ADVERTISEMENT

ವ್ಯವಸ್ಥೆ ಇದ್ದರೆ ಮನೆಯಲ್ಲೇ ಐಸೊಲೇಶನ್‌

ಕೊರೊನಾ: ಆಸ್ಪತ್ರೆಗಳ ಒತ್ತಡ ತಗ್ಗಿಸಲು ಹೊಸ ಕ್ರಮ

ಬಾಲಕೃಷ್ಣ ಪಿ.ಎಚ್‌
Published 2 ಆಗಸ್ಟ್ 2020, 7:48 IST
Last Updated 2 ಆಗಸ್ಟ್ 2020, 7:48 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಕೊರೊನಾ ಸೋಂಕಿತರ ಸಂಖ್ಯೆ ವಿಪರೀತ ಏರಿಕೆಯಾಗತೊಡಗಿದ್ದರಿಂದ ಆಸ್ಪತ್ರೆಗಗಳಲ್ಲಿ ಒತ್ತಡ ಸೃಷ್ಟಿಯಾಗಿದೆ. ಅದನ್ನು ತಪ್ಪಿಸಲು ಹೋಂ ಐಸೊಲೇಶನ್‌ ಮಾಡಲು ಸರ್ಕಾರವೇ ನಿಯಮಗಳನ್ನು ಜಾರಿಗೆ ತಂದಿದೆ.

‘ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿ ರೋಗದ ಲಕ್ಷಣಗಳು ಇರುವವರಿಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಕೊಡಲಾಗುತ್ತಿದೆ. ಸೋಂಕು ದೃಢಪಟ್ಟಿದ್ದರೂ ರೋಗದ ಲಕ್ಷಣಗಳಿಲ್ಲದವರನ್ನು ಜೆ.ಎಚ್‌. ಪಟೇಲ್‌ ಬಡಾವಣೆ, ಹೊನ್ನಾಳಿಯ ಮಾದನಬಾವಿ, ಚನ್ನಗಿರಿಯ ಕೆರೆಬಿಳಚಿ, ಜಗಳೂರಿನ ಮುಗ್ಗಿದ ರಾಗಿಹಳ್ಳಿ ಮುಂತಾದ ಕಡೆಗಳಲ್ಲಿ ಇರಿಸಲಾಗುತ್ತಿದೆ. ಅಲ್ಲಿಯೇ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಯಾರಿಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರುವ ಸೌಲಭ್ಯ ಇದೆಯೇ ಅವರಿಗೆ ಮನೆಯಲ್ಲೇ ಐಸೊಲೇಶನ್‌ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆ ಅಥವಾ ಐಸೊಲೇಶನ್‌ ಕೇಂದ್ರಗಳಲ್ಲಿ ಇರುವುದಕ್ಕಿಂತ ಮನೆಯಲ್ಲೇ ಇದ್ದರೆ ಮಾನಸಿಕವಾಗಿ ಅವರು ಕುಗ್ಗುವುದು ತಪ್ಪುತ್ತದೆ. ಜತೆಗೆ ಆಸ್ಪತ್ರೆ, ಐಸೊಲೇಶನ್ ಕೇಂದ್ರಗಳಲ್ಲಿ ಜಾಗ ಇಲ್ಲ ಎಂಬ ಸಮಸ್ಯೆಯೂ ಇಲ್ಲದಾಗುತ್ತದೆ. ಅದಕ್ಕಾಗಿ ಈಗಾಗಲೇ ಹೋಂ ಐಸೊಲೇಶನ್‌ ಆರಂಭಗೊಂಡಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ರೋಗದ ಲಕ್ಷಣ ಇಲ್ಲದವರಿಗೆ ಪ್ರತ್ಯೇಕ ಕೊಠಡಿ, ಅದಕ್ಕೆ ಹೊಂದಿಕೊಂಡಂತೆ ಸ್ನಾನಗೃಹ/ಶೌಚಾಲಯ ಇರಬೇಕು. ಅವರು ಪಲ್ಸ್‌ ಆಕ್ಸಿಮೀಟರ್‌, ಡಿಜಿಟಲ್‌ ಥರ್ಮೋಮೀಟರ್‌ ಇಟ್ಟುಕೊಳ್ಳಬೇಕು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಹೀಗೆ ನಾಲ್ಕು ಬಾರಿ ಚಾರ್ಟಲ್ಲಿ ಪಲ್ಸ್‌ ಎಂಟ್ರಿ ಮಾಡಬೇಕು. ಆಕ್ಸಿಜನ್‌ ಸ್ಯಾಚುರೇಶನ್‌ 94ಕ್ಕಿಂತ ಕಡಿಮೆ ಬಂದರೆ ಕೂಡಲೇ ಸ್ಥಳೀಯ ವೈದ್ಯಾಧಿಕಾರಿಗೆ ತಿಳಿಸಬೇಕು. ಆಗ ಅವರನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ’ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ.ಡಿ. ರಾಘವನ್‌ ಮಾಹಿತಿ ನೀಡಿದರು.

‘10 ದಿನ ಐಸೊಲೇಶನ್‌ನಲ್ಲಿ ಇರಬೇಕು. ಈ ಸಂದರ್ಭದಲ್ಲಿ ಯಾರೂ ಆ ಮನೆಗೆ ಬರಬಾರದು. ಮನೆಯಿಂದ ಯಾರೂ ಹೊರಗೆ ಹೋಗಬಾರದು. 10 ದಿನಗಳ ಬಳಿಕವೂ ಸೋಂಕು ಇದ್ದರೆ ಮತ್ತೆ ನಾಲ್ಕು ದಿನ ಐಸೊಲೇಶನ್‌ನಲ್ಲಿ ಇರಬೇಕಾಗುತ್ತದೆ. ಒಮ್ಮೆ ಬಿಡುಗಡೆ ಎಂದು ತೋರಿಸಿದ ಬಳಿಕ ಮತ್ತೆ 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇರಬೇಕು’ ಎಂದು ವಿವರ ನೀಡಿದರು.

ಸದ್ಯ 150 ಮಂದಿ ಹೋಂ ಐಸೊಲೇಶನ್‌ನಲ್ಲಿದ್ದಾರೆ. ಸ್ಥಳೀಯ ಆರೋಗ್ಯ ಕಾರ್ಯಕರ್ತರು, ವೈದ್ಯಾಧಿಕಾರಿಗಳು ಆ ಮನೆಗಳಿಗೆ ಭೇಟಿ ಮಾಡುತ್ತಾರೆ ಎಂದು ತಿಳಿಸಿದರು.

‘ಗ್ರಾಮಾಂತರ ಪ್ರದೇಶಗಳಲ್ಲಿ ಹೋಂ ಐಸೊಲೇಶನ್‌ ಸ್ವಲ್ಪ ಕಷ್ಟ. ಅದೇ ರೀತಿ ಸ್ಲಂ, ಒತ್ತೊತ್ತಾಗಿ ಇರುವ ಮನೆಗಳು, ಜನಸಂದಣಿ ಹೆಚ್ಚಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಐಸೊಲೇಶನ್‌ ಮಾಡಬಹುದು' ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.