ದಾವಣಗೆರೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಪರಿಶೀಲಿಸಲು ಮುಂದಾಗಿರುವ ಶಿಕ್ಷಣ ಇಲಾಖೆ, ಜಿಲ್ಲೆಯ 63 ಶಾಲೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ನೋಟಿಸ್‌ಗೆ ಬರುವ ಉತ್ತರವನ್ನು ಆಧರಿಸಿ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ಜರಿಗಿಸಲು ನಿರ್ಧರಿಸಿದೆ.
ಜಿಲ್ಲೆಯ ಚನ್ನಗಿರಿ ಕ್ಷೇತ್ರದ 10, ದಾವಣಗೆರೆ ಉತ್ತರ ಕ್ಷೇತ್ರದ 13, ದಾವಣಗೆರೆ ದಕ್ಷಿಣದ 16, ಹರಿಹರ 11, ಹೊನ್ನಾಳಿ 7 ಹಾಗೂ ಜಗಳೂರು ಕ್ಷೇತ್ರದ 6 ಶಾಲೆಗಳು ನೋಟಿಸ್ ಪಡೆದಿವೆ. ಇದರಲ್ಲಿ 44 ಅನುದಾನಿತ, 10 ಸರ್ಕಾರಿ ಹಾಗೂ 9 ಅನುದಾನ ರಹಿತ ಶಾಲೆಗಳಿವೆ. ಶೂನ್ಯ ಫಲಿತಾಂಶ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಮೂರು ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತಿದೆ.
2024–25ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ ಶೇ 66.08 ಫಲಿತಾಂಶ ದಾಖಲಿಸುವ ಮೂಲಕ ರಾಜ್ಯದಲ್ಲಿ 21ನೇ ಸ್ಥಾನ ಪಡೆದಿದೆ. 2023–24ನೇ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ 2 ಸ್ಥಾನ ಮೇಲಕ್ಕೆ ಜಿಗಿದರೂ ಶೇಕಡವಾರು ಫಲಿತಾಂಶದಲ್ಲಿ ಶೇ 8.2ರಷ್ಟು ಕುಸಿತ ಕಂಡಿರುವುದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.
‘ಶಾಲೆಗಳು ಕನಿಷ್ಠ ಶೇ 40ರಷ್ಟು ಫಲಿತಾಂಶವನ್ನಾದರೂ ಪಡೆಯಬೇಕು. ಕನಿಷ್ಠ ಫಲಿತಾಂಶ ಹೊಂದದೇ ಇರುವ ಶಾಲೆಗಳ ವಿರುದ್ಧ ಶಿಸ್ತುಕ್ರಮಕ್ಕೆ ನಿರ್ಧರಿಸಲಾಯಿತು. ಶಿಕ್ಷಕರ ಕೊರತೆಯ ಕಾರಣ ನೀಡಿ ಅನುದಾನಿತ ಶಾಲೆಗಳಲ್ಲಿ ಕೆಲವು ಈಗಾಗಲೇ ಉತ್ತರ ನೀಡಿವೆ. ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲಿದೆ’ ಎನ್ನುತ್ತಾರೆ ಡಿಡಿಪಿಐ ಜಿ.ಕೊಟ್ರೇಶ್.
ಶೈಕ್ಷಣಿಕ ವರ್ಷದ ಆರಂಭದಲ್ಲೇ ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆ 20 ಅಂಶದ ಕಾರ್ಯಕ್ರಮಗಳನ್ನು ಸೂಚಿಸಿತ್ತು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ರೀತಿ, ಅನುತ್ತೀರ್ಣ ಹೊಂದಬಹುದಾದ ವಿದ್ಯಾರ್ಥಿಗಳ ಮೇಲೆ ಇಡಬೇಕಾದ ನಿಗಾದ ಬಗ್ಗೆ ವಿವರಿಸಿತ್ತು.
ಗುಂಪು ಅಧ್ಯಯನ, ವಿಶೇಷ ತರಗತಿ, ರಜಾ ದಿನಗಳಲ್ಲಿ ಅಧ್ಯಯನಕ್ಕೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು, ನಿತ್ಯ ನಸುಕಿನಲ್ಲಿ ವಿದ್ಯಾರ್ಥಿಗಳನ್ನು ನಿದ್ರೆಯಿಂದ ಎಬ್ಬಿಸಿ ಓದಿಗೆ ಸಜ್ಜುಗೊಳಿಸುವ ಹೊಣೆಗಾರಿಕೆಯನ್ನು ಶಿಕ್ಷಕರಿಗೆ ನೀಡಲಾಗಿತ್ತು. ಫಲಿತಾಂಶ ಸುಧಾರಣೆಗೆ ನೀಡಿದ ಈ ಮಾರ್ಗದರ್ಶನವನ್ನು ಸರಿಯಾಗಿ ಅರ್ಥೈಸಿಕೊಂಡು ಪರಿಶ್ರಮಪಡದೇ ಇರುವುದು ಶಿಕ್ಷಕರ ವೈಫಲ್ಯ ಎನ್ನುತ್ತಿದೆ ಇಲಾಖೆ.
‘ಶೇ 40ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಎಲ್ಲ ಶಿಕ್ಷಕರು ನೋಟಿಸ್‌ಗೆ ಉತ್ತರಿಸುವುದು ಕಡ್ಡಾಯ. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿ ಉತ್ತರ ಕ್ರೋಡೀಕರಿಸಲಿದ್ದಾರೆ. ವಿದ್ಯಾರ್ಥಿಗಳ ಕಲಿಕೆಯ ಮಟ್ಟ, ಗೈರು ಹಾಜರಿ, ಪ್ರಾಥಮಿಕ ಹಂತದ ಕಲಿಕೆಯಲ್ಲಿನ ಲೋಪ, ಶಿಕ್ಷಕರ ಕೊರತೆ ಸೇರಿ ಹಲವು ಬಗೆಯ ಉತ್ತರಗಳು ಬರುತ್ತಿವೆ. ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುವ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ನಿಶ್ಚಿತ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಶೂನ್ಯ ಫಲಿತಾಂಶದ ಶಾಲೆ ಮೇಲೆ ತೂಗುಕತ್ತಿ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಫಲಿತಾಂಶದ ಜಿಲ್ಲೆಯ ಮೂರು ಶಾಲೆಗಳ ವಿರುದ್ಧ ಶಿಸ್ತು ಕ್ರಮದ ಕತ್ತಿ ತೂಗುತ್ತಿದೆ. ಅನುದಾನಿತ ಹಾಗೂ ಅನುದಾನ ರಹಿತ ಶಾಲೆಯಗಳ ವಿರುದ್ಧ ಕ್ರಮ ಜರುಗಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಶೂನ್ಯ ಫಲಿತಾಂಶ ದಾಖಲಿಸಿದ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಶಾಲೆಯಿಂದ ಬರುವ ಉತ್ತರವನ್ನು ಗಮನಿಸಿ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಶಾಲೆಗೆ ನೀಡುವ ಅನುದಾನ ಹಿಂಪಡೆಯುವ ಹಾಗೂ ಅನುದಾನ ರಹಿತ ಶಾಲೆಗೆ ನೀಡಿದ ಅನುಮತಿಯನ್ನು ರದ್ದುಪಡಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.