ADVERTISEMENT

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ

ನ್ಯಾಕ್ ಸಂಯೋಜಕ ಪ್ರೊ.ಕೆ. ಸಜ್ಜತ್ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:47 IST
Last Updated 9 ಆಗಸ್ಟ್ 2019, 19:47 IST
ದಾವಣಗೆರೆಯ ಜೈನ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಗುಣಮಟ್ಟ ಭರವಸೆ ಘಟಕದ ನ್ಯಾಕ್ ಸಂಯೋಜಕ ಪ್ರೊ.ಕೆ. ಸಜ್ಜತ್ ಮಾತನಾಡಿದರು. ಜೈನ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಚಲ್ ಚಂದ್, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಸ್. ಮಂಜುನಾಥ  –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜೈನ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರಥಮ ವರ್ಷದ ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಗುಣಮಟ್ಟ ಭರವಸೆ ಘಟಕದ ನ್ಯಾಕ್ ಸಂಯೋಜಕ ಪ್ರೊ.ಕೆ. ಸಜ್ಜತ್ ಮಾತನಾಡಿದರು. ಜೈನ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಚಲ್ ಚಂದ್, ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಎಸ್. ಮಂಜುನಾಥ  –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೇವಲ ಸಾಂಪ್ರಾದಾಯಿಕ ಶಿಕ್ಷಣದ ಪಠ್ಯಕ್ರಮವನ್ನು ನಿಗದಿತ ಸಮಯದಲ್ಲಿ ಪೂರೈಸುವುದು ಶಿಕ್ಷಣ ಸಂಸ್ಥೆಗಳ ಕೆಲಸವಲ್ಲ. ಬದಲಾಗಿ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸುವುದು ಶಿಕ್ಷಣ ಸಂಸ್ಥೆಗಳ ಮುಖ್ಯ ಗುರಿಯಾಗಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಗುಣಮಟ್ಟ ಭರವಸೆ ಘಟಕದ ನ್ಯಾಕ್ ಸಂಯೋಜಕ ಪ್ರೊ.ಕೆ. ಸಜ್ಜತ್ ಸಲಹೆ ನೀಡಿದರು.

ಇಲ್ಲಿನ ಜೈನ್ ತಾಂತ್ರಿಕ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರಥಮ ವರ್ಷದ ತರಗತಿಗಳ ಉದ್ಘಾಟನೆ ಹಾಗೂ 2019–20ನೇ ಸಾಲಿನ ವಿದ್ಯಾರ್ಥಿಗಳ ಪ್ರವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರೀಯ, ಬಹುರಾಷ್ಟ್ರೀಯ ಯಾವುದೇ ಕಂಪನಿಗಳಾದರೂ ನಿಮಗೆ ಸುಲಭವಾಗಿ ಕೆಲಸ ನೀಡುವುದಿಲ್ಲ. ಬದಲಾಗಿ ನಿಮ್ಮ ಕೌಶಲವನ್ನು ಪರಿಗಣಿಸುತ್ತವೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆಯೂ ಸುಪ್ತವಾಗಿ ಅಡಗಿರುತ್ತದೆ. ಅದನ್ನು ಅಭಿವ್ಯಕ್ತಿಗೊಳಿಸಲು ವಿದ್ಯಾರ್ಥಿಗಳು ಕೀಳರಿಮೆ ಇದೆ. ವಿದ್ಯಾರ್ಥಿಗಳು ಬೆಳೆದಿರುವ ಸಾಮಾಜಿಕ ಪರಿಸರ, ಆರ್ಥಿಕ ಸ್ಥಿತಿ ಹಾಗೂ ಬಾಲ್ಯದ ಶಿಕ್ಷಣವೇ ಇದಕ್ಕೆ ಕಾರಣ. ಪ್ರತಿಭೆ ಪ್ರದರ್ಶನಕ್ಕೆ ಕಾಲೇಜಿನ ಕಲ್ಚರಲ್ ಅಸೋಸಿಯೇಷನ್ ಹಾಗೂ ತಾಂತ್ರಿಕ ಉತ್ಸವಗಳು ವೇದಿಕೆ ಕಲ್ಪಿಸುತ್ತವೆ. ಅವುಗಳನ್ನು ಸದುಪಯೋಗಪಡಿಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಶೇ 50ರಷ್ಟು ಎಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಎಂದು ನ್ಯಾಸ್‌ಕಾಂ ವರದಿ ಹೇಳಿದೆ. ವೃತ್ತಿಪರ ಕೌಶಲ, ನಾಯಕತ್ವ ಕೌಶಲ, ಕ್ರಿಯಾತ್ಮಕ ಆಲೋಚನೆಗಳು ಇಲ್ಲದಿರುವುದೇ ಕಾರಣ. ಈ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲು ಜೈನ್ ಶಿಕ್ಷಣ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಸಲಹಾ ಕೇಂದ್ರವಿದೆ’ ಎಂದು ಹೇಳಿದರು.

ಯಾವುದೇ ವಿಶ್ವವಿದ್ಯಾಲಯಗಳು ತನ್ನ ಪಠ್ಯಕ್ರಮದಲ್ಲಿ ನಿಗದಿತ ಕಾಲಮಿತಿಯೊಳಗೆ ಎಲ್ಲವನ್ನು ಅಳವಡಿಸಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನ ನೀಡಬೇಕು. ಕೌಶಲ ಅಭಿವೃದ್ಧಿಪಡಿಸಬೇಕು. ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಬೇಕು. ವೃತ್ತಿ ಮಾರ್ಗದರ್ಶನ, ಭಯ ಹೋಗಲಾಡಿಸಲುಸಮಾಲೋಚನೆ ನಡೆಸಬೇಕು. ಇದಕ್ಕಾಗಿಯೇ ಜೈನ್ ಕಾಲೇಜು ಹಲವು ವೇದಿಕೆಗಳನ್ನು ಆರಂಭಿಸಿವೆ ಎಂದು ಹೇಳಿದರು.

‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಭಾರತೀಯ ಶಿಕ್ಷಣ ವ್ಯವಸ್ಥೆ ವೈವಿಧ್ಯತೆಯಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಗುಣಮಟ್ಟ ಹಾಗೂ ಉತ್ಕೃಷ್ಠ ಶಿಕ್ಷಣ ನೀಡುವುದು ಸರ್ಕಾರಗಳಿಗೆ ಸವಾಲಿನ ಕೆಲಸವಾಗಿದೆ. ಆದ್ದರಿಂದ ಗುಣಮಟ್ಟವನ್ನು ಹೊರಗಿನಿಂದ ಯಾರೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ. ಅದು ಹೃದಯಾಂತರಾಳದಿಂದ ಬರಬೇಕು. ಪ್ರತಿವರ್ಷ 3.6 ಕೋಟಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿದ್ದು, ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ ಟಿ.ಎಸ್. ಮಾತನಾಡಿ ‘ಗುಣಮಟ್ಟದ ಶಿಕ್ಷಣ ನೀಡುವುದೇ ಕಾಲೇಜಿನ ಮುಖ್ಯ ಧ್ಯೇಯವಾಗಿದ್ದು, ಇದಕ್ಕಾಗಿ ಕಾಲೇಜಿನಲ್ಲಿ ಗ್ರಂಥಾಲಯ, ಹಾಸ್ಟೆಲ್‌ ಹಾಗೂ ಸಾರಿಗೆ ಸೇರಿ ಹಲವು ಸೌಲಭ್ಯಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿವಿಧ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ನೀಡಿ ಕ್ಯಾಂಪಸ್ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದರು.

ಜೈನ್‌ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಚಲ್ ಚಂದ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಂಚಾಲಕ ಡಾ. ಜಗದೀಶ್ ಎಂ.ಆರ್, ವಿವಿಧ ವಿಭಾಗಗಳ ಮುಖ್ಯಸ್ಥರಾದ ಬಿ.ಜಿ. ನಾಗರಾಜ್, ಡಾ.ವಿ.ಕೆ. ನಾಯಕ್‌, ಚಂದ್ರಶೇಖರ ಕೆ, ರಜನೀಶ್ ಎನ್. ಮರೀಗೌಡ, ಡಾ.ಎನ್‌. ರಾಕೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.