ADVERTISEMENT

ತನ್ನನ್ನು ತಾನು ಅರಿತವನೇ ಶರಣ: ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ

ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 13:59 IST
Last Updated 21 ಸೆಪ್ಟೆಂಬರ್ 2019, 13:59 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರಿಗೆ ತೋಂಟದ ಸಿದ್ದರಾಮ ಸ್ವಾಮೀಜಿ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ’ ನೀಡಿ ಸನ್ಮಾನಿಸಿದರು
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಅವರಿಗೆ ತೋಂಟದ ಸಿದ್ದರಾಮ ಸ್ವಾಮೀಜಿ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ ಪ್ರಶಸ್ತಿ’ ನೀಡಿ ಸನ್ಮಾನಿಸಿದರು   

ದಾವಣಗೆರೆ: ಜಗತ್ತಿನಲ್ಲಿ ಬಸವಣ್ಣನವರಿಗಿಂತ ಮತ್ತೊಬ್ಬ ವ್ಯಕ್ತಿತ್ವ ವಿಕಸಕ ಮತ್ತೊಬ್ಬರಿಲ್ಲ. ಅವರಿಗೆ ಯಾರೂ ಸಣ್ಣವರಲ್ಲ, ಯಾರೂ ದಲಿತರಲ್ಲ. ಯಾರೂ ಹಿರಿಯರಲ್ಲ, ಕಿರಿಯರಿಲ್ಲ. ಎಲ್ಲರನ್ನೂ ಸಮಾನವಾಗಿ ಕಂಡ ವಿಶ್ವಗುರು ಎಂದು ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಹೇಳಿದರು.

ನಗರದ ಕುವೆಂಪು ಕನ್ನಡಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ‘ಆರೂಢ ದಾಸೋಹಿ ಶರಣ ಮಾಗನೂರು ಬಸಪ್ಪ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬಸವತತ್ವದ ಬಗ್ಗೆ ಪ್ರಾರ್ಥನೆ, ಭಾಷಣ ಮಾಡುತ್ತೇವೆಯೇ ಹೊರತು ಅದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಬದುಕಿನಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಅರಿವು ಜಾಗೃತವಾದರೆ ಮಾತ್ರ ಶರಣಸ್ಥಲ ಜಾಗೃತವಾಗಲು ಸಾಧ್ಯ. ಎಲ್ಲಿಯವರೆಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಶರಣನಾಗಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ADVERTISEMENT

ಅರಿವೇ ಗುರು ಎಂಬ ಅರ್ಥ ಬಸವಣ್ಣನ ‘ಭೇರುಂಡನ ಪಕ್ಷಿಗೆ ದೇಹವೊಂದೇ ತಲೆ ಎರಡರ ಮಧ್ಯೆ..’ ಎಂಬ ವಚನದಲ್ಲಿ ಕಾಣಬಹುದು. ಪ್ರತಿಯೊಬ್ಬರೂ ಅಂಗಭಾವದಿಂದ ಲಿಂಗಭಾವವಾಗಿ ಬಸವಣ್ಣನಾಗಬೇಕು ಎಂದು ಹೇಳಿದರು.

ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ, ‘ವಚನ ಸಾಹಿತ್ಯ ವಿಶ್ವದ ಮೂಲೆ ಮೂಲೆಗೆ ಪಸರಿಸಿದರೆ ವಿಶ್ವ ಸಾಹಿತ್ಯದ ಮಾನ್ಯತೆ ಸಿಗಲಿದೆ. ಇಂತಹ ಕಾರ್ಯ ಹೆಚ್ಚು ನಡೆಯಬೇಕು’ ಎಂದರು.

ಕನ್ನಡವನ್ನು ಮೊದಲು ಬೆಂಗಳೂರಿನಲ್ಲಿ ಉಳಿಸಬೇಕು. ಇಂದು ಕನ್ನಡನಾಡಿನಲ್ಲೇ ಕನ್ನಡ ಉಳಿಸುವ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಕನ್ನಡಕ್ಕಿರುವ ಮಾಧುರ್ಯ ಜಗತ್ತಿನ ಯಾವ ಭಾಷೆಗೂ ಇಲ್ಲ. ಕನ್ನಡಿಗರ ಜೊತೆ ಕನ್ನಡದಲ್ಲೇ ಮಾತನಾಡಿ ಕನ್ನಡ ಉಳಿಸಲು ಎಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.

ಮಾಗನೂರು ಬಸಪ್ಪನವರು ಸ್ವಾರ್ಥಕ್ಕಾಗಿ ಬದುಕಲಿಲ್ಲ. ಪರೋಪಕಾರಕ್ಕೆ ಬದುಕಿದರು. ಬದುಕಿನುದ್ದಕ್ಕೂ ಸಮಾಜ ಸೇವೆ ಕಾಯಕವಾಗಿಸಿಕೊಂಡರು. ಸಮಾಜ ಇಂತಹವರನ್ನು ಕೃತಜ್ಞತೆಯಿಂದ ಸ್ಮರಿಸಬೇಕು. ವಚನ ಸಾಹಿತ್ಯವನ್ನು ವಿಶ್ವದ ಹಲವು ಭಾಷೆಗಳಿಗೆ ಅನುವಾದಿಸಿದ ಅರವಿಂದ ಜತ್ತಿಯವರು ಆದರ್ಶರಾಗಿದ್ದಾರೆ. ಇಂತಹವರಿಗೆ ಪ್ರಶಸ್ತಿ ಸಂದಿರುವುದು ಔಚಿತ್ಯಪೂರ್ಣ ಎಂದು ಹೇಳಿದರು.

ಶರಣ ಮಾಗನೂರು ಬಸಪ್ಪ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂಗಮೇಶ್ವರಗೌಡರು, ‘ರಾಜ್ಯದ 30 ಜಿಲ್ಲೆಗಳಲ್ಲಿ ವಚನ ಸಾಹಿತ್ಯ ಕುರಿತ ದತ್ತಿ ಉಪನ್ಯಾಸ ಏರ್ಪಡಿಸುವ ಆಸೆ ಇದೆ. ವಚನ ಸಾಹಿತ್ಯ ಯಾವುದೇ ಜಾತಿ, ಧರ್ಮಕ್ಕೆ ಸೀಮಿತವಲ್ಲ. ಇದು ಮಾನವಧರ್ಮದ ಸಾಹಿತ್ಯ. ಬಸವತತ್ವ ಬೆಳೆಸಲು ಎಲ್ಲರೂ ಸಹಕರಿಸಿ’ ಎಂದರು.

ದಾವಣಗೆ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ್‌ ಬಣಕಾರ ಅಭಿನಂದನಾ ನುಡಿಗಳನ್ನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎ.ಆರ್‌. ಉಜ್ಜಿನಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಡಾ.ಶ್ರೀನಿವಾಸ ಕೈವಾರ, ಕೋಲಾರ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.