ಹೊನ್ನಾಳಿ: ಮರಾಠ ಸಮುದಾಯ ತೀರಾ ಹಿಂದುಳಿದಿದ್ದು, ಅದನ್ನು ಮೇಲೆತ್ತುವ ಕೆಲಸವಾಗಬೇಕಾಗಿದೆ. ಮರಾಠರ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗಬೇಕಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಂ.ಜಿ. ಮೂಳೆ ಹೇಳಿದರು.
ಪಟ್ಟಣದಲ್ಲಿ ಶನಿವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಪತ್ತಿನ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಪತ್ತಿನ ಸಹಕಾರ ಸಂಘದ ಸ್ಥಾಪನೆ ಸುಲಭದ ಕೆಲಸವಲ್ಲ, ಬಹಳ ಎಚ್ಚರಿಕೆಯಿಂದ, ಪ್ರಾಮಾಣಿಕತೆಯಿಂದ ಸಂಘದ ಅಧ್ಯಕ್ಷರು, ನಿರ್ದೇಶಕರು ಕೆಲಸ ಮಾಡಬೇಕಾಗಿದೆ’ ಎಂದರು.
‘ಶಿವಾಜಿ ಅವರನ್ನು ಎಲ್ಲರೂ ನೆನೆಯುತ್ತಾರೆ. ಆದರೆ ಷಹಜಿ ಮಹಾರಾಜ್ ಅವರನ್ನು ನಾವೆಲ್ಲರೂ ಮರೆತುಬಿಟ್ಟಿದ್ದೇವೆ. ಅವರ ಸ್ವರಾಜ್ ಘೋಷಣೆಯನ್ನು ನೆನಪು ಮಾಡಿಕೊಳ್ಳಬೇಕಾಗಿದೆ. ಅವರ ಸಮಾಧಿಯ ಜೀರ್ಣೋದ್ಧಾರ ಮಾಡಬೇಕಾಗಿದೆ’ ಎಂದು ಹೇಳಿದರು.
‘ಸಂಘದ ಸಾಲ ಪಡೆದವರು ಬಡ್ಡಿ ಸಹಿತ ಮರುಪಾವತಿ ಮಾಡಬೇಕು. ನಾವು ಸ್ವಾರ್ಥಕ್ಕಾಗಿ ಹೋರಾಟ ಮಾಡಿದವರಲ್ಲ, ದೇಶಕ್ಕಾಗಿ ಹೋರಾಟ ಮಾಡಿದವರು’ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಹೇಳಿದರು.
ಮರಾಠ ಸಮುದಾಯದ ಮಂಜುನಾಥ್ ಭಾರತಿ ಸ್ವಾಮೀಜಿ, ಹಿರೇಕಲ್ಮಠದ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಶಾಸಕ ಡಿ.ಜಿ. ಶಾಂತನಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಸಂಘದ ಅಧ್ಯಕ್ಷ ಎಚ್.ಬಿ. ದೇವರಾಜ್ ನೆಲಹೊನ್ನೆ, ವೀರ ಶಿವಾಜಿ ಸೇನೆ ರಾಜ್ಯ ಅಧ್ಯಕ್ಷರಾದ ಕಮಲೇಶ್‍ರಾವ್, ಮರಾಠ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎ.ಆರ್. ಚಂದ್ರಶೇಖರ್ ರಾವ್, ರಾಮಚಂದ್ರರಾವ್, ಲಿಂಗಾಪುರ ಸುರೇಶ್, ಯೋಗಿತಾ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.