ADVERTISEMENT

ಮಹಾನಗರ ಪಾಲಿಕೆ ಉದ್ಯೋಗಿ ಅಮಾನತು

ನಕಲಿ ನೌಕರನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:51 IST
Last Updated 23 ಏಪ್ರಿಲ್ 2025, 15:51 IST
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ವೈದ್ಯಕೀಯ ಸೇವೆ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಉಪಲೋಕಾಯುಕ್ತ ಬಿ.ವೀರಪ್ಪ ಅವರು ವೈದ್ಯಕೀಯ ಸೇವೆ ಬಗ್ಗೆ ರೋಗಿಗಳಿಂದ ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಮಹಾನಗರ ಪಾಲಿಕೆಯ 3ನೇ ವಲಯ ಕಚೇರಿಯ ಕೆಲಸಕ್ಕೆ ವ್ಯಕ್ತಿಯೊಬ್ಬರನ್ನು ನಿಯೋಜಿಸಿದ್ದ ಬಿಲ್‌ ಕಲೆಕ್ಟರ್‌ ನೇತ್ರಾವತಿ ಅವರನ್ನು ಅಮಾನತುಗೊಳಿಸಲು ಹಾಗೂ ನಕಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲು ಉಪಲೋಕಾಯುಕ್ತ ಬಿ.ವೀರಪ್ಪ ಸೂಚಿಸಿದರು.

ಕಚೇರಿಯಲ್ಲಿ ನೇತ್ರಾವತಿ ಅವರಿಗೆ ಸೇರಿದ ಕಡತಗಳನ್ನು ಬಸವರಾಜ್‌ ನಿರ್ವಹಿಸುತ್ತಿದ್ದ ಬಗ್ಗೆ ವಿಡಿಯೊ ಸಹಿತ ವ್ಯಕ್ತಿಯೊಬ್ಬರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಪಾಲಿಕೆ ಕಚೇರಿಗೆ ಬುಧವಾರ ಭೇಟಿ ನೀಡಿದ್ದ ವೀರಪ್ಪ, ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರು.

‘ಸಂಬಂದಪಟ್ಟ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ವಿಡಿಯೊ ಸತ್ಯಾಸತ್ಯತೆ ತಿಳಿಯಲು ಪೊಲೀಸರಿಗೆ ಪತ್ರ ಬರೆಯಲಾಗಿದೆ’ ಎಂದು ಆಯುಕ್ತೆ ರೇಣುಕಾ ಮಾಹಿತಿ ನೀಡಿದರು.

ADVERTISEMENT

ಇದರಿಂದ ಅಸಮಾಧಾನಗೊಂಡ ಉಪಲೋಕಾಯುಕ್ತ, ‘ಸಂಬಂಧಪಟ್ಟ ಸಿಬ್ಬಂದಿಯನ್ನು ಕೂಡಲೇ ಅಮಾನತುಗೊಳಿಸಿ. ಸರ್ಕಾರಿ ನೌಕರರ ಹೆಸರಿನಲ್ಲಿ ಕಾರ್ಯನಿರ್ವಹಿಸಿದ ವ್ಯಕ್ತಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಬೇಕು’ ಎಂದು ಸೂಚನೆ ನೀಡಿದರು.

115 ವಾಹನ ಜಪ್ತಿ:

ಮಹಾನಗರ ಪಾಲಿಕೆಗೆ ಸೇರಿದ 115 ವಾಹನಗಳನ್ನು ಜಪ್ತಿ ಮಾಡುವಂತೆ ಉಪಲೋಕಾಯುಕ್ತ ವೀರಪ್ಪ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ (ಆರ್‌ಟಿಒ) ಸೂಚನೆ ನೀಡಿದರು.

ಕಸ ಸಂಗ್ರಹ, ವಿಲೇವಾರಿ ಸೇರಿ 200ಕ್ಕೂ ಅಧಿಕ ವಾಹನ ಮಹಾನಗರ ಪಾಲಿಕೆಯಲ್ಲಿವೆ. ಇವುಗಳಲ್ಲಿ ಎಷ್ಟು ವಾಹನ ಯೋಗ್ಯತಾ ಪ್ರಮಾಣಪತ್ರ (ಫಿಟ್‌ನೆಸ್‌ ಸರ್ಟಿಫಿಕೇಟ್‌) ಹೊಂದಿವೆ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಬುಧವಾರ ಬೆಳಿಗ್ಗೆ ಆರ್‌ಟಿಒಗೆ ಉಪಲೋಕಾಯುಕ್ತ ಸೂಚಿಸಿದ್ದರು.

‘ಮಹಾನಗರ ಪಾಲಿಕೆಯ 200 ವಾಹನಗಳಲ್ಲಿ 115 ವಾಹನಗಳು ಯೋಗ್ಯತಾ ಪ್ರಮಾಣ ಪತ್ರ ಹೊಂದಿಲ್ಲ’ ಎಂಬುದಾಗಿ ಆರ್‌ಟಿಒ ಸಂಜೆ ಹೊತ್ತಿಗೆ ವರದಿ ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ ವೀರಪ್ಪ ಅವರು ಆ ಎಲ್ಲ ವಾಹನಗಳ ಜಪ್ತಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಮಂಜುನಾಥ್, ಲೋಕಾಯುಕ್ತ ಹೆಚ್ಚುವರಿ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ, ವಿ.ಎನ್.ಮಿಲನಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಪೂರೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.