ADVERTISEMENT

ಜಗಳೂರು: ಗ್ರಾಮ ಪಂತಾಯಿತಿಗಳಲ್ಲಿ ಅವ್ಯವಹಾರ: ತನಿಖೆ ಶುರು

15ನೇ ಹಣಕಾಸು ಯೋಜನೆಯಡಿ ಅವ್ಯವಹಾರ: ಆರೋಪ

ಡಿ.ಶ್ರೀನಿವಾಸ
Published 31 ಡಿಸೆಂಬರ್ 2021, 5:18 IST
Last Updated 31 ಡಿಸೆಂಬರ್ 2021, 5:18 IST
ಬಸವನಕೋಟೆ ಪಂಚಾಯಿತಿ ಕಚೇರಿಯಲ್ಲಿ ತನಿಖೆ ಕೈಗೊಂಡಿರುವ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್
ಬಸವನಕೋಟೆ ಪಂಚಾಯಿತಿ ಕಚೇರಿಯಲ್ಲಿ ತನಿಖೆ ಕೈಗೊಂಡಿರುವ ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್   

ಜಗಳೂರು:ತಾಲ್ಲೂಕಿನ 10ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸು ಯೋಜನೆಯಡಿ ಭಾರಿ ಪ್ರಮಾಣದಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದು, ಜಿಲ್ಲಾ ಪಂಚಾಯಿತಿಯಿಂದ ತನಿಖೆ ನಡೆಯುತ್ತಿದೆ.

2021ನೇ ವರ್ಷದ ಜನವರಿಯಿಂದ ಡಿಸೆಂಬರ್‌ವರೆಗೆ ತಾಲ್ಲೂಕಿನ ಎಲ್ಲಾ ಪಂಚಾಯಿತಿಗಳಿಗೆ 15ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆಯಾಗಿದೆ. ಮಾರ್ಗಸೂಚಿ ಅನ್ವಯ ಗ್ರಾಮ ಪಂಚಾಯಿತಿ ಹಂತದಲ್ಲಿ ಸದಸ್ಯರ ಸಭೆಯಲ್ಲಿ ಕ್ರಿಯಾಯೋಜನೆ ಮಂಡಿಸಿ ಅನುಮೋದನೆ ಪಡೆಯಬೇಕು. ಆದರೆ ಕೆಲವು ಪಂಚಾಯಿತಿಗಳನ್ನುಹೊರತುಪಡಿಸಿ ಬಹುತೇಕಪಂಚಾಯಿತಿಗಳಲ್ಲಿ ಯಾವುದೇ ಸಭೆ ಕರೆಯದೆ, ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಕಲಿ ಏಜೆನ್ಸಿಗಳು ಹಾಗೂ ನಕಲಿ ಗುತ್ತಿಗೆದಾರರ ಹೆಸರಿನಲ್ಲಿ ಹಣ ದುರುಪಯೋಗ ಮಾಡಲಾಗಿದೆ.

ಗ್ರಾಮಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳದೆ, ಸಮರ್ಪಕವಾಗಿ ಬೀದಿದೀಪಗಳನ್ನು ಅಳವಡಿಸದೆ, ಕುಡಿಯುವ ನೀರಿನ ಕೊಳವೆಬಾವಿಗಳಿಗೆ ಮೋಟರ್ ಪಂಪ್ ಖರೀದಿ ಮತ್ತು ದುರಸ್ತಿ ಹೆಸರಿನಲ್ಲಿ ಲಕ್ಷಗಟ್ಟಲೇ ಹಣವನ್ನು ಲೂಟಿ ಮಾಡಿರುವ ಬಗ್ಗೆ ಜಿಲ್ಲಾ ಪಂಚಾಯಿತಿ ಕಚೇರಿಗೆ ದೂರುಗಳು ಸಲ್ಲಿಕೆಯಾಗಿವೆ.

ADVERTISEMENT

‘ತಾಲ್ಲೂಕಿನ ಬಸವನಕೋಟೆ ಗ್ರಾಮ ಪಂಚಾಯಿತಿಯಲ್ಲಿ 15ನೇ ಹಣಕಾಸು ಯೋಜನೆಯಡಿ₹ 60 ಲಕ್ಷ ಅವ್ಯವಹಾರ ನಡೆದಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ಸೇರಿ ಕೆಲಸ ಮಾಡದೆ ನಕಲಿ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ’ ಎಂದು ಆರೋಪಿಸಿ ಸದಸ್ಯರಾದ ಆರ್.ಎ. ದೇವರಾಜ್, ಬಿ.ಟಿ. ಬಸವರಾಜಪ್ಪ, ಮರಿಯಮ್ಮ, ಮಂಜಮ್ಮ, ಸುನಿತಾ, ಜ್ಯೋತಿರ್ಲಿಂಗಪ್ಪ, ನಗೀನಾಬಾನು, ಸಮಿಉಲ್ಲಾ ಸೇರಿ ಹಲವರು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಅವ್ಯವಹಾರದ ದೂರಿನ ಕಾರಣ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಅವರ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿದೆ.

‘15ನೇ ಹಣಕಾಸು ಯೋಜನೆಯಡಿ ಅವ್ಯವಹಾರದ ಆರೋಪದ ತನಿಖೆಗಾಗಿ ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ ಮೇರೆಗೆ ಬಸವನಕೋಟೆ ಪಂಚಾಯಿತಿ ಕಚೇರಿ ಹಾಗೂ ಆ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ, ಪಿಡಿಒ ಅನಿಲ್ ಸೇರಿ ಹಲವರ ವಿಚಾರಣೆ ನಡೆಸಲಾಗಿದೆ’ ಎಂದು ತನಿಖಾಧಿಕಾರಿ ಶ್ರೀನಿವಾಸ್ ಚಿಂತಾಲ್‘ಪ್ರಜಾವಾಣಿ’ಗೆ ತಿಳಿಸಿದರು.

‘ಯಾವುದೇ ಪಂಚಾಯಿತಿಗಳಲ್ಲಿ ದೂರುಗಳಿದ್ದಲ್ಲಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ವಿಜಯ್ ಮಹಾಂತೇಶ್ ದಾನಮ್ಮನವರ್ ತಿಳಿಸಿದರು.

ಹಳ್ಳಿಗಳಲ್ಲಿ ಚರಂಡಿಗಳು ತುಂಬಿ ತುಳುಕುತ್ತಿವೆ. ಬೀದಿ ದೀಪದ ವ್ಯವಸ್ಥೆ ಇಲ್ಲದೆ ಹಳ್ಳಿಗಳು ಕತ್ತಲಲ್ಲಿ ಮುಳುಗಿವೆ. ಪಿಡಿಒಗಳು ತಮ್ಮ ಆಪ್ತರು, ಸ್ನೇಹಿತರ ವಲಯದ ನಕಲಿ ಗುತ್ತಿಗೆದಾರರ ಹೆಸರಿಗೆ ಬೇಕಾಬಿಟ್ಟಿ ಹಣ ಪಾವತಿ ಮಾಡುತ್ತಾ ಲೂಟಿ ನಡೆಸುತ್ತಿದ್ದಾರೆ. ನರೇಗಾ ಕಾಮಗಾರಿಗಳಲ್ಲಿ ತಮ್ಮ ಆಪ್ತ ಗುತ್ತಿಗೆದಾರರಿಗೆ ಶೇ 40ರ ಸಾಮಗ್ರಿ ಹಣವನ್ನು ಹಾಕುತ್ತಿದ್ದಾರೆ ಎಂದು ಬಹುತೇಕ ಸದಸ್ಯರು ದೂರುತ್ತಾರೆ.

ತಾಲ್ಲೂಕಿನಲ್ಲಿ ತಲಾ ಎರಡು, ಮೂರು ಪಂಚಾಯಿತಿಗಳನ್ನು ಕೇವಲ ಒಬ್ಬ ಪಿಡಿಒಗೆ ವಹಿಸಿರುವುದು ಲೂಟಿಗೆ ಮೂಲ ಕಾರಣವಾಗಿದೆ. ಅಧಿಕಾರ ದುರುಪಯೋಗ ಆರೋಪದ ಮೇರೆಗೆ ಕಳೆದ ವರ್ಷ ಐದಾರು ಪಿಡಿಒಗಳನ್ನು ಅಮಾನತು ಮಾಡಿದ್ದ ತನಿಖೆಪ್ರಗತಿಯಲ್ಲಿದೆ. ಆದರೆ ಅದೇ ಕಳಂಕಿತ ಪಿಡಿಒಗಳಿಗೆ ತಾಲ್ಲೂಕಿನಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದು, ಮತ್ತಷ್ಟು ಅವ್ಯವಹಾರಕ್ಕೆ ಕಾರಣವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಸದಸ್ಯರು ಆರೋಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.