ADVERTISEMENT

ದಾವಣಗೆರೆ | ಜನಮನ ಸೆಳೆಯುವ ‘ಖಾದಿ ಸಂಭ್ರಮ’

ಆ.10ರವರೆಗೆ ವಸ್ತುಪ್ರದರ್ಶನ, ಬಿಹಾರ, ಕಾಶ್ಮೀರದ ಬಟ್ಟೆಗಳು ಲಭ್ಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 7:15 IST
Last Updated 2 ಆಗಸ್ಟ್ 2025, 7:15 IST
   

ದಾವಣಗೆರೆ: ದೇಹಕ್ಕೆ ಹಿತಾನುಭವ ನೀಡುವ ಖಾದಿ ಬಟ್ಟೆ, ನಾಲಿಗೆ ರುಚಿಗೆ ಕರುಕುಲು ತಿಂಡಿ, ಚಿಣ್ಣರ ಆಟಕ್ಕೆ ಚನ್ನಪಟ್ಟಣದ ಗೊಂಬೆ, ಸೌಂದರ್ಯಕ್ಕೆ ಗಿಡಮೂಲಿಕೆಗಳ ತೈಲ, ಆರೋಗ್ಯಕ್ಕೆ ಪಾರಂಪರಿಕ ಔಷಧ..

ಹೀಗೆ ತರಹೇವಾರಿ ಉತ್ಪನ್ನಗಳು ರೇಣುಕ ಮಂದಿರದ ಒಂದೇ ಸೂರಿನಡಿ ಸಿಗುತ್ತಿವೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ 10 ದಿನ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ‘ಖಾದಿ ಸಂಭ್ರಮ’ಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಕಾಶ್ಮೀರ, ಬಿಹಾರ ಸೇರಿ ಹೊರರಾಜ್ಯದ ಉತ್ಪನ್ನಗಳು ಇಲ್ಲಿವೆ.

ಬಿದಿರಿನಿಂದ ತಯಾರಿಸಿದ ಬುಟ್ಟಿ, ಅಲಂಕಾರಿಕ ವಸ್ತುಗಳು ಹಾಗೂ ಮಣ್ಣಿನಿಂದ ಸಿದ್ಧಪಡಿಸಿದ ಉತ್ಪನ್ನಗಳು ವಸ್ತುಪ್ರದರ್ಶನಕ್ಕೆ ಸ್ವಾಗತ ಕೋರುತ್ತವೆ. ಕಣ್ಮನ ಸೆಳೆಯುವ ಬಿದಿರಿನ ಉತ್ಪನ್ನಗಳನ್ನು ಗಮನಿಸುತ್ತ ಮಂದಿರ ಪ್ರವೇಶಿಸಿದರೆ ಖಾದಿ ಲೋಕವೇ ತೆರೆದುಕೊಳ್ಳುತ್ತದೆ.

ADVERTISEMENT

ದಾವಣಗೆರೆ, ಚಿತ್ರದುರ್ಗ, ಹಾವೇರಿ, ಚಿಕ್ಕಬಳ್ಳಾಪುರ, ಬಾಗಲಕೋಟೆ, ವಿಜಯಪುರ, ತುಮಕೂರು, ಧಾರವಾಡ ಸೇರಿ ರಾಜ್ಯದ ವಿವಿಧೆಡೆಯ ನೇಕಾರರ ಮಳಿಗೆಗೆಳು ಇಲ್ಲಿವೆ. ಸೀರೆ, ಪಂಚೆ, ಟವೆಲ್‌, ಕರವಸ್ತ್ರ ಸೇರಿದಂತೆ ಹಲವು ಖಾದಿ ಉತ್ಪನ್ನಗಳು ಗಮನ ಸೆಳೆಯುತ್ತವೆ. ಇಳಕಲ್‌ ಸೀರೆ, ರೇಷ್ಮೆ ಸೀರೆ, ಹತ್ತಿ ಬಟ್ಟೆಗಳ ಅಂಗಡಿಗಳು ಗ್ರಾಹಕರನ್ನು ಹಿಡಿದಿಡುತ್ತಿವೆ.

ಚನ್ನಪಟ್ಟಣದ ಬೊಂಬೆಗಳ ಮಳಿಗೆಯಲ್ಲಿ ಮಕ್ಕಳ ಆಟಿಕೆಗಳು ಆಕರ್ಷಕವಾಗಿವೆ. ಮಕ್ಕಳ ಕಲಿಕೆಗೆ ಪೂಕರವಾದ ಉಪಕರಣಗಳು ಇಲ್ಲಿವೆ. ₹ 50ರಿಂದ ₹ 2,000 ವರೆಗಿನ ಬೆಲೆಯಲ್ಲಿ ಇವು ಲಭ್ಯ ಇವೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಆದಿವಾಸಿಗಳು ತಯಾರಿಸಿದ ಕೇಶ ತೈಲ, ಉತ್ತರ ಕರ್ನಾಟಕದ ರಾಗಿ, ಉದ್ದು, ಸಿರಿಧಾನ್ಯಗಳಿಂದ ಸಿದ್ಧಪಡಿಸಿದ ಹಪ್ಪಳ, ಕಾಂಡಿಮೆಂಟ್ಸ್‌ಗಳು ಬಾಯಲ್ಲಿ ನೀರೂರಿಸುತ್ತವೆ.

‘ಮಹಾತ್ಮ ಗಾಂಧೀಜಿ ಖಾದಿ ಉತ್ಪನ್ನಗಳಿಗೆ ಉತ್ತೇಜನ ನೀಡಿದರು. ಖಾದಿ ಬಟ್ಟೆ ಬಳಕೆ ಮಾಡುವುದರಿಂದ ನೇಕಾರರ ಬದುಕಿಗೆ ಅನುಕೂಲವಾಗುತ್ತದೆ. ಕೈಮಗ್ಗದ ಈ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸುವ ಪ್ರಯತ್ನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿವೆ’ ಎಂದು ವಸ್ತುಪ್ರದರ್ಶನ ಉದ್ಘಾಟಿಸಿದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಸನಗೌಡ ತುರುವಿಹಾಳ ಹೇಳಿದರು.

‘ಬೆಂಗಳೂರಿಗೆ ಸೀಮಿತವಾಗಿದ್ದ ಈ ವಸ್ತಪ್ರದರ್ಶನವನ್ನು ರಾಜ್ಯದ ಎಲ್ಲೆಡೆಗೆ ವಿಸ್ತರಿಸಲಾಗಿದೆ. ಐದು ಜಿಲ್ಲೆಯಲ್ಲಿ ಇಂತಹ ವಸ್ತುಪ್ರದರ್ಶನ ನಡೆಸಲಾಗಿದ್ದು, ಹಂತಹಂತವಾಗಿ ರಾಜ್ಯದ ವಿವಿಧ ಸ್ಥಳಗಳಲ್ಲಿ ವಸ್ತುಪ್ರದರ್ಶನ ಆಯೋಜಿಸುವ ಆಲೋಚನೆ ಇದೆ. ಖಾದಿ ಉತ್ಪನ್ನಗಳಿಗೆ ಶೇ 25ರಷ್ಟು ರಿಯಾಯಿತಿ ನೀಡಲಾಗಿದ್ದು, ಯುವಸಮೂಹ ಇತ್ತ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.