ADVERTISEMENT

ಬಡವರಿಗೆ ಅನ್ಯಾಯ ಮಾಡಿದರೆ ದೇವರು ಮೆಚ್ಚಲ್ಲ: ಮಾಡಾಳ್ ವಿರೂಪಾಕ್ಷಪ್ಪ

ಬಗರ್‌ಹುಕುಂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾಡಾಳ್‌

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 9:13 IST
Last Updated 25 ಆಗಸ್ಟ್ 2021, 9:13 IST
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿದರು.
ಚನ್ನಗಿರಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿದರು.   

ಚನ್ನಗಿರಿ: ‘ಭೂಮಿ ಇಲ್ಲದ ಬಡ ಜನರು ಅನೇಕ ವರ್ಷಗಳಿಂದ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸೇರಿದ ಭೂಮಿಗಳಲ್ಲಿ ಸಾಗುವಳಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮಾನವೀಯತೆಯಿಂದ ಅಂತಹ ಬಡವರಿಗೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯವಾಗಿದೆ. ಬಡವರಿಗೆ ಅನ್ಯಾಯ ಮಾಡಿದರೆ ದೇವರು ಕೂಡಾ ಮೆಚ್ಚುವುದಿಲ್ಲ’ ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಸಂಬಂಧ ಮಂಗಳವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಮಟ್ಟದ ಸಭೆ ನಡೆಸಿ, ಅರ್ಜಿಗಳನ್ನು ಪರಿಶೀಲಿಸಿ, ಉಪ ವಿಭಾಗಾಧಿಕಾರಿಗೆ ಕಳುಹಿಸಬೇಕು. 2005ರ ಹಿಂದೆ ನೀಡಿರುವ ದಾಖಲೆ ಅಥವಾ 80 ವರ್ಷದ ಹಿರಿಯರ ಹೇಳಿಕೆಯನ್ನು ಪರಿಗಣಿಸಿ ಹಕ್ಕುಪತ್ರ ನೀಡಲು ಶಿಫಾರಸು ಮಾಡಬೇಕು. ಇನ್ನೊಂದು ತಿಂಗಳಲ್ಲಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಅರಣ್ಯ, ಕಂದಾಯ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಕಡೆಗಣಿಸುವ ಅಧಿಕಾರಿಗಳ ಮೇಲೆ
ಶಿಸ್ತು ಕ್ರಮ ಕೈಗೊಳ್ಳಲಾಗುವುದು
ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

‘ಕಾನೂನನ್ನೇ ಮುಂದಾಗಿಸಿಕೊಂಡು ಕಾರ್ಯನಿರ್ವಹಿಸಿದರೆ ಯಾವುದೇ ಕೆಲಸವಾಗುವುದಿಲ್ಲ. ಬಡವರ ಕೆಲಸ ಮಾಡಿಕೊಟ್ಟರೆ ನಿಮ್ಮನ್ನು ನೆನೆಸುತ್ತಾರೆ. ಎಲ್ಲ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯ
ನಿರ್ವಹಿಸಿ, ಬಡ ವರ್ಗದ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಮುಂದಾಗಬೇಕು’ ಎಂದು ಸೂಚಿಸಿದರು.

ತಾಲ್ಲೂಕಿನಲ್ಲಿ 61 ಗ್ರಾಮ ಪಂಚಾಯಿತಿಗಳು ಇದ್ದು, ಪ್ರತಿ ಪಂಚಾಯಿತಿಗೆ 20 ಮನೆಗಳನ್ನು ಮಂಜೂರು ಮಾಡಲಾಗಿದೆ. ಈಗ ಪ್ರತಿ ಗ್ರಾಮ ಪಂಚಾಯಿತಿಗೆ 30 ಮನೆಗಳನ್ನು ಮತ್ತೆ ಮಂಜೂರು ಮಾಡಲಾಗುವುದು. ಹಣ ಪಡೆದುಕೊಂಡು ತಮಗೆ ಬೇಕಾದವರಿಗೆ ಮನೆ ಮಂಜೂರು ಮಾಡಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಬಡವರಿಗೆ ಅನ್ಯಾಯವಾಗದ ರೀತಿಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಮಮತಾ ಎಸ್. ಹೊಸಗೌಡರ್ ಮಾತನಾಡಿ, ‘ಕುಳೇನೂರು, ಕಾಕನೂರು, ಸಂತೇಬೆನ್ನೂರು, ದೊಡ್ಡೇರಿಕಟ್ಟೆ ಗ್ರಾಮಗಳಲ್ಲಿ ಇರುವ ಅಮೃತ್ ಮಹಲ್ ಕಾವಲ್ ಇದುವರೆಗೆ ಜಾನುವಾರು ಮೇಯಲು ಮೀಸಲಿಟ್ಟ ಪ್ರದೇಶವಾಗಿತ್ತು. ಈಗ ಈ ಕಾವಲ್‍ ಅನ್ನು ಸರ್ಕಾರ ವಶಪಡಿಸಿಕೊಂಡಿದ್ದು, ಈ ಭೂಮಿಗಳಲ್ಲಿ ಸಾಗುವಳಿ ಮಾಡಿರುವ ಸಾಗುವಳಿದಾರರಿಗೆ ಹಕ್ಕುಪತ್ರಗಳನ್ನು ಕೊಡಬಹುದಾಗಿದೆ. ಕಂದಾಯ ಇಲಾಖೆಯಲ್ಲಿ 884 ಅರ್ಜಿಗಳು ಹಾಗೂ ಅರಣ್ಯ ಇಲಾಖೆಯಲ್ಲಿ 2,819 ಅರ್ಜಿಗಳು ಸ್ವೀಕೃತಗೊಂಡಿವೆ. ಇನ್ನೊಂದು ತಿಂಗಳಲ್ಲಿ ಪರಿಶೀಲನೆ ನಡೆಸಿ, ಅರಣ್ಯ ಹಾಗೂ ಕಂದಾಯ ಇಲಾಖೆಗಳು ಜಂಟಿಯಾಗಿ ಸರ್ವೆ ಮಾಡಿ, ಸಾಗುವಳಿ ಮಾಡಿರುವ ಸಾಗುವಳಿದಾರರಿಗೆ ಹಕ್ಕುಪತ್ರ ಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ಡಿಸಿಎಫ್ ಗಾಮನಕಟ್ಟೆ, ಎಸಿಎಫ್ ಸುಬ್ರಹ್ಮಣ್ಯ ಭಟ್, ತಹಶೀಲ್ದಾರ್ ಡಾ.ಪಟ್ಟರಾಜಗೌಡ, ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.