ADVERTISEMENT

ಕುಮಾರಸ್ವಾಮಿ ಕಚೇರಿ ವಿಡಿಯೊ, ಆಡಿಯೊ ಎಡಿಟಿಂಗ್‌ ಕಚೇರಿಯಾಗಿದೆ:ರೇಣುಕಾಚಾರ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 13:33 IST
Last Updated 5 ಡಿಸೆಂಬರ್ 2018, 13:33 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ದಾವಣಗೆರೆ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕಚೇರಿಯು ವಿಡಿಯೊ, ಆಡಿಯೊ ಎಡಿಟಿಂಗ್‌ ಕಚೇರಿಯಾಗಿ ಪರಿವರ್ತನೆಗೊಂಡಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ವ್ಯಂಗ್ಯವಾಡಿದರು.

ಬಿಜೆಪಿ ಎಂದಿಗೂ ಆಪರೇಷನ್‌ ಕಮಲಕ್ಕೆ ಪ್ರಯತ್ನವೇ ಮಾಡಿಲ್ಲ. ಅದರ ಅಗತ್ಯವೇ ಪಕ್ಷಕ್ಕೆ ಇಲ್ಲ. ನಾವು ಗೌರವಾನ್ವಿತವಾಗಿ ವಿರೋಧಪಕ್ಷವಾಗಿ ಕುಳಿತು ಸರ್ಕಾರದವೈಫಲ್ಯಗಳನ್ನು ಎತ್ತಿ ತೋರಿಸುತ್ತಿದ್ದೇವೆ. ಆದರೆ ‘ಆಪರೇಷನ್‌ ಕಮಲ’ಕ್ಕೆ ಪ್ರಯತ್ನಿಸಿದ ವಿಡಿಯೊ ಇದೆ, ಆಡಿಯೊ ಇದೆ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇವೇಗೌಡರಿಂದ ಕುತಂತ್ರದ ಪಾಠ:ಹೇಗಾದರೂ ಐದು ವರ್ಷ ಸರ್ಕಾರವನ್ನು ಉಳಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಹೇಳುವುದು, ಕಣ್ಣೀರು ಸುರಿಸುವುದು, ಜ್ಯೋತಿಷ್ಯ, ವಾಮಾಚಾರ ಮಾಡುವುದು ಇವೆಲ್ಲ ಅವರಿಗೆ ರಕ್ತಗತವಾಗಿಯೇ ಬಂದಿದೆ. ಇದಲ್ಲದೇ ಎಚ್‌.ಡಿ. ದೇವೇಗೌಡರು ರಾತ್ರಿ ಮಗನಿಗೆ ತಂತ್ರಗಾರಿಕೆ ಪಾಠ ಮಾಡುತ್ತಾರೆ. ಕುಮಾರಸ್ವಾಮಿ ಅದನ್ನು ಹಗಲು ಜಾರಿಗೆ ತರುತ್ತಾರೆ ಎಂದು ಆರೋಪಿಸಿದರು.

ADVERTISEMENT

ಬಿ.ಎಸ್‌. ಯಡಿಯೂರಪ್ಪ ವಿಶ್ರಾಂತಿಗೆ, ಚಿಕಿತ್ಸೆಗೆ ಹೋದರೆ ವಾಮಚಾರ ಮಾಡಿ ಸರ್ಕಾರವನ್ನು ಉರುಳಿಸಲು ಹೋಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ವಾಮಮಾರ್ಗ ಹಿಡಿಯುವುದು ಬಿಜೆಪಿ ಸಂಸ್ಕೃತಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಟೇಕ್‌ಅಪ್‌ ಆಗದ ಸರ್ಕಾರ:ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಟೇಕ್‌ಅಪ್‌ ಆಗಿಲ್ಲ. ಯಾವ ಇಲಾಖೆಗೂ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರೈತರ ಸಾಲ ಮನ್ನಾ ಮಾಡಲಾಗಿದೆ ಎಂಬುದು ಜಾಹೀರಾತಿಗೆ ಸೀಮಿತವಾಗಿದೆ. ಮೂರ್ನಾಲ್ಕು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಕ್ಷೇತ್ರದ ಅಭಿವೃದ್ಧಿಗೆ ಅನುದಾನ ದೊರೆಯುತ್ತಿಲ್ಲ ಎಂದು ಕಾಂಗ್ರೆಸ್‌ನ ಸತೀಶ್‌ ಜಾರಕಿಹೊಳಿ ಅವರೇ ಹೇಳಿದ್ದಾರೆ. ಕಾಂಗ್ರೆಸ್‌ನ ಹಲವು ಮುಖಂಡರಿಗೆ ಈ ಅಸಮಾಧಾನ ಇದೆ. ಶಾಸಕರು ಅವರ ಕ್ಷೇತ್ರಗಳಲ್ಲಿ ಗೌರವಯುತವಾಗಿ ಓಡಾಡದಂತಹ ಪರಿಸ್ಥಿತಿ ಇದೆ. ರಾಜ್ಯವನ್ನು ಕಾಂಗ್ರೆಸ್‌ಮುಕ್ತ ಮಾಡಲು ಅಪ್ಪ–ಮಕ್ಕಳು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.

ದೇವಮಾನವ ಡಿಕೆಶಿ: ಸರ್ಕಾರದ ರಕ್ಷಣೆಗೆ ಸ್ವಯಂಘೋಷಿತ ದೇವಮಾನವ ಡಿ.ಕೆ. ಶಿವಕುಮಾರ್‌ ನಿಂತಿದ್ದಾರೆ. ಅವರು ಮಹತ್ವಾಕಾಂಕ್ಷಿ. 2006ರಲ್ಲಿ ಶತ್ರುಗಳಂತೆ ಕುಮಾರಸ್ವಾಮಿ, ಶಿವಕುಮಾರ್‌ ಕಿತ್ತಾಡಿಕೊಂಡಿದ್ದರು. ಶಿವಕುಮಾರ್‌ ಮುಂದೆ ಮುಖ್ಯಮಂತ್ರಿಯಾಗಲು ಜೆಡಿಎಸ್‌ ಸಹಕಾರ ಬೇಕಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ನ ಶಾಸಕರ ಮೇಲೆಯೇ ತುರ್ತುಪರಿಸ್ಥಿತಿ ಹೇರಿದ್ದಾರೆ. ಡಾ. ಸುಧಾಕರ್‌ ಚಿಕಿತ್ಸೆಗಾಗಿ ಹೋದರೆ, ಬಿಜೆಪಿಯವರ ಜತೆಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಶಿವಕುಮಾರ್‌ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಟೀಕಿಸಿದರು.

ಮಾಡಬಾರದ ಭ್ರಷ್ಟಾಚಾರ ಮಾಡಿ ಈಗ ಸತ್ಯಹರಿಶ್ಚಂದ್ರರಂತೆ ವರ್ತಿಸಬೇಡಿ. ತುಘ್ಲಕ್‌ ದರ್ಬಾರ್‌ ಮಾಡಬಾರದು. ಇದು ಗೂಂಡಾ ರಾಜ್ಯ ಅಲ್ಲ ಎಂದು ಶಿವಕುಮಾರ್‌ಗೆ ಸಲಹೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕರಾದ ರಾಜಶೇಖರ್‌, ರಮೇಶ್‌ ನಾಯ್ಕ್, ಶ್ರೀನಿವಾಸ್‌, ಶಾಂತಕುಮಾರ್‌, ನರೇಶ್‌ ಚೌದರಿ, ಶಿವನಗೌಡ ಪಾಟೀಲ್‌, ರಾಜು ವೀರಣ್ಣ, ಮಂಜಣ್ಣ, ಗುಮ್ಮನೂರು ಶ್ರೀನಿವಾಸ್‌ ಉಪಸ್ಥಿತರಿದ್ದರು.

ಆಂಬಿಡೆಂಟ್‌ ಕಂಪನಿಯಿಂದ ಪರಮೇಶ್ವರ್‌, ರೋಷನ್‌ಬೇಗ್‌ಗೆ ಹಣ
ದಾವಣಗೆರೆ: ಆಂಬಿಡೆಂಟ್‌ ಕಂಪನಿಯಿಂದ ಗೃಹ ಸಚಿವ ಜಿ. ಪರಮೇಶ್ವರ್‌ ಮತ್ತು ಮಾಜಿ ಸಚಿವ ರೋಷನ್‌ಬೇಗ್‌ ಬಹುಕೋಟಿ ಪಡೆದಿದ್ದಾರೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಜನಾರ್ದನ ರೆಡ್ಡಿಯನ್ನು ವಿನಾ ಕಾರಣ ಆಂಬಿಡೆಂಟ್‌ ಕಂಪನಿಗೆ ಕೊಂಡಿ ಕಲ್ಪಿಸಿ ಜೈಲಿಗೆ ಕಳುಹಿಸಲಾಗಿತ್ತು. ಸರ್ಕಾರಕ್ಕೆ ತಾಕತ್ತಿದ್ದರೆ ಸಿಸಿಬಿ ಮುಂದೆ ಫರೀದ್‌ ನೀಡಿರುವ ಹೇಳಿಕೆಯನ್ನು ಬಿಡಗಡೆ ಮಾಡಲಿ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸವಾಲು ಹಾಕಿದರು.

‘ಆಂಬಿಡೆಂಟ್‌ನಿಂದ ಪರಮೇಶ್ವರ್‌, ರೋಷನ್‌ಬೇಗ್‌ ಹಣ ಪಡೆದಿರುವುದನ್ನು ತನಿಖೆ ವೇಳೆ ಸಿಸಿಬಿ ಮುಂದೆ ಕಂಪನಿಯ ಫರೀದ್‌ ಸಿಸಿಬಿ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ನನಗೆ ಪೊಲೀಸರೇ ತಿಳಿಸಿದ್ದಾರೆ. ಆದರೆ ಸರ್ಕಾರ ಉಳಿಸಿಕೊಳ್ಳಲು ಅವರನ್ನು ಕುಮಾರಸ್ವಾಮಿ ರಕ್ಷಿಸುತ್ತಿದ್ದಾರೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.