ADVERTISEMENT

ಲಸಿಕೆ ಹಾಕಿಸಲು ಶಾಸಕರು ತಾರತಮ್ಯ ಎಸಗಿಲ್ಲ: ಪುರಸಭೆ ಅಧ್ಯಕ್ಷ ಕೆ.ವಿ. ಶ್ರೀಧರ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 4:35 IST
Last Updated 12 ಜುಲೈ 2021, 4:35 IST

ಹೊನ್ನಾಳಿ: ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕಿನ ಸಾರ್ವಜನಿಕರಿಗೆ ಲಸಿಕೆ ಕೊಡಿಸುವ ವಿಚಾರದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಯಾವುದೇ ತಾರತಮ್ಯ ಮಾಡಿಲ್ಲ. ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸಬೇಕು ಎಂದು ನಿರಂತರ ಸೇವೆ ಮಾಡುತ್ತಿದ್ದಾರೆ ಎಂದು ಪುರಸಭಾ ಅಧ್ಯಕ್ಷ ಕೆ.ವಿ. ಶ್ರೀಧರ್ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ‘ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್ ಅವರ ಆರೋಪದಲ್ಲಿ ಹುರುಳಿಲ್ಲ. ಇಷ್ಟು ದಿನಗಳ ಕಾಲ ಮೌನವಾಗಿದ್ದ ವಿಶ್ವನಾಥ್‌ ಇದೀಗ ದಿಢೀರ್‌ ಪ್ರತ್ಯಕ್ಷವಾಗಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದ್ದು, ಅದಕ್ಕಾಗಿ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಅವಳಿ ತಾಲ್ಲೂಕಿನಲ್ಲಿ ಈವರೆಗೂ 80 ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ಕೊಡಿಸಲಾಗಿದೆ. ಲಸಿಕೆ ಪಡೆದಿರುವವರೆಲ್ಲಾ ಬಿಜೆಪಿ ಕಾರ್ಯಕರ್ತರೇ’ ಎಂದು ಅವರು ಪ್ರಶ್ನಿಸಿದರು.

ADVERTISEMENT

‘ಅವಳಿ ತಾಲ್ಲೂಕಿನ ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ, ಆಮ್ಲಜನಕ ವ್ಯವಸ್ಥೆ ಮಾಡುವ ಮೂಲಕ ಸಾವಿರಾರು ಜನರ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ಎರಡು ತಿಂಗಳುಗಳ ಕಾಲ ಊಟ, ತಿಂಡಿ ನೀಡಿ ಅವರ ರಕ್ಷಣೆಗೆ ನಿಂತಿದ್ದಾರೆ. ಇಂತಹ ಕೆಲಸ ಮಾಡಿದ ಶಾಸಕರು ಇಡೀ ರಾಜ್ಯದಲ್ಲಿ ಯಾರಾದರೂ ಇದ್ದರೆ ಅದು ಕೇವಲ ಎಂ.ಪಿ. ರೇಣುಕಾಚಾರ್ಯ ಅವರು ಮಾತ್ರ’ ಎಂದರು.

‘ಈಗಲೂ ಮನೆಯಲ್ಲಿ ಒಂದು ನಿಮಿಷ ಕೂರದೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿ ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಅವಳಿ ತಾಲ್ಲೂಕುಗಳ ಹಿತ ಬಯಸುವ ಶಾಸಕರಿಗೆ ಲಸಿಕೆ ವಿಚಾರದಲ್ಲಿ ರಾಜಕೀಯ ಮಾಡುವ ಅವಶ್ಯಕತೆ ಇಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಪುರಸಭಾ ಸದಸ್ಯರಾದ ಕೆ. ರಂಗಪ್ಪ, ಬಾಬು ಹೋಬಳದಾರ್, ಮುಖಂಡರಾದ ಕೋಳಿ ಸತೀಶ್, ಚಂದ್ರು ಗುಂಡ, ಇಂಚರ ಮಂಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.