ADVERTISEMENT

ತುಳಿದು ಬದುಕುವುದಕ್ಕಿಂತ ತಿಳಿದು ಬದುಕಿ

ಇಷ್ಟಲಿಂಗ ಮಹಾಪೂಜೆ, ಜನಜಾಗೃತಿ ಧರ್ಮ ಸಮ್ಮೇಳನದಲ್ಲಿ ಮಳಲಿಮಠ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2018, 17:07 IST
Last Updated 8 ಆಗಸ್ಟ್ 2018, 17:07 IST

ದಾವಣಗೆರೆ: ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಲೇಸು. ತುಳಿದವರು ಅಳಿಯುವರು. ತಿಳಿದವರು ಅಳಿದರೂ ತಿಳಿವು ಉಳಿಸಿ ಹೋಗುತ್ತಾರೆ ಎಂದು ಮಳಲಿಮಠದ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆಯ ಜಿಲ್ಲಾ ಘಟಕದಿಂದ ರೇಣುಕ ಮಂದಿರದಲ್ಲಿ ನಡೆಯುತ್ತಿರುವ 23ನೇ ವರ್ಷದ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಮತ್ತು ಜನಜಾಗೃತಿ ಧರ್ಮ ಸಮ್ಮೇಳನದ ನಾಲ್ಕನೇ ದಿನವಾದ ಬುಧವಾರ ಮಾತನಾಡಿದರು.

‘ಪುಸ್ತಕದ ವಿದ್ಯೆಯನ್ನು ಎಲ್ಲರೂ ನೀಡುತ್ತಾರೆ. ಮಸ್ತಕದ ವಿದ್ಯೆಯನ್ನು ನೀಡುವವರು ಶ್ರೀಗುರುಗಳು. ಮಸ್ತಕದ ಕಲ್ಮಶಗಳನ್ನು ತೆಗೆದು ಬದುಕನ್ನು ಬಂಗಾರ ಮಾಡುವವರು ಅವರು. ಯಾವುದು ನಮ್ಮ ಹಿಂದೆ ಬರುವುದಿಲ್ಲವೋ ಅದರ ಬೆನ್ನು ಹತ್ತಿದ್ದೇವೆ. ಅದರ ಬದಲು ನಮ್ಮ ಜತೆ ಬರುವುದನ್ನು ಹಿಂಬಾಲಿಸಬೇಕು. ಭೌತಿಕ ಸಂಪತ್ತಿಗಿಂತ ಅಧ್ಯಾತ್ಮ ಸಂಪತ್ತಿನ ಬೆನ್ನು ಹತ್ತಬೇಕು’ ಎಂದರು.

ADVERTISEMENT

ಆಷಾಢ ತಿಂಗಳು ರೈತರು ಕೃಷಿ ಕಡೆ ಗಮನ ಹರಿಸುವ ಸಮಯ. ಕೃಷಿ ಜತೆಗೆ ಋಷಿಗಳ ಕಡೆಯೂ ಗಮನ ಹರಿಸಿ ಎಂದು ವೀರ ಗಂಗಾಧರೇಶ್ವರ ಸ್ವಾಮೀಜಿ ಆಷಾಢದಲ್ಲಿ ಇಷ್ಟಲಿಂಗ ಪೂಜೆ ಮತ್ತು ಧರ್ಮಜಾಗೃತಿ ಕಾರ್ಯಕ್ರಮ ಆರಂಭಿಸಿದರು ಎಂದು ನೆನಪಿಸಿಕೊಂಡರು.

ಮಕ್ಕಳನ್ನು ಹಾಳು ಮಾಡುತ್ತಿರುವ ಹೆತ್ತವರು:

‘ಆರೋಗ್ಯ ರಕ್ಷಕ’ ಗೌರವ ಶ್ರೀರಕ್ಷೆ ಪ್ರಶಸ್ತಿ ಸ್ವೀಕರಿಸಿದ ಮಕ್ಕಳ ತಜ್ಞ ಡಾ. ಮುರುಘರಾಜೇಂದ್ರ ಕೌಜಲಗಿ ಮಾತನಾಡಿ, ‘ಮಕ್ಕಳನ್ನು ತಂದೆತಾಯಿಗಳೇ ಡಿಜಿಟಲ್‌ ತಂತ್ರಜ್ಞಾನದ ದಾಸರನ್ನಾಗಿ ಮಾಡುತ್ತಿದ್ದಾರೆ. ಪುಟ್ಟ ಮಗು ಅತ್ತ ಕೂಡಲೇ ಮೊಬೈಲ್‌ ನೀಡಿ ಅಭ್ಯಾಸ ಮಾಡಿಸಿರುತ್ತೇವೆ. ಹಾಗಾಗಿ ಮೊಬೈಲ್‌, ಲ್ಯಾಪ್‌ಟಾಪ್, ಎಲೆಕ್ಟ್ರಾನಿಕ್ಸ್‌ ವಸ್ತುಗಳ ಜತೆಗೆ ಮೈಮೆರಯುವ ಮಕ್ಕಳಿಗೆ ಸುತ್ತಲಿನ ಪ್ರಪಂಚದ ಅರಿವು ಇರುವುದಿಲ್ಲ’ ಎಂದು ಹೇಳಿದರು.

‘ಮಕ್ಕಳಿಗೆ ಶಾಲೆಗೆ ಹೋಗುವಾಗ, ಬರುವಾಗ ಕುರ್ಕುರೆ, ಪಾನಿಪೂರಿ, ಗೋಬಿ ಮುಂತಾದ ಹಾಳುಮೂಳು ಪದಾರ್ಥಗಳನ್ನು (ಜಂಕ್‌ಫುಡ್‌) ನೀಡಿ ಆರೋಗ್ಯವನ್ನು ಹಾಳು ಮಾಡುತ್ತಿದ್ದೇವೆ. ಹಾಳುಮೂಳುಗಳಿಂದ ಮಕ್ಕಳನ್ನು ದೂರ ಇರಿಸಿ’ ಎಂದು ಸಲಹೆ ನೀಡಿದರು.

ಅಲ್ಲಾಹ್‌ ಎಲ್ಲಿ ಹುಟ್ಟಿದ್ದು ಕೇಳಿ:

‘ಹಿಂದೂ ಧರ್ಮದ ಮೇಲೆ ನಿರಂತರ ದಾಳಿ ಮಾಡುವವರು, ರಾಮ ಹುಟ್ಟಿದ್ದೆಲ್ಲಿ ಎಂದು ಕೇಳುವವರು ಅಲ್ಲಾಹ್‌ ಹುಟ್ಟಿದ್ದು ಎಲ್ಲಿ ಎಂದು ಕೇಳಲಿ ನೋಡೋಣ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಸವಾಲು ಹಾಕಿದರು.

ಹಿಂದೂಗಳು ಶಾಂತಿಪ್ರಿಯರು. ಅದಕ್ಕಾಗಿ ಶೋಷಣೆ ಮಾಡುತ್ತಿದ್ದಾರೆ. ಗ್ರಹಣದ ದಿನ ಉಪವಾಸ ಇದ್ದರೆ ಒಳ್ಳೆಯದು ಎಂದು ಹಿರಿಯರು ಹೇಳಿದರೆ, ಚಂದ್ರಗ್ರಹಣದ ದಿನ ಬುದ್ಧಿಜೀವಿಗಳು ಸ್ಮಶಾನದಲ್ಲಿ ಊಟ ಮಾಡಿದರು. ಇವರು ಬುದ್ಧಿಜೀವಿಗಳಾ ಅಥವಾ ಅಜ್ಞಾನಿಗಳಾ ಎಂದು ಪ್ರಶ್ನಿಸಿದರು.

ಹೆಣ್ಣುಮಕ್ಕಳ ಬಹಳ ಎಚ್ಚರವನ್ನು ಹೆತ್ತವರು ವಹಿಸುತ್ತಿದ್ದಾರೆ. ಅಷ್ಟೇ ಎಚ್ಚರಿಕೆಯನ್ನು ಗಂಡು ಮಕ್ಕಳ ಬಗ್ಗೆಯೂ ವಹಿಸಬೇಕು. ಅವರು ಎಲ್ಲಿಗೆ ಹೋಗುತ್ತಾರೆ. ಏನು ಮಾಡುತ್ತಾರೆ ಎಂಬುದರ ಬಗ್ಗೆ ನಿಗಾ ವಹಿಸಬೇಕು ಎಂದು ಸಲಹೆ ನೀಡಿದರು.

ಬಾಳೆಹೊನ್ನೂರು ರಂಭಾಪುರಿ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೊನ್ನಾಳಿ ಹಿರೇಕಲ್ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಆವರಗೊಳ್ಳ ಪುರವರ್ಗಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ, ಉಕ್ಕುಡಗಾತ್ರಿ ಸ್ವಾಮೀಜಿ ಉಪಸ್ಥಿತರಿದ್ದರು. ಬಿಜೆಪಿ ಯುವಮೋರ್ಚಾ ದಕ್ಷಿಣ ಕ್ಷೇತ್ರ ಅಧ್ಯಕ್ಷ ಶಿವನಗೌಡ ಪಾಟೇಲ್‌ ಸ್ವಾಗತಿಸಿದರು. ಉಪನ್ಯಾಸಕ ವೀರಣ್ಣ ಬಿ.ಶೆಟ್ಟರ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.