ADVERTISEMENT

ಕೇತೇಶ್ವರ ಮಹಾಮಠಕ್ಕೆ ನೂತನ ಕುಲಗುರುವಿಗೆ ದೀಕ್ಷೆ

ಇಮ್ಮಡಿ ಬಸವ ಮೇದಾರ ಕೇತಯ್ಯ ಸ್ವಾಮೀಜಿಗೆ ಲಿಂಗ ನಿರೀಕ್ಷಣೆ ಮಾಡಿದ ಮುರುಘಾ ಶರಣರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 13:48 IST
Last Updated 20 ಜನವರಿ 2019, 13:48 IST
ಚಿತ್ರದುರ್ಗದ ಕೇತೇಶ್ವರ ಮೇದಾರ ಗುರುಪೀಠದ ನೂತನ ಕುಲಗುರುಗಳಿಗೆ ಭಾನುವಾರ ಚಿತ್ರದುರ್ಗ ಬ್ರಹನ್ಮಠದ ಶಿವಮೂರ್ತಿ ಮುರುಘಾ ಶರಣರು ಗುರುದೀಕ್ಷೆ ನೀಡಿದರು
ಚಿತ್ರದುರ್ಗದ ಕೇತೇಶ್ವರ ಮೇದಾರ ಗುರುಪೀಠದ ನೂತನ ಕುಲಗುರುಗಳಿಗೆ ಭಾನುವಾರ ಚಿತ್ರದುರ್ಗ ಬ್ರಹನ್ಮಠದ ಶಿವಮೂರ್ತಿ ಮುರುಘಾ ಶರಣರು ಗುರುದೀಕ್ಷೆ ನೀಡಿದರು   

ದಾವಣಗೆರೆ: ಚಿತ್ರದುರ್ಗದ ಕೇತೇಶ್ವರ ಮೇದಾರ ಗುರುಪೀಠದ ನೂತನ ಕುಲಗುರುಗಳಿಗೆ ಭಾನುವಾರ ಚಿತ್ರದುರ್ಗ ಬ್ರಹನ್ಮಠದ ಶಿವಮೂರ್ತಿ ಮುರುಘಾ ಶರಣರು ಗುರುದೀಕ್ಷೆ ನೀಡಿದರು.

ಆರಂಭದಲ್ಲಿ ಮೇದಾರ ಸಮಾಜದಿಂದ ಮುರುಘಾಶ್ರೀಗಳಿಗೆ ಗೌರವಾರ್ಪಣೆ ಮಾಡಿದರು. ಬಳಿಕ ದೀಕ್ಷೆಗಾಗಿ ಸಾಧಕರನ್ನು ಕರೆತರಲಾಯಿತು. ಕಾವಿಗೆ ವಿಭೂತಿ ಹಚ್ಚಿದ ಬಳಿಕ ಕಾವಿ ಧರಿಸಲು ಕಳುಹಿಸಲಾಯಿತು. ಸಾಧಕರು ಕಾವಿ ಧರಿಸಿ ಬಂದ ಬಳಿಕ ವಿಭೂತಿ ಹಚ್ಚಿದ ಬಳಿಕ ಪ್ರಣವ ಸಂಬಂಧ, ಆಜ್ಞಾಚಕ್ರ ಉದ್ದೀಪನ, ಲಿಂಗದೀಕ್ಷೆ, ಮಂತ್ರೋಪದೇಶ, ಲಿಂಗ ಮಜ್ಜನ, ಲಿಂಗ ನಿರೀಕ್ಷಣೆ (ಶಿವಯೋಗ) ಬೋಧಿಸಲಾಯಿತು.

ನೂತನ ಕುಲಗುರುವಿಗೆ ‘ಇಮ್ಮಡಿ ಬಸವ ಮೇದಾರ ಕೇತಯ್ಯ ಸ್ವಾಮೀಜಿ’ ಎಂದು ನಾಮಕರಣ ಮಾಡಲಾಯಿತು. ಶಿವಮೂರ್ತಿ ಮುರುಘಾ ಶರಣರು ಸಂಸ್ಕಾರ ಬೋಧನೆ ನಡೆಸಿಕೊಟ್ಟರು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ ವಿಧಿವಿಧಾನ ನಿರೂಪಣೆ ಮಾಡಿದರು.

ADVERTISEMENT

ಮುರುಘಾ ಮಠದ 30ಕ್ಕೂ ಅಧಿಕ ಶಾಖಾಮಠಗಳ ಸ್ವಾಮೀಜಿಗಳು, ಮೇದಾರ ಸಮುದಾಯದ 600ಕ್ಕೂ ಅಧಿಕ ಜನರು, ಇತರ ಶರಣ, ಶರಣೆಯರು ಇದಕ್ಕೆ ಸಾಕ್ಷಿಯಾದರು.

5 ವರ್ಷಗಳಲ್ಲಿ ಮೂರನೇ ಸ್ವಾಮೀಜಿ:‘ಚಿತ್ರದುರ್ಗ ಕೇತೇಶ್ವರ ಮಹಾ ಮಠದ ಬಸವಪ್ರಭು ಸ್ವಾಮೀಜಿ ಐದು ವರ್ಷಗಳ ಹಿಂದೆ ಲಿಂಗೈಕ್ಯರಾಗಿದ್ದು, ಬಳಿಕ ಪೀಠಕ್ಕೆ ಒಬ್ಬರಾದ ಬಳಿಕ ಒಬ್ಬರನ್ನು ಕುಲಗುರುವಾಗಿ ದೀಕ್ಷೆ ನೀಡಲಾಗಿತ್ತು. ದೀಕ್ಷೆ ಪಡೆದ ಬಳಿಕ ವಿದ್ಯಾಭ್ಯಾಸ ನಡೆಸುವಾಗ ಮನೆ ಹಾಗೂ ಸಮಾಜ ಒತ್ತಡದಿಂದಾಗಿ ಅವರು ಕುಲಗುರು ಸ್ಥಾನವನ್ನು ತ್ಯಾಗ ಮಾಡಿದ್ದರು. ಇದೀಗ ಮಠದಲ್ಲೇ ಓದಿ ಬೆಳೆದ ಮಂಜುನಾಥ ಅವರನ್ನು ಕುಲಗುರುವನ್ನಾಗಿ ಮಾಡಿಕೊಂಡಿದ್ದೇವೆ. ಮುರುಘಾ ಶರಣರು ದೀಕ್ಷೆ ನೀಡಿದ್ದಾರೆ’ ಎಂದು ಅಖಿಲ ಕರ್ನಾಟಕ ಮೇದಾರ ಸಮಾಜದ ಅಧ್ಯಕ್ಷ ಸಿ.ಪಿ. ಪಾಟೀಲ ತಿಳಿಸಿದರು.

ಮುರುಘಾ ಶ್ರೀಗಳು ಸಿಬಾರ್‌ನಲ್ಲಿ 5 ಎಕರೆ ಭೂಮಿ ನೀಡಿದ್ದಾರೆ. ಅಲ್ಲಿ ಮಠ ಇದೆ. ಅದರಲ್ಲಿ ₹ 3.5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಅವು ಅರ್ಧಕ್ಕೆ ನಿಂತಿವೆ. ಈಗ ನೂತನ ಕುಲಗುರುಗಳು ಬಂದಿರುವುದರಿಂದ ಆ ಕೆಲಸಗಳು ಮುಂದುವರಿಯಲಿವೆ ಎಂದು ಹೇಳಿದರು.

ನೂತನ ಸ್ವಾಮೀಜಿಯ ಪರಿಚಯ
ಇಮ್ಮಡಿ ಬಸವ ಮೇದಾರ ಕೇತಯ್ಯ ಸ್ವಾಮೀಜಿ ಅವರ ಪೂರ್ವದ ಹೆಸರು ಮಂಜುನಾಥ. ತಂದೆ ಭರಮಪ್ಪ ಮತ್ತು ತಾಯಿ ಶಾಂತವ್ವರನ್ನು ಬಾಲ್ಯದಲ್ಲಿಯೇ ಕಳೆದುಕೊಂಡ ಮಂಜುನಾಥ ಅವರು ಮುರುಘಾಮಠದಲ್ಲಿಯೇ ಬೆಳೆದವರು. 23 ವರ್ಷದ ಅವರು ಬಿ.ಎ. ಪದವಿ ಓದುತ್ತಿದ್ದು, ಗುರುದೀಕ್ಷೆ ಸ್ವೀಕಾರ ಮಾಡಿದ ಬಳಿಕವೂ ವಿದ್ಯಾಭ್ಯಾಸ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.