ಬಸವಾಪಟ್ಟಣ: ಇಲ್ಲಿನ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಮೂರು ದಿನಗಳಿಂದ ಹದವಾದ ಮಳೆಯಾಗಿದ್ದು, ರೈತರು ಭೂಮಿ ಉಳುಮೆಯಲ್ಲಿ ತೊಡಗಿದ್ದಾರೆ. ಕೆಲವರು ಎತ್ತುಗಳ ಮೂಲಕ, ಇನ್ನೂ ಕೆಲ ರೈತರು ಟ್ರಾಕ್ಟರ್‌ಗಳ ಮೂಲಕ ಉಳುಮೆ ಮಾಡುತ್ತಿದ್ದಾರೆ.
ಬಸವಾಪಟ್ಟಣ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿ ಮೆಕ್ಕೆಜೋಳ, ತೊಗರಿ, ಇತರ ದ್ವಿದಳ ಧಾನ್ಯಗಳು ಸೇರಿ ಒಟ್ಟು 4,500 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ರೈತರು ಕೃಷಿ ಇಲಾಖೆಯಿಂದ ಪರವಾನಗಿ ಪಡೆದ ರಸಗೊಬ್ಬರ ಮಾರಾಟಗಾರರಿಂದ ಮಾತ್ರಗೊಬ್ಬರಗಳನ್ನು ಖರೀದಿಸಬೇಕು. ಪ್ರತಿ ವರ್ಷ ಒಂದೇ ಬೆಳೆಗೆ ಸೀಮಿತವಾಗದೇ ಬೆಳೆಯ ಪರಿವರ್ತನೆಯಲ್ಲಿ ತೊಡಗಬೇಕು ಎಂದು ಕೃಷಿ ಅಧಿಕಾರಿ ಎನ್. ಲತಾ ತಿಳಿಸಿದ್ದಾರೆ.
‘ಸಾಕಷ್ಟು ಬೇಡಿಕೆ ಇರುವ ಹತ್ತಿ, ಹೈಬ್ರೀಡ್ ಜೋಳ, ಪಾಪ್‌ಕಾರ್ನ್ ಮೆಕ್ಕೆಜೋಳ ಬೆಳೆಯಬಹುದು. ಅಕ್ಕಡಿ ಬೆಳೆಗಳಾದ ತೊಗರಿ, ಅವರೆ, ಅಲಸಂದೆ, ಹೆಸರು ಬೆಳೆಯುವುದರಿಂದ ಫಲವತ್ತತೆ ಕಾಪಾಡಬಹುದು. ಜೂನ್ ಮೊದಲ ವಾರದಿಂದ ನಮ್ಮ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು’ ಎಂದರು.
‘ಈ ಭಾಗದ ಮಣ್ಣಿನಲ್ಲಿ ಪಟ್ಯಾಷ್ ಅಂಶ ಕಡಿಮೆ ಇದ್ದು, ರೈತರು ತಮ್ಮ ಬೆಳೆಗಳಿಗೆ ಅವೈಜ್ಞಾನಿಕವಾಗಿ ಕೇವಲ ಡಿ.ಎ.ಪಿ ರಾಸಾಯನಿಕ ಗೊಬ್ಬರವನ್ನು ಮಾತ್ರ ಬಳಸುತ್ತಿದ್ದಾರೆ. ಡಿ.ಎ.ಪಿ.ಯಲ್ಲಿ (18-46-0) ಸಾರಜನಕ ಮತ್ತು ರಂಜಕ ಮಾತ್ರ ಇದ್ದು, ಇದರಲ್ಲಿ ಪೊಟ್ಯಾಷ್ ಅಂಶ ಇರುವುದಿಲ್ಲ. ಆದ್ದರಿಂದ ಕೃಷಿ ತಜ್ಞರ ಸಲಹೆ ಪಡೆದು ಮಣ್ಣಿನ ಪರೀಕ್ಷೆ ನಡೆಸಿ, 17.17.17. ಅಥವಾ, 19.19.19 ಅಥವಾ 15.15.15 ಅಥವಾ 10.26.26 ಕಾಂಪ್ಲೆಕ್ಸ್ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು’ ಎಂದು ಸಲಹೆ ನೀಡಿದರು.
‘ನಮ್ಮಲ್ಲಿ ರಾಸಾಯನಿಕ ಗೊಬ್ಬರ ಮತ್ತು ಬಿತ್ತನೆ ಬೀಜಗಳ ಅಭಾವ ಇಲ್ಲ. ಹೀಗಾಗಿ ರೈತರು ಮುಂಚಿತವಾಗಿ ಅವುಗಳನ್ನು ಖರೀದಿಸಿ ಸಂಗ್ರಹಿಸಿಕೊಳ್ಳಬಾರದು’ ಎಂದು ಇಲ್ಲಿನ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಬಿ.ಎಲ್.ಅವಿನಾಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.