ADVERTISEMENT

ಜಗಳೂರಿನಲ್ಲಿ ಸೀಮಂತದ ಊಟ: 150 ಜನ ಅಸ್ವಸ್ಥ

ಗ್ರಾಮಕ್ಕೆ ದೌಡಾಯಿಸಿದ ವೈದ್ಯಾಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 9:26 IST
Last Updated 25 ಆಗಸ್ಟ್ 2021, 9:26 IST
ಜಗಳೂರು ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ವಿಷಾಹಾರ ಸೇವಿಸಿ 150 ಜನರು ಅಸ್ವಸ್ಥರಾಗಿದ್ದು, ತಾಲ್ಲೂಕು ಅಸ್ಪತ್ರೆಯಲ್ಲಿ ಮಂಗಳವಾರ ಚಿಕಿತ್ಸೆ ನೀಡಲಾಯಿತು.
ಜಗಳೂರು ತಾಲ್ಲೂಕಿನ ಬೆಣ್ಣೆಹಳ್ಳಿ ಗ್ರಾಮದಲ್ಲಿ ವಿಷಾಹಾರ ಸೇವಿಸಿ 150 ಜನರು ಅಸ್ವಸ್ಥರಾಗಿದ್ದು, ತಾಲ್ಲೂಕು ಅಸ್ಪತ್ರೆಯಲ್ಲಿ ಮಂಗಳವಾರ ಚಿಕಿತ್ಸೆ ನೀಡಲಾಯಿತು.   

ಜಗಳೂರು: ಸೀಮಂತ ಕಾರ್ಯಕ್ರಮದಲ್ಲಿ ಹೋಳಿಗೆ ಊಟ ಮಾಡಿದ್ದ 150ಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಸೋಮವಾರ ರಾತ್ರಿ ಗ್ರಾಮದಲ್ಲಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ನಂತರ 200ಕ್ಕೂ ಹೆಚ್ಚು ಜನರು ಸಾಮೂಹಿಕವಾಗಿ ಹೋಳಿಗೆ ಮತ್ತು ಬಾಳೆಹಣ್ಣಿನ ಸೀಕರಣೆ ಸೇವಿಸಿದ್ದರು. ಮಧ್ಯರಾತ್ರಿಯಿಂದ ಹಲವರಿಗೆ ತೀವ್ರ ಹೊಟ್ಟೆನೋವು ಮತ್ತು ಜ್ವರ ಕಾಣಿಸಿಕೊಂಡಿದೆ. ಮಂಗಳವಾರ ಬೆಳಿಗ್ಗೆಯಿಂದ ಇಡೀ ದಿನ 150ಕ್ಕೂ ಹೆಚ್ಚು ಗ್ರಾಮಸ್ಥರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.

ಹೋಳಿಗೆಯಷ್ಟೇ ತಿಂದ ಕೆಲವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಬಾಳೆಹಣ್ಣಿನ ಸೀಕರಣೆಯನ್ನು ಸೇವಿಸಿದ ಎಲ್ಲರೂ ಅಸ್ವಸ್ಥರಾಗಿದ್ದಾರೆ. ಇಡೀ ಗ್ರಾಮದಲ್ಲಿ ಸಾಮೂಹಿಕವಾಗಿ ಜನರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಅವರ ಸೂಚನೆಯ ಮೇರೆಗೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮಕ್ಕೆ ತೆರಳಿದ್ದು, ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಗ್ರಾಮದ ಕೆಂಚಪ್ಪ, ನಿಜಲಿಂಗಪ್ಪ, ಕಮಲಮ್ಮ, ಮೀನಕ್ಕ ಮುಂತಾದವರು ತೀವ್ರ ಅಸ್ವಸ್ಥರಾಗಿದ್ದು, ಪಟ್ಟಣದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಸಕಾಲದಲ್ಲಿ ಚಿಕಿತ್ಸೆ ಸಿಕ್ಕಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲರನ್ನೂ ಸೂಕ್ಷ್ಮವಾಗಿ ತಪಾಸಣೆ ಮಾಡಿ, ಆರೋಗ್ಯದ ಮೇಲೆ ನಿಗಾ ಇಡಲಾಗುವುದು ಎಂದು ವೈದ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.