ADVERTISEMENT

ಕಾಂಗ್ರೆಸ್‌ ಪರಸ್ಪರ ಕುಕ್ಕಿಕೊಳ್ಳಲಿ, ನಾವು ಅಭಿವೃದ್ಧಿ ಮಾಡೋಣ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 11:19 IST
Last Updated 24 ಸೆಪ್ಟೆಂಬರ್ 2019, 11:19 IST
ಸಿ.ಟಿ.ರವಿ 
ಸಿ.ಟಿ.ರವಿ    

ದಾವಣಗೆರೆ: ಗಿಣಿ ಹದ್ದಾಗಿ ಕುಕ್ಕಿತು ಎಂದು ಕಾಂಗ್ರೆಸ್‌, ಜೆಡಿಎಸ್‌ನವರು ಮಾರ್ಮಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರು ಪರಸ್ಪರ ಕುಕ್ಕಿಕೊಳ್ಳುತ್ತಿರಲಿ. ನಾವು ರಾಜ್ಯದ ಅಭಿವೃದ್ಧಿಯನ್ನು ಮಾಡೋಣ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ತಿಳಿಸಿದರು.

ಮಂಗಳವಾರ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು. ನೆರೆ ಸಂತ್ರಸ್ತರ ನೆರವಿಗೆ ಬಾರದೇ ಇರುವುದರಿಂದ ಸಂತ್ರಸ್ತರ ಶಾಪ ಬಿಜೆಪಿಗೆ ತಟ್ಟಲಿದೆ ಎಂಬ ಕಾಂಗ್ರೆಸ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಇರುವ ಶಾಪಗಳಿಂದ ವಿಮೋಚನೆಯಾಗಲು ಏಳು ಜನ್ಮ ಸಾಲದು’ ಎಂದು ವ್ಯಂಗ್ಯವಾಡಿದರು.

ನೆರೆ ಸಂತ್ರಸ್ತರಿಗೆ ಹಿಂದಿನ ಸರ್ಕಾರ ತಕ್ಷಣಕ್ಕೆ ₹ 3,600 ನೀಡುತ್ತಿತ್ತು. ನಮ್ಮ ಸರ್ಕಾರ ₹ 10 ಸಾವಿರ ನೀಡುತ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಹಿಂದೆ ₹ 96 ಸಾವಿರ ನೀಡಲಾಗುತ್ತಿತ್ತು. ನಾವು ₹ 5 ಲಕ್ಷ ನೀಡಲು ನಿರ್ಧರಿಸಿದ್ದು, ₹ 1ಲಕ್ಷ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರವು ಎನ್‌ಡಿಆರ್‌ಎಫ್‌ನಲ್ಲಿ ಒಂದು ರೂಪಾಯಿಯನ್ನೂ ಕಡಿಮೆ ಮಾಡಲ್ಲ. ಸರಿಯಾದ ನಮೂನೆಯಲ್ಲಿ ಭರ್ತಿ ಮಾಡಿ ಕಳುಹಿಸಬೇಕು ಅಷ್ಟೇ ಎಂದು ತಿಳಿಸಿದರು.

ADVERTISEMENT

ತಮ್ಮ ಕ್ಷೇತ್ರದಲ್ಲಿಯೇ ಗೆಲ್ಲದವರು ಉಪ ಚುನಾವಣೆಯಲ್ಲಿ ಗೆಲ್ತಾರಾ?: ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆಲ್ಲಬೇಕು, ಪಕ್ಷಕ್ಕೆ ದ್ರೋಹ ಬಗೆದವರಿಗೆ ಪಾಠ ಕಲಿಸಬೇಕು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ‘ಸ್ವಕ್ಷೇತ್ರದಲ್ಲಿ ಗೆಲ್ಲಲಾರದೇ ಎಲ್ಲೋ ಹೋಗಿ ಬಹಳ ಕಷ್ಟಪಟ್ಟು ದಡ ಸೇರಿದವರು ಅವರು. ಸಮಾಜವನ್ನು ಒಡೆಯಲು ಕೈ ಹಾಕಿದರು. ಅದಾಗಲಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸೀಟೂ ಗೆಲ್ಲಬಾರದು ಎಂದು ಕಾಂಗ್ರೆಸ್‌– ಜೆಡಿಎಸ್‌ ಒಂದಾಯಿತು. ಕೊನೆಗೆ ಪರದಾಡಿ ಎರಡು ಪಕ್ಷಗಳು ಒಂದೊಂದು ಸೀಟು ಪಡೆದವು. ಈಗ ಉಪಚುನಾವಣೆ ಗೆಲ್ತಾರಾ’ ಎಂದು ಪ್ರಶ್ನಿಸಿದರು.

ಬಿಜೆಪಿ ಮಾಸ್ ಪಾರ್ಟಿ, ನಾವು ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ತೀವಿ. ಅಧಿಕಾರ ಇಲ್ಲದಿದ್ದಾಗಲೇ ಚುನಾವಣೆಗೆ ಹೆದರಿಲ್ಲ. ಈಗ ಅಧಿಕಾರದಲ್ಲಿ ಇದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪ್ರತಿಭಟನೆಯ ರಾಜಕೀಯ ಮಾಡುತ್ತಿದೆ. ಅವರಿಗೆ ಮನಸ್ಸಿದ್ದರೆ 10 ಗ್ರಾಮಗಳನ್ನು ದತ್ತು ತೆಗೆದುಕೊಳ್ಳಲಿ. ನಾವೂ 15 ಗ್ರಾಮಗಳನ್ನು ದತ್ತು ತೆಗೆದುಕೊಳ್ಳುತ್ತೇವೆ. ಜೆಡಿಎಸ್‌ ಕೂಡ 5–6 ಗ್ರಾಮ ದತ್ತು ಪಡೆದು ಅಭಿವೃದ್ಧಿ ಮಾಡಲಿ. ಈ ರೀತಿಯ ಸ್ಪರ್ಧೆ ನಡೆದರೆ ಒಳ್ಳೆಯದು. ಬರೀ ರಾಜಕೀಯವಾದರೆ ಗ್ಯಾಸ್‌ ಸೋಡದಂತೆ ಸ್ವಲ್ಪ ಹೊತ್ತು ಅಷ್ಟೇ ಇರುತ್ತದೆ ಎಂದು ಕುಟುಕಿದರು.

ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿಯುವಲ್ಲಿ ಅನರ್ಹ ಶಾಸಕರು ಸಹಕಾರ ನೀಡಿದ್ದಾರೆ. ಹೀಗಾಗಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಗೆ ಹೋಗುತ್ತದೆ. ಯಾರಿಗೆ ಟಿಕೆಟ್‌ ಎಂಬುದನ್ನು ಪಕ್ಷದ ಪಾರ್ಲಿಮೆಂಟರಿ ಬೋರ್ಡ್ ನಿರ್ಧರಿಸುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.