ದಾವಣಗೆರೆ: ‘ನಮ್ಮ ದೇಹ, ಹಣ ಮತ್ತು ಯೌವ್ವನ ಯಾವುದೂ ಶಾಶ್ವತವಲ್ಲ. ಆದರೆ, ನಾವು ಮಾಡುವಂತಹ ಪುಣ್ಯ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ಆದ್ದರಿಂದ ನಾವೆಲ್ಲರೂ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಅಫಜಲಪುರ ಮಠದ ವಿಶ್ವಕರ್ಮ ಪ್ರಣವ ನಿರಂಜನ ಸ್ವಾಮೀಜಿ ಹೇಳಿದರು.
ಇಲ್ಲಿನ ಕಾಳಿಕಾದೇವಿ ರಸ್ತೆಯಲ್ಲಿರುವ ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವಿಶ್ವಕರ್ಮ ಸಮಾಜ ಸಂಘದಿಂದ ಆಯೋಜಿಸಿದ್ದ 42ನೇ ವರ್ಷದ ಸಾಮೂಹಿಕ ಉಪನಯನ ಮತ್ತು ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮನೆಯಲ್ಲಿ ಕಸ ತುಂಬಿದಾಗ ಗುಡಿಸಿ ಸ್ವಚ್ಛಗೊಳಿಸುತ್ತೇವೆ, ಬಟ್ಟೆ ಕೊಳೆಯಾದರೆ ತೊಳೆದು ಶುದ್ಧ ಮಾಡುತ್ತೇವೆ. ಅದೇ ರೀತಿ ನಮ್ಮ ಮನಸ್ಸು ಕಲ್ಮಶದಿಂದ ತುಂಬಿದ್ದರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಆಗ ಮನಸ್ಸು ಶುದ್ಧವಾಗುವುದಲ್ಲದೇ, ಶಾಂತಿ ದೊರೆಯುತ್ತದೆ’ ಎಂದರು.
‘ಮಾನವ ಜನ್ಮವು ಶ್ರೇಷ್ಠವಾಗಿದ್ದು, ಅದನ್ನು ಹಾಳು ಮಾಡಿಕೊಳ್ಳದೇ ಧರ್ಮ ಕಾರ್ಯಗಳ ಮೂಲಕ ಸಾರ್ಥಕತೆ ಪಡೆಯಬೇಕು. ವಿಶ್ವಕರ್ಮ ಸಮಾಜ ಸಂಘವು, ಜನರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ಮನಗಂಡು, ಉಚಿತ ಸಾಮೂಹಿಕ ವಿವಾಹ ಮತ್ತು ಉಪನಯನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ’ ಎಂದರು.
‘ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜವು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಹಿಂದೆ ಇದೇ ಸ್ಥಳದಲ್ಲಿ ಚಿಕ್ಕದಾಗಿದ್ದ ದೇವಾಲಯವನ್ನು ಸುಂದರವಾಗಿ ಅಭಿವೃದ್ಧಿಪಡಿಸಿರುವುದು ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಸಮಾಜದ ಅಭಿವೃದ್ಧಿಗೆ ತಮ್ಮ ಸಹಕಾರ ಸದಾ ಇರುತ್ತದೆ’ ಎಂದು ಜವಳಿ ವರ್ತಕ ಬಿ.ಸಿ.ಉಮಾಪತಿ ಹೇಳಿದರು.
‘ವಿಶ್ವಕರ್ಮ ಸಮಾಜದ ಶ್ರೇಷ್ಠ ಕಾರ್ಯಗಳನ್ನು ಪುರಾಣಗಳ ಕಾಲದಿಂದಲೂ ಉಲ್ಲೇಖಿಸಲಾಗಿದೆ. ತ್ರೇತಾಯುಗ ಮತ್ತು ದ್ವಾಪರ ಯುಗಗಳಲ್ಲಿ ಮಾತ್ರವಲ್ಲದೆ, ಕಲಿಯುಗದಲ್ಲೂ ವಿಶ್ವಕರ್ಮ ಸಮಾಜದ ಕೆಲಸಗಳ ಮಹತ್ವವನ್ನು ತಿಳಿಸಲಾಗಿದೆ’ ಎಂದು ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ. ಮುರುಗೇಶ್ ಹೇಳಿದರು.
ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕರ್ಮ ಸಮಾಜ ಸಂಘದ ಅಧ್ಯಕ್ಷ ಆರ್.ವಿಜಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬಸಾಪುರದ ಬಿ. ನಾಗೇಂದ್ರಚಾರ್, ಎನ್. ಪೂರ್ವಚಾರ್, ಬಿ.ಪಿ. ಜಗನ್ನಾಥ್, ಬಿ.ಪಿ. ರಮೇಶಚಾರ್, ಸಿ.ಪಿ. ಪೂರ್ವಚಾರ್, ಕೊಟ್ರೇಶಚಾರ್, ಬಿ.ವಿ ರಾಜಶೇಖರ್ ಇನ್ನಿತರರು ಇದ್ದರು.
ಸಮಾರಂಭದಲ್ಲಿ 2 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರೆ, 102 ವಟುಗಳಿಗೆ ಉಪನಯನ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.