ADVERTISEMENT

ಕಿತ್ತೂರು ಚೆನ್ನಮ್ಮ ವಸತಿಶಾಲೆಯಲ್ಲಿ ಹ್ಯಾಂ ರೇಡಿಯೊ ಬೇಸ್ ಸ್ಟೇಷನ್ ಸಾಧನ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 7:42 IST
Last Updated 14 ಏಪ್ರಿಲ್ 2025, 7:42 IST
ಸಂತೇಬೆನ್ನೂರು ಸಮೀಪದ ಕಾಕನೂರಿನ ಕಿತ್ತೂರು ಚೆನ್ನಮ್ಮ ವಸತಿಶಾಲೆಯಲ್ಲಿ ಹ್ಯಾಂ ರೇಡಿಯೊ ಸಾಧನಗಳಿಂದ ಹೊರದೇಶದ ವ್ಯಕ್ತಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುವ ವಿಜ್ಞಾನ ಶಿಕ್ಷಕ ಸಿ.ಎಚ್.ನಾಗರಾಜ್, ಮುಖ್ಯ ಶಿಕ್ಷಕ ಮಂಜುನಾಥ ಪುರದ್
ಸಂತೇಬೆನ್ನೂರು ಸಮೀಪದ ಕಾಕನೂರಿನ ಕಿತ್ತೂರು ಚೆನ್ನಮ್ಮ ವಸತಿಶಾಲೆಯಲ್ಲಿ ಹ್ಯಾಂ ರೇಡಿಯೊ ಸಾಧನಗಳಿಂದ ಹೊರದೇಶದ ವ್ಯಕ್ತಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುವ ವಿಜ್ಞಾನ ಶಿಕ್ಷಕ ಸಿ.ಎಚ್.ನಾಗರಾಜ್, ಮುಖ್ಯ ಶಿಕ್ಷಕ ಮಂಜುನಾಥ ಪುರದ್   

ಸಂತೇಬೆನ್ನೂರು: ಕೃತಕ ಉಪಗ್ರಹ ಜಾಲದ ಮೂಲಕ ತ್ವರಿತವಾಗಿ ಅಂಗೈಯಲ್ಲಿಯೇ ಜಾಗತಿಕ ಮಾಹಿತಿ ಲಭ್ಯವಾಗುವ ವಿನೂತನ ತಂತ್ರಜ್ಞಾನದ ಹ್ಯಾಂ ರೇಡಿಯೊ ಬೇಸ್ ಸ್ಟೇಷನ್ ಸಾಧನವನ್ನು ಸಮೀಪದ ಕಾಕನೂರಿನ ಕಿತ್ತೂರು ಚೆನ್ನಮ್ಮ ವಸತಿಶಾಲೆಯಲ್ಲಿ ಸ್ಥಾಪಿಸಲಾಗಿದೆ.

ಸಂವಹನ ಸಚಿವಾಲಯದಿಂದ ಪರವಾನಗಿ ಪಡೆದು ವಸತಿಶಾಲೆಯಲ್ಲಿ ಈ ಸಾಧನವನ್ನು ₹ 1.39 ಲಕ್ಷ ವೆಚ್ಚದಲ್ಲಿ ಅಳವಡಿಸಿರುವುದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಕುತೂಹಲ ಮೂಡಿಸಲು ಸಹಕಾರಿಯಾಗಿದೆ. 

ಹ್ಯಾಂ ರೇಡಿಯೊ, ಡಿಎಂಆರ್ ಬಾಕ್ಸ್, 6 ವಾಕಿ-ಟಾಕಿ, ಆಂಟೆನಾ ಹಾಗೂ ಲ್ಯಾಪ್ ಟಾಪ್ ಸಾಧನಗಳನ್ನು ಬೇಸ್‌ ಸ್ಟೇಷನ್‌ ಒಳಗೊಂಡಿದೆ. ಇದರ ಮೂಲಕ 150 ದೇಶಗಳ ವಿಭಿನ್ನ ವ್ಯಕ್ತಿಗಳೊಂದಿಗೆ ಕುಳಿತಲ್ಲಿಯೇ ಸಂವಹನ ನಡೆಸಿ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗಲಿದೆ.

ADVERTISEMENT

ವಿವಿಧ ದೇಶಗಳ ಹವಾಮಾನ, ಸಂಸ್ಕೃತಿ, ಕಲೆ, ಸಾಹಿತ್ಯ, ಕ್ರೀಡೆ, ಪ್ರಚಲಿತ ವಿದ್ಯಮಾನಗಳು, ಇತಿಹಾಸ, ಭಾಷೆ, ಶಿಕ್ಷಣ, ವೈದ್ಯಕೀಯ ಸೌಲಭ್ಯ, ತುರ್ತು ಸೇವೆಗಳ ಬಗ್ಗೆ ಸಮಗ್ರವಾಗಿ ಅರಿಯಲು ಸಾಧನ ನೆರವಾಗಲಿದೆ. ಅದಕ್ಕಾಗಿ ನಿರ್ದಿಷ್ಟವಾದ ಸಾಫ್ಟ್‌ವೇರ್‌ ಅನ್ನು ಅಳವಡಿಸಿದ್ದು, ಇಬ್ಬರು ವಿದ್ಯಾರ್ಥಿಗಳು ಹಾಗೂ ವಿಜ್ಞಾನ ಶಿಕ್ಷಕನಿಗೆ ಕೋಡ್ ವರ್ಡ್ ನೀಡಲಾಗಿದೆ. ಇದರಿಂದ ಕಾಲ್ ಸಹಿ ಬಳಸಿ ಸಂಪರ್ಕ ಸಾಧಿಸಲಾಗುವುದು. ಈಗಾಗಲೇ ಅಮೆರಿಕ, ಕೆನಡಾ, ಇಂಗ್ಲೆಂಡ್, ಇಂಡೊನೇಷ್ಯಾ, ಥಾಯ್ಲೆಂಡ್, ಸರ್ಬಿಯಾ, ಸ್ವೀಡನ್ ದೇಶದ ವ್ಯಕ್ತಿಗಳನ್ನು ಸಂಪರ್ಕಿಸಿ ಹವಾಮಾನ ಮಾಹಿತಿ ಪಡೆಯಲಾಗಿದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಸಿ.ಎಚ್.ನಾಗರಾಜ್.

ಶಾಲಾ ಆವರಣದಲ್ಲಿ ವಾಕಿ-ಟಾಕಿಗಳ ಮೂಲಕ ಪ್ರಶೋತ್ತರಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ಮಕ್ಕಳ ಗುಂಪು ರಚಿಸಿ ವಾಕಿ-ಟಾಕಿ ನೀಡಲಾಗುತ್ತದೆ. ಅವರು ಶಿಕ್ಷಕರೊಂದಿಗೆ ದೂರದಿಂದಲೇ ಸಂವಹನ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವರು. ಸಂಬಂಧಿತ ವಿಷಯದ ಶಿಕ್ಷಕರಿಲ್ಲವೆಂದರೆ ಹ್ಯಾಂ ರೇಡಿಯೊ ಹೊಂದಿದ ಶಾಲೆಯೊಂದಿಗೆ ಸಂಪರ್ಕ ಏರ್ಪಡಿಸಿ ಪಾಠ ಆಲಿಸಲು ಸಾಧ್ಯವಾಗಲಿದೆ. ಇಂಟರ್‌ನೆಟ್ ಕಡಿತಗೊಂಡರೆ ನೈಸರ್ಗಿಕ ವಿಕೋಪಗಳ ಬಗ್ಗೆ ಮಾಹಿತಿ ನೀಡಲು ಸಾಧ್ಯವಿದೆ ಎನ್ನುತ್ತಾರೆ ಶಿಕ್ಷಕ ಪ್ರಭು ಕುಮಾರ್.

‘ಹ್ಯಾಂ ರೇಡಿಯೊ ಬಳಕೆಯಿಂದ ಹೊರರಾಜ್ಯ ಹಾಗೂ ವಿಧೇಶಗಳ ದೈನಂದಿನ ವಿಶೇಷತೆಗಳನ್ನು ತಿಳಿದುಕೊಳ್ಳುತ್ತಿದ್ದೇವೆ. ಹೊರ ದೇಶದ ಜನರೊಂದಿಗೆ ಇಂಗ್ಲಿಷ್‌ನಲ್ಲಿ ಉತ್ತರಿಸುವ ಚಾಣಾಕ್ಷತನ ಬಂದಿದೆ. ಭಾಷೆ ಉಚ್ಛಾರಣೆಯ ಮಾದರಿ ತಿಳಿದಿದೆ. 20 ಶಾಲೆಗಳೊಂದಿಗೆ ಸಂಹವನ ನಡೆಸಿ ಪ್ರಶ್ನೋತ್ತರಗಳನ್ನು ವಿನಿಮಯ ಮಾಡಲು ಸಾಧ್ಯವಾಗಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಇಂದು ಹಾಗೂ ಜೆ.ರಕ್ಷಾ.

ಸಂತೇಬೆನ್ನೂರು ಸಮೀಪದ ಕಾಕನೂರಿನ ಕಿತ್ತೂರು ಚೆನ್ನಮ್ಮ ವಸತಿಶಾಲೆಯಲ್ಲಿ ಹ್ಯಾಂ ರೇಡಿಯೊ ಸಾಧನಗಳಿಂದ ಹೊರದೇಶದ ವ್ಯಕ್ತಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿರುವ ವಿದ್ಯಾರ್ಥಿನಿಯರು

ಒಟ್ಟು 831 ವಸತಿಶಾಲೆಗಳ ಪೈಕಿ 20 ಶಾಲೆಗಳಲ್ಲಿ ಹ್ಯಾಂ ರೇಡಿಯೊ ಅಳವಡಿಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಕಾಕನೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ ಮೊದಲ ಸೌಲಭ್ಯ ಪಡೆದಿದೆ. 144 ಮೆಗಾ ಹರ್ಟ್ಸ್ ಆವರ್ತನ ಹೊಂದಿದೆ. ಶೀಘ್ರ ಸಂಪರ್ಕ ಗಳಿಸುವ ಸಾಮರ್ಥ್ಯ ಹೊಂದಿದೆ. ನೈಸರ್ಗಿಕ ವಿಕೋಪಗಳಲ್ಲಿ ಸಹಾಯಕ. ಈಚೆಗೆ ಪಂಜಾಬ್ ರಾಜ್ಯದವರೊಂದಿಗೆ ಸಂಪರ್ಕ ಪಡೆದು ಸಂಕ್ರಾಂತಿ ಹಬ್ಬದ ವಿಶೇಷತೆ ಹಂಚಿಕೊಳ್ಳಲಾಯಿತು  ಮಂಜುನಾಥ್ ಪುರದ್ ಪ್ರಾಂಶುಪಾಲ ಕಿತ್ತೂರು ರಾಣಿ ಚೆನ್ನಮ್ಮ ವಸತಿಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.