ದಾವಣಗೆರೆ: ಜೆಜೆಎಂ ಯೋಜನೆ ಅಡಿಯಲ್ಲಿ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ರಾಜ್ಯದ 32 ಗ್ರಾಮಗಳ ಪೈಕಿ ದಾವಣಗೆರೆಯ 13 ಗ್ರಾಮಗಳಿದ್ದು, ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ಮರಿಯಪ್ಪ ಕುಳ್ಳಪ್ಪ ಹೇಳಿದರು.
ನಗರದ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ನಡೆದ ‘ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಯೋಜನೆಗೆ ವಿಶ್ವಬ್ಯಾಂಕ್ ₹3 ಸಾವಿರ ಕೋಟಿ ನೀಡಿದೆ. ಇಲ್ಲಿನ ಅಧಿಕಾರಿಗಳ ಸಹಕಾರದಿಂದ 13 ಗ್ರಾಮಗಳಲ್ಲಿ ದಿನದ 24 ತಾಸು ನೀರು ಒದಗಿಸಲು ಸಾಧ್ಯವಾಗಿದೆ. ನಿಯಮಿತವಾಗಿ ನೀರಿನ ಗುಣಮಟ್ಟವನ್ನು ಪರಿಶೀಲನೆ ಮಾಡಲಾಗುವುದು ಎಂದರು.
ಯೋಜನೆಯಡಿ ಎಚ್‌ಟಿಪಿ ಬ್ಲಾಕ್ ಪೈಪ್‌ಗಳನ್ನು ಅಳವಡಿಸಿ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ. ಇದು ದೀರ್ಘಕಾಲ ಬಾಳಿಕೆ ಬರುವುದಲ್ಲದೇ ಆರೋಗ್ಯಕ್ಕೂ ಪೂರವಾಗಿದೆ. ಪ್ರತಿ ಗ್ರಾಮಗಳೂ ಈ ಯೋಜನೆಯನ್ನು ಅಳವಡಿಸಿಕೊಂಡು ಇತರೆ ಗ್ರಾಮ ಪಂಚಾಯಿತಿಗಳಿಗೆ ಸ್ಫೂರ್ತಿಯಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಹೇಳಿದರು.
ಘೋಷಣೆ ಮಾಡಿದ ಗ್ರಾಮಗಳಲ್ಲಿ ಯೋಜನೆಯನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದು ದೊಡ್ಡ ಸಾಧನೆ. 100 ಗ್ರಾಮಗಳಲ್ಲಿ ಅನುಷ್ಠಾನಕ್ಕೆ ತಂದು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕಿದ್ದು, ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.
ವಿಶ್ವಬ್ಯಾಂಕ್ ಟಾಸ್ಕ್ ಟೀಮ್ ಲೀಡರ್ ಕ್ರಿಸ್ಟೋಫರ್ ವಿಲಿಯಮ್ಸ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪಕಾರ್ಯದರ್ಶಿ ಜಾಫರ್ ಷರೀರ್ಫ ಸುತಾರ್, ಎಂಜಿನಿಯರ್‌ಗಳು, ಪಿಡಿಒಗಳು, ಸ್ವ-ಸಹಾಯ ಸಂಘದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.