ADVERTISEMENT

ಪಾಶ್ಚಿಮಾತ್ಯ ದೇಶಗಳಲ್ಲಿ ಅಸಮಾನತೆ ಕಡಿಮೆ

ಕಲಾಕುಂಚ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ , ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿದ ಪ್ರೊ. ಬಿ.ಪಿ. ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 17:14 IST
Last Updated 24 ಜನವರಿ 2021, 17:14 IST
ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಗಣೇಶ್ ಶೆಣೈ, ಸಿದ್ದಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟೀನ್ ಡಿಸೌಜಾ, ಹಿರಿಯ ಸಾಹಿತಿ ಯರ್ರಿಸ್ವಾಮಿ ಅವರೂ ಇದ್ದರು.
ದಾವಣಗೆರೆಯ ಸಿದ್ದಗಂಗಾ ಶಾಲೆಯಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಆಯೋಜಿಸಿದ್ದ ಸಂಕ್ರಾಂತಿ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ ಪಿ ವೀರಭದ್ರಪ್ಪ ಅವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಗಣೇಶ್ ಶೆಣೈ, ಸಿದ್ದಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟೀನ್ ಡಿಸೌಜಾ, ಹಿರಿಯ ಸಾಹಿತಿ ಯರ್ರಿಸ್ವಾಮಿ ಅವರೂ ಇದ್ದರು.   

ದಾವಣಗೆರೆ: ಪಾಶ್ಚಿಮಾತ್ಯ ದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆಗಳು ಕಡಿಮೆ. ಅವರೆಲ್ಲಾ ಕಾಯಕ ತತ್ವ ಪ್ರತಿಪಾದಿಸುತ್ತಾರೆ. ಬಸವಣ್ಣ ಹೇಳಿದ ಕಾಯಕವೇ ಕೈಲಾಸ ತತ್ವವನ್ನು ನಮ್ಮ ದೇಶದಲ್ಲಿ ಪಾಲಿಸಿದರೆ ಇಲ್ಲಿಯೂ ಅಸಮಾನತೆ ಮುಕ್ತ ಸಮಾಜ ನಿರ್ಮಾಣಗೊಳ್ಳಲಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ತಿಳಿಸಿದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಯುಕ್ತಾಶ್ರಯದಲ್ಲಿ ಭಾನುವಾರ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಕಲಾಕುಂಚ ಸಂಸ್ಥೆಯ 31ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಸಂಕ್ರಾಂತಿ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕೆಲಸ ಕೀಳಲ್ಲ. ಮಾಡುವ ಕಾಯಕ ಮುಖ್ಯ ಎಂಬುದು ಎಲ್ಲ ಕ್ಷೇತ್ರಗಳಲ್ಲಿ ಪಾಲನೆಯಾಗಬೇಕು. ಕಾಯಕವನ್ನು ಆಧರಿಸಿ ಮೇಲು ಕೀಳು ಎಂದು ತಿಳಿಯುವುದು ಹೋಗಬೇಕು ಎಂದು ಸಲಹೆ ನೀಡಿದರು.

ADVERTISEMENT

ಪಂಪ, ರನ್ನ, ಜನ್ನರು ಕನ್ನಡ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹನ್ನೆರಡನೇ ಶತಮಾನದಲ್ಲಿ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಭಾಷೆಯನ್ನು ಮತ್ತಷ್ಟು ಕಟ್ಟಿ ಬೆಳೆಸಿದ್ದಾರೆ. ಕುವೆಂಪು, ದ.ರಾ. ಬೇಂದ್ರೆ ಮುಂತಾದ ಕವಿಗಳು ನಾಡು ನುಡಿಯ ಘನತೆಯನ್ನು ಎತ್ತಿ ಹಿಡಿದಿದ್ದಾರೆ. ಆದರೆ ಇಂದಿನ ಯುವ ಜನಾಂಗ ವಾಣಿಜ್ಯೀಕರಣದ ಭರಾಟೆಯಲ್ಲಿ ಸಾಂಸ್ಕೃತಿಕವಾಗಿ ಬೆರೆಯುವುದರಿಂದ ವಂಚಿತವಾಗುತ್ತಿದೆ. ಇಂತಹ ಕವಿಗೋಷ್ಠಿಗಳು ಭಾಷೆ, ಸಾಹಿತ್ಯದ ಬೆಳವಣಿಗೆಗೆ ಪೂರಕವಾಗಿವೆ ಎಂದು ಹೇಳಿದರು.

ಕನ್ನಡ ಭಾಷೆಗೆ ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ದೊರೆತಿರುವುದು ನಮ್ಮೆಲ್ಲರ ಹೆಮ್ಮೆ, ಸಮಾಜ, ಸಮುದಾಯ ಹಣ ಗಳಿಕೆಯ ಹಿಂದೆ ಬಿದ್ದಿರುವ ಸಂದಿಗ್ಧ ಸಂದರ್ಭದಲ್ಲಿ ಸಾಹಿತ್ಯದ ಚಿಂತನೆಗಳು ಹೆಚ್ಚಾಗಿ ನಡೆಯಬೇಕು ಎಂದು ಪ್ರತಿಪಾದಿಸಿದರು.

ಪ್ರತಿಯೊಬ್ಬರಲ್ಲೂ ಜ್ಞಾನದ ಸಾಮ್ರಾಜ್ಯ ಬೆಳೆಯಬೇಕೆಂಬುದು ಕುವೆಂಪು ಅವರ ಆಶಯವಾಗಿತ್ತು. ಇಂದು ಎಲ್ಲರೂ ಹಣದ ಸಾಮ್ರಾಜ್ಯ ಕಟ್ಟಿಕೊಳ್ಳಲು ಮುಂದಾಗಿದ್ದಾರೆ. ಹಣದಾಸೆಗೆ ಮಾತೃಭಾಷೆಯನ್ನು ಕಡೆಗಣಿಸಲಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

ಹಿರಿಯ ಕವಿ, ಕಾರವಾರದ ಯಕ್ಷಗಾನ ಕಲಾವಿದ ನಾಗೇಶ್ ಅಣ್ವೇಕರ್ ಅಧ್ಯಕ್ಷತೆ ವಹಿಸಿದ್ದರು. ಹಾಸನ ಜಿಲ್ಲೆಯ ಹಿರಿಯ ಕವಯತ್ರಿ ಪದ್ಮಾಮೂರ್ತಿ, ವಿಜಯಪುರ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕರಾದ ಗಿರಿಜಾ ಮಾಲೀ ಪಾಟೀಲ್, ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ, ಹರಿಹರದ ಹಿರಿಯ ಕವಿ ಸುಬ್ರಮಣ್ಯ ನಾಡಿಗೇರ್, ಹಿರಿಯೂರು ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಸ್ಥೆಯ ಇ. ರವೀಶ, ವಿಜಯನಗರ ಜಿಲ್ಲೆಯ ಯುವ ಕವಿ ಸೋಮನಾಥ ಸಾಲೀಮಠ, ಸಾಹಿತಿ ಎನ್.ಟಿ. ಯರ್ರಿಸ್ವಾಮಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಎಚ್. ಮಂಜುನಾಥ್ ಉಪಸ್ಥಿತರಿದ್ದರು. ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧ ಕವಿಗಳು ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.