ADVERTISEMENT

15ರಂದು ಕಾರ್ಮಿಕರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 15:23 IST
Last Updated 12 ಡಿಸೆಂಬರ್ 2019, 15:23 IST

ದಾವಣಗೆರೆ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ ಹಾಗೂ ಜನ ವಿರೋಧಿ ನೀತಿ ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ದೇಶಾದ್ಯಂತ ಜನವರಿ 8ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಇದರ ಪೂರ್ವಭಾವಿಯಾಗಿ ರಾಜ್ಯ, ವಿಭಾಗ, ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಸಂಘಟಿಸಲು ಡಿ. 15ರಂದು ಬೆಳಿಗ್ಗೆ 10.30ಕ್ಕೆ ರೋಟರಿ ಬಾಲಭವನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು)ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಎಲ್ಐಸಿ, ಬಿಎಸ್‌ಎನ್‌ಎಲ್‌, ಬ್ಯಾಂಕ್‌, ಪೋಸ್ಟಲ್‌, ರೈತ ಹಾಗೂ ಇತರೆ ಸಂಘಟನೆಗಳು ಭಾಗವಹಿಸಲಿವೆ. ವಿವಿಧ ಸಂಘಟನೆಗಳ ಮುಖಂಡರಾದ ‌ಎಚ್‌.ವಿ. ಅನಂತ ಸುಬ್ಬರಾವ್, ಕೆ. ಮಹಾಂತೇಶ, ಷಣ್ಮುಗಂ ಭಾಗವಹಿಸಲಿದ್ದಾರೆ’ ಎಂದು ಹೇಳಿದರು.

ಅಚ್ಚೇದಿನ್‌ ಆಯೇಗಾ ಎಂದು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಮಿಕ, ರೈತ, ಜನ ವಿರೋಧಿ ನೀತಿ ಅನುಸರಿಸುತ್ತಿದೆ. ದೇಶದ ಆರ್ಥಿಕತೆ ಸಂಕಷ್ಟದಲ್ಲಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ ಭರವಸೆ ಈಡೇರಿಸಿಲ್ಲ. 6 ವರ್ಷಗಳಲ್ಲಿ 95 ಲಕ್ಷ ಉದ್ಯೋಗಗಳು ನಾಶವಾಗಿವೆ. ರೈತರ ಸಮಸ್ಯೆಗೆ ಸ್ಪಂದಿಸದೆ ಅವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

ADVERTISEMENT

ಮುಖಂಡರಾದ ಕೆ.ಎಲ್‌. ಭಟ್, ಮಂಜುನಾಥ್ ಕುಕ್ಕವಾಡ, ಬಲ್ಲೂರು ರವಿಕುಮಾರ್‌, ಷಣ್ಮುಖಪ್ಪ, ಆನಂದರಾಜ್, ಶಾಂತಕುಮಾರ್‌ ಆವರಗೆರೆ ಚಂದ್ರು, ಆವರಗೆರೆ ವಾಸು, ಕೈದಾಳ್ ಮಂಜುನಾಥ್‌, ತಿಪ್ಪೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.