ದಾವಣಗೆರೆ ಘಟಕದ ವ್ಯಾಪ್ತಿಯಲ್ಲಿ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾವೇರಿ ಜಿಲ್ಲೆಗಳು ಬರುತ್ತವೆ ಎಂದು ವಿವರಿಸಿದರು.

ಎಸ್‌ಸಿ, ಎಸ್‌ಟಿ ಸಮುದಾಯದವರು ಸಮಸ್ಯೆಗಳನ್ನು ದಾಖಲಿಸಲು ಬೇಕಾದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವಸತಿ ನಿಲಯಗಳಿಗೆ, ಕಾಲೊನಿಗಳಿಗೆ ಹೋಗಿ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಐಜಿಪಿ ಅಮ್ರಿತ್ ಪೌಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ರುದ್ರಮುನಿ, ಎಎಸ್‌ಪಿ ರಾಜೀವ್, ನಗರ ಉಪವಿಭಾಗದ ಡಿವೈಎಸ್‌ಪಿ ನಾಗೇಶ್ ಐತಾಳ್, ಸಿಬ್ಬಂದಿ ಇದ್ದರು.

ಎಂಸಿಸಿ ಎ ಬ್ಲಾಕ್‌ನಿಂದ ಸ್ಥಳಾಂತರ
ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಕಚೇರಿ ಎಂಸಿಸಿ ಎ ಬ್ಲಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಜನರ ಸಂಪರ್ಕಕ್ಕೆ ಅಷ್ಟಾಗಿ ಸಿಗದ ಕಾರಣ ಶಿವಕುಮಾರ ಸ್ವಾಮಿ ಬಡಾವಣೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ನಾಹಜಾನಿ ಎಸ್‌ಪಿ ಸೇರಿ ಒಟ್ಟು 24 ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ಎಡಿಜಿಪಿ ಡಾ.ಕೆ.ರಾಮಚಂದ್ರರಾವ್ ಕೋರಿದರು.

ಅಂಕಿ ಅಂಶ
100:
ರಾಜ್ಯದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ದೃಢಪಟ್ಟ ಪ್ರಕರಣ
83:ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದರಿಂದ ಉದ್ಯೋಗ ಕಳೆದುಕೊಂಡವರು.
524:ಜಿಲ್ಲಾ ಸಮಿತಿಗೆ ವರದಿ ಮಾಡಲಾದ ಪ್ರಕರಣಗಳು
144:ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾದ ತಹಶೀಲ್ದಾರರ ಸಂಖ್ಯೆ
125:ದಾವಣಗೆರೆ ಜಿಲ್ಲಾ ಸಮಿತಿಗೆ ನೀಡಿರುವ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.