ಸಾಸ್ವೆಹಳ್ಳಿ: ಸಮೀಪದ ಕಮ್ಮಾರಗಟ್ಟೆ ಗ್ರಾಮದಲ್ಲಿ ಗರುಡ ಪಂಚಮಿಯಂದು ಕುಂಬಳೂರಿನ ಗಣಮಗ ದುಂಡ್ಯಪ್ಪ ಐದು ದಿನಗಳ ಕಾಲ ಉಪವಾಸ ವ್ರತ ಆಚರಿಸಿ ಸಂಪ್ರದಾಯ ನಿಯಮಗಳೊಂದಿಗೆ 'ಶಿಖರದ ತುದಿಗೆ ಘಟಸರ್ಪ ಆಡಿತ್ರಲೆ, ಭೂಲೋಕದ ಮುತ್ತು ಗಗನಕೇರಿತ್ರಲೆ, ಅದಕ್ಕೆ ನಾನಿದ್ದೀನಿ' ಎಂಬ ಭವಿಷ್ಯವಾಣಿಯನ್ನು ನುಡಿದರು.
ಹೆಳವನಕಟ್ಟೆ ಗಿರಿಯಮ್ಮನ ಸಾನಿಧ್ಯದಲ್ಲಿ ಕಮ್ಮಾರಗಟ್ಟೆಯ ಮತ್ತು ಕುಂಬಳೂರಿನ ಆಂಜನೇಯ ಸ್ವಾಮಿಯ ನೇತೃತ್ವದಲ್ಲಿ, ಸುತ್ತಮುತ್ತಲ ಗ್ರಾಮಗಳಾದ ಯಲೋದಹಳ್ಳಿ, ದಾಗಿನಕಟ್ಟೆ, ಸಿಂಗಟಗೆರೆ, ಕುಂಬಳೂರು, ಘಂಟ್ಯಾಪುರ, ತರಗನಹಳ್ಳಿ, ತಕ್ಕನಹಳ್ಳಿ, ಉಜ್ಜನಿಪುರ, ರೆಡ್ಡಿಹಳ್ಳಿ, ಅರಕೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ದೇವಾನುದೇವತೆಗಳು ಸಮ್ಮುಖದಲ್ಲಿ ಅದ್ಧೂರಿ ಜಾತ್ರೆಯು ನಡೆಯಿತು.
ನವದಂಪತಿಗಳು ಬುಡಮೇಲಾದ ಹುಣಸೆಮರಕ್ಕೆ ಮಂಡಕ್ಕಿ ಎರಚಿ, ಆಂಜನೇಯ ಸ್ವಾಮಿಯ ದರ್ಶನ ಪಡೆದರು. ಜಾತ್ರೆಯಲ್ಲಿ ತಮಗೆ ಇಷ್ಟವಾದ ತಿಂಡಿ, ತಿನಿಸು ಖರಿದೀಸಿದರು. ಮಳೆ ಬಿಡುವು ನೀಡಿದ್ದರಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.
ಭವಿಷ್ಯವಾಣಿಯ ವಿಶ್ಲೇಷಣೆ
ರಾಜಕೀಯ ಹಾಗೂ ರೈತರಿಗೆ ಸಂಬಂಧಿಸಿದಂತೆ ಈ ಭವಿಷ್ಯವಾಣಿಯನ್ನು ಜನರು ವಿಶ್ಲೇಷಿಸುತ್ತಾರೆ. ಈ ವಾಕ್ಯವು ನಾನಾ ಅರ್ಥವನ್ನು ಹೊಂದಿರುತ್ತದೆ. 'ಶಿಖರದ ತುದಿಗೆ ಘಟಸರ್ಪ ಆಡಿತ್ರಲೆ' ಎಂದರೆ ರಾಜಕೀಯ ವಿಶ್ಲೇಷಣೆಯಾಗಿದ್ದು, ರಾಜಕಾರಣದಲ್ಲಿ ಘಟಸರ್ಪದ ಪಾತ್ರ ದೊಡ್ಡದು. ಹಾಗೇಯೇ ಬೆಳೆ, ದಿನಸಿ ಸಾಮಾಗ್ರಿ ಬೆಲೆ ಹೆಚ್ಚಾಗುತ್ತೆ, ಜನರು ಭಯಪಡುವ ಅವಶ್ಯಕತೆ ಇಲ್ಲ ದೇವರು ಕಾಪಾಡುತ್ತಾನೆ ಎನ್ನುತ್ತಾರೆ ಗ್ರಾಮದ ಹನುಮಂತಪ್ಪ.
ಈ ಭವಿಷ್ಯವಾಣಿಗಾಗಿ ಮೈಸೂರಿನ ಅರಸರು ಕಾಯುತ್ತಿದ್ದರು. ಆದ್ದರಿಂದ ಇದು ಮಹತ್ವವನ್ನು ಪಡೆದಿದೆ ಎನ್ನುತ್ತಾರೆ ಭಕ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.