ADVERTISEMENT

ಶಾಲಾ ಸ್ವಚ್ಛತಾ ಅಭಿಯಾನಕ್ಕೆ ಸಚಿವ ಸುರೇಶ್ ಕುಮಾರ್ ಮೆಚ್ಚುಗೆ ಟ್ವೀಟ್

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 13:46 IST
Last Updated 1 ಅಕ್ಟೋಬರ್ 2020, 13:46 IST
ಸಂತೇಬೆನ್ನೂರಿನ ಎಸ್‌ಎಸ್‌ ಜೆವಿಪಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಘೋಷ ವಾಕ್ಯ ಫಲಕ ಸಿದ್ಧಗೊಳಿಸುತ್ತಿರುವ ಶಿಕ್ಷಕ.
ಸಂತೇಬೆನ್ನೂರಿನ ಎಸ್‌ಎಸ್‌ ಜೆವಿಪಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಗುರುವಾರ ಘೋಷ ವಾಕ್ಯ ಫಲಕ ಸಿದ್ಧಗೊಳಿಸುತ್ತಿರುವ ಶಿಕ್ಷಕ.   

ಸಂತೇಬೆನ್ನೂರು: ಎರಡು ವಾರಗಳಿಂದ ಇಲ್ಲಿಯ ಎಸ್‌ಎಸ್ ಜೆವಿಪಿ ಕರ್ನಾಟಕ ಪಬ್ಲಿಕ್ ಶಾಲಾ ಶಿಕ್ಷಕರು ಇಡೀ ಶಾಲಾ ಆವರಣದ ಪರಿಪೂರ್ಣ ಸ್ವಚ್ಛತೆ ಮಾಡುತ್ತಿರುವ ಮಾಧ್ಯಮ ವರದಿ ಗಮನಿಸಿದ ಶಿಕ್ಷಣ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ನಲ್ಲಿ ‘ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕು ಸಂತೇಬೆನ್ನೂರಿನ ಕರ್ನಾಟಕ ಪಬ್ಲಿಕ್ ಶಾಲೆ ಶಿಕ್ಷಕರು ಮಾಡುತ್ತಿರುವ ಕೆಲಸ ಅನುಕರಣೀಯ. ನಮ್ಮ ಎಲ್ಲ ಶಿಕ್ಷಕರು ಈ ರೀತಿ ಶಾಲೆಯ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಳ್ಳಲಿ. ಬರುವ ಗಾಂಧಿ ಜಯಂತಿಯ ದಿನ ಇದಕ್ಕೆ ನಾಂದಿ ಹಾಡಲಿ’ ಎಂದು ಆಶಿಸಿದ್ದಾರೆ.

ಮೂರನೇ ವಾರಕ್ಕೆ ಕಾಲಿಟ್ಟ ಸ್ವಚ್ಛತಾ ಕಾರ್ಯ: ಎರಡು ವಾರಗಳಿಂದ ಕಟ್ಟಡ ಚಾವಣಿ, ಹೆಚ್ಚುವರಿ ಮರದ ಟೊಂಗೆಗಳ ಸವರುವಿಕೆ ನಡೆಯಿತು. ಎರಡನೇ ವಾರದಲ್ಲಿ ಸುಮಾರು 10 ಎಕರೆ ವಿಶಾಲ ಮೈದಾನದಲ್ಲಿದ್ದ ಅನಗತ್ಯ ಗಿಡಗಂಟಿಗಳನ್ನು ತೆಗೆಯುವಲ್ಲಿ ಶಿಕ್ಷಕರು ಶ್ರಮ ವಹಿಸಿದರು.

ADVERTISEMENT

ಮೂರನೇ ವಾರದಲ್ಲಿ ಉದ್ಯಾನ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಲು ಗುಂಡಿ ತೆಗೆಯಿಸಲಾಗಿದೆ. ಪ್ರವೇಶ ದ್ವಾರದಿಂದ ಸುಮಾರು 200 ಮೀ. ರಸ್ತೆ ಇಕ್ಕೆಲಗಳಲ್ಲಿ ಪ್ರಸಿದ್ಧ ಘೋಷವಾಕ್ಯಗಳ ಬರೆಸಲು 45 ಫಲಕಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಕಾಂಪೌಂಡ್ ಸುತ್ತ ತೆಂಗಿನ ಸಸಿ ನೆಡಲಿದ್ದೇವೆ. ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಾಲೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿರುವ ಕಾರಣ ಮತ್ತಷ್ಟು ಉತ್ತೇಜನ ದೊರೆತಿದೆ ಎನ್ನುತ್ತಾರೆ ಶಿಕ್ಷಕ ಸೈಯದ್ ಫೈಜುಲ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.