ADVERTISEMENT

ಐರಾವತ ಏರಿ ತಿಮ್ಮಪ್ಪನ ದರ್ಶನ ಪಡೆಯಿರಿ

ತಿರುಪತಿ ಪ್ಯಾಕೇಜ್‌ ದಾವಣಗೆರೆಗೂ ವಿಸ್ತರಣೆ ಮಾಡಿದ ಕೆಎಸ್‌ಆರ್‌ಟಿಸಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2018, 12:10 IST
Last Updated 14 ಜುಲೈ 2018, 12:10 IST
ತಿರುಪತಿ ದೇಗುಲ
ತಿರುಪತಿ ದೇಗುಲ   

ದಾವಣಗೆರೆ: ಮಧ್ಯ ಕರ್ನಾಟಕ ಜನ ಇನ್ನು ಮುಂದೆ ಐರಾವತ ಏರಿ ತಿಮ್ಮಪ್ಪನ ದರ್ಶನ ಪಡೆಯಬಹುದು.

ಬೆಂಗಳೂರಿಗೆ ಸೀಮಿತವಾಗಿದ್ದ ತಿರುಪತಿ ಪ್ಯಾಕೇಜ್‌ ಟ್ರಿಪ್‌ ಅನ್ನು ಕೆಎಸ್‌ಆರ್‌ಟಿಸಿಯು ಮಧ್ಯಕರ್ನಾಟಕದ ಕೇಂದ್ರ ಬಿಂದುವಾದ ದಾವಣಗೆರೆಗೂ ವಿಸ್ತರಿಸಿದೆ. ಹೀಗಾಗಿ ಇನ್ನು ಮುಂದೆ ತಿರುಪತಿ ವೆಂಕಟೇಶ್ವರನ ದರ್ಶನ ಸುಲಭವಾಗಲಿದೆ.

ಐರಾವತ ಕ್ಲಬ್‌ ಕ್ಲಾಸ್‌ ಬಸ್‌ಗಳು ದಾವಣಗೆರೆ–ಚಿತ್ರದುರ್ಗ ಮಾರ್ಗವಾಗಿ ತಿರುಪತಿಗೆ ಪ್ರವಾಸಿಗರನ್ನು ಕರೆದೊಯ್ಯಲಿವೆ. ಪ್ಯಾಕೇಜ್‌ ಪ್ರವಾಸ ತಿರುಪತಿ ಮತ್ತು ಮಂಗಳೂರು ಎರಡನ್ನೂ ಒಳಗೊಂಡಿದೆ. ಜುಲೈ 20ರಿಂದ ಪ್ಯಾಕೇಜ್‌ ಪ್ರವಾಸ ಆರಂಭಗೊಳ್ಳಲಿದೆ.

ADVERTISEMENT

ಪ್ಯಾಕೇಜ್‌ ಟೂರ್‌ನ ಮೊದಲ ದಿನ ಸಂಜೆ 4ಕ್ಕೆ ದಾವಣಗೆರೆ ನಿಲ್ದಾಣದಿಂದ ಬಸ್‌ ಹೊರಡುವ ಬಸ್‌ ಮರುದಿನ ಬೆಳಿಗ್ಗೆ 4ಕ್ಕೆ ತಿರುಪತಿ ತಲುಪಲಿದೆ. ಮೂರನೇ ದಿನ ಸಂಜೆ 4.15ಕ್ಕೆ ತಿರುಪತಿಯಿಂದ ಹೊರಟು ನಾಲ್ಕನೇ ದಿನ ಬೆಳಗಿನ ಜಾವ 3.45ಕ್ಕೆ ದಾವಣಗೆರೆಗೆ ಹಿಂತಿರುಗಲಿದೆ.

ದಾವಣಗೆರೆಯಿಂದ ಹೊರಟ ಬಸ್‌, ಆಂಧ್ರ ತಲುಪಿದ ಕೂಡಲೇ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಪ್ರವಾಸಿಗರನ್ನು ಸ್ವಾಗತಿಸಲಿದ್ದಾರೆ. ತಿರುಪತಿ, ತಿರುಮಲ ಮತ್ತು ಕಾಳಹಸ್ತಿ ದರ್ಶನ ಮಾಡಿಸುವರು. ಹೀಗಾಗಿ, ಸುಸೂತ್ರವಾಗಿ ದೇವರ ದರ್ಶನ ಪಡೆಯಲು ಅನುಕೂಲವಾಗಲಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಆಹಾರ ವ್ಯವಸ್ಥೆ: ತಿರುಪತಿ ತಲುಪಿದ ನಂತರ ಫ್ರಶ್‌ಅಪ್‌ ನಂತರ ಪದ್ಮಾವತಿ ದೇಗುಲದಲ್ಲಿ ದರ್ಶನ, ಉಪಾಹಾರದ ವ್ಯವಸ್ಥೆ ಇರುತ್ತದೆ. ನಂತರ ತಿರುಮಲದಲ್ಲಿ ಶೀಘ್ರ ದರ್ಶನ, ಸ್ಥಳೀಯ ದೇವಸ್ಥಾನಗಳಲ್ಲಿ ಪೂಜೆ, ದರ್ಶನ ಇರಲಿದೆ. ಅಲ್ಲಿಂದ ನೇರವಾಗಿ ಕಾಳಹಸ್ತಿ ದೇವಾಲಯದಲ್ಲಿ ದರ್ಶನ ಇರಲಿದೆ. ಬೆಳಗಿನ ಉಪಾಹಾರ ಮತ್ತು ಮಧ್ಯಾಹ್ನ ಊಟದ ನಂತರ ಎಪಿಟಿಡಿಸಿ ಸಾರಿಗೆಯಲ್ಲಿ ಮತ್ತೆ ತಿರುಪತಿಗೆ ಬಂದು, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದಾವಣಗೆರೆಗೆ ಹಿಂತಿರುಗುವ ವ್ಯವಸ್ಥೆ ಇರುತ್ತದೆ.

ಕಾಯ್ದಿರಿಸುವ ವ್ಯವಸ್ಥೆ

ಕೆಎಸ್‌ಆರ್‌ಟಿಸಿಯ ಟಿಕೆಟ್‌ ಕೌಂಟರ್‌, ಖಾಸಗಿ ಬುಕ್ಕಿಂಗ್‌ ಕೌಂಟರ್‌, ಆನ್‌ಲೈನ್‌, ಮೊಬೈಲ್‌ ಆ್ಯಪ್‌ ಮೂಲಕವೂ ತಿರುಪತಿ ಪ್ಯಾಕೇಜ್ ಪ್ರವಾಸಕ್ಕೆ ಟಿಕೆಟ್‌ ಕಾಯ್ದಿರಿಸಲು ಅವಕಾಶವಿದೆ. ಪ್ರಯಾಣಿಕರು 30 ದಿನ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸಿ, ‍ಪ್ರವಾಸವನ್ನು ಖಾತ್ರಿ ಪಡಿಸಿಕೊಳ್ಳಬಹುದು.

ಪ್ಯಾಕೇಜ್‌ ಪ್ರಯಾಣದ ದರ (₹ ಗಳಲ್ಲಿ)

ವಿವರ ವಾರದ ದಿನ ವಾರಾಂತ್ಯ
ವಯಸ್ಕರಿಗೆ 4,500 4,800
ಮಕ್ಕಳಿಗೆ 3,600 3,900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.